ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: ಚೆನ್ನೈ ಎದುರು ಹೈಸ್ಕೋರಿಂಗ್‌ ಕದನದಲ್ಲಿ ಆರ್‌ಸಿಬಿಗೆ ರೋಚಕ ಜಯ!

RCB vs CSK Match Highlights: ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 52ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 2 ರನ್‌ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಆರ್‌ಸಿಬಿ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಮರಳಿತು.

ಚೆನ್ನೈ ಎದುರು ಹೈಸ್ಕೋರಿಂಗ್‌ ಕದನದಲ್ಲಿ ಆರ್‌ಸಿಬಿಗೆ ರೋಚಕ ಜಯ!

ಸಿಎಸ್‌ಕೆ ಎದುರು ಆರ್‌ಸಿಬಿಗೆ 2 ರನ್‌ ರೋಚಕ ಜಯ.

Profile Ramesh Kote May 3, 2025 11:37 PM

ಬೆಂಗಳೂರು: ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ಉಸಿರುಗಟ್ಟಿಸಿದ್ದ ಹೈಸ್ಕೋರಿಂಗ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಎರಡು ರನ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ 8ನೇ ಗೆಲುವು ದಾಖಲಿಸಿದ ಆರ್‌ಸಿಬಿ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಪುನಃ ಮರಳಿತು ಹಾಗೂ ಪ್ಲೇಆಫ್ಸ್‌ಗೆ ಇನ್ನಷ್ಟು ಸನಿಹವಾಯಿತು. ಆದರೆ, ಕೊನೆಯ ಓವರ್‌ವರೆಗೂ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಸಿಎಸ್‌ಕೆಗೆ, ವೇಗಿ ಯಶ್‌ ದಯಾಳ್‌ (Yash Dayal) ತಮ್ಮ ಬುದ್ದಿವಂತಿಕೆಯ ಬೌಲಿಂಗ್‌ನಿಂದ ವಿಲನ್‌ ಆದರು. ಕೊನೆಯ ಓವರ್‌ನಲ್ಲಿ 12 ರನ್‌ ಕೊಟ್ಟು ಆರ್‌ಸಿಬಿಗೆ ಗೆಲುವು ಖಾತ್ರಿ ಪಡಿಸಿದರು.

ಶನಿವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 214 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, 58 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮೂರನೇ ವಿಕೆಟ್‌ಗೆ ಜೊತೆಯಾಗಿದ್ದ ಆಯುಷ್‌ ಮ್ಹಾತ್ರೆ ಹಾಗೂ ರವೀಂದ್ರ ಜಡೇಜಾ, 114 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಸಿಎಸ್‌ಕೆ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು.

IPL 2025: ಆರ್‌ಸಿಬಿ ಪರ 300 ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ಈ ಹಾದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ಆಯುಷ ಮ್ಹಾತ್ರೆ 48 ಎಸೆತಗಳಲ್ಲಿ 94 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಚೊಚ್ಚಲ ಶತಕದ ಹಾದಿಯಲ್ಲಿದ್ದರು. ಆದರೆ, ಇವರನ್ನು ಲುಂಗಿ ಎನ್‌ಗಿಡಿ ಔಟ್‌ ಮಾಡಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ಇಬ್ಬನಿ ಇದ್ದ ಕಾರಣ ಆರ್‌ಸಿಬಿ ಬೌಲರ್‌ಗಳು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಎಡವಿದ್ದರು ಹಾಗೂ ಫೀಲ್ಡರ್‌ಗಳು ಕೂಡ ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು.



ಡೆತ್‌ ಓವರ್‌ಗಳಲ್ಲಿ ಆರ್‌ಸಿಬಿಗೆ ಸಕ್ಸಸ್‌

ಆಯುಷ್‌ ಮ್ಯಾತ್ರೆ ವಿಕೆಟ್‌ ಒಪ್ಪಿಸಿದ ಹೊರತಾಗಿಯೂ ರವೀಂದ್ರ ಜಡೇಜಾ (77* ರನ್‌) ಅವರ ಬ್ಯಾಟಿಂಗ್‌ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿ ಸಾಗುತ್ತಿತ್ತು. ಆದರೆ, 18ನೇ ಓವರ್‌ನಲ್ಲಿ ಸುಯಶ್‌ ಶರ್ಮಾ ಕೇವಲ 6 ರನ್‌ಗೆ ಎಂಎಸ್‌ ಧೋನಿ ಮತ್ತು ರವೀಂದ್ರ ಜಡೇಜಾ ಅವರನ್ನು ಕಟ್ಟಿ ಹಾಕಿದ್ದರು. 19ನೇ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ 14 ಕೊಟ್ಟಿದ್ದರು. ಆ ಮೂಲಕ ಕೊನೆಯ ಓವರ್‌ನಲ್ಲಿ ಸಿಎಸ್‌ಕೆಗೆ 15 ರನ್‌ ಬೇಕಿತ್ತು. 20ನೇ ಓವರ್‌ನಲ್ಲಿ ಯಶ್‌ ದಯಾಳ್‌ ನೋಬಾಲ್‌ ಎಸೆತದಲ್ಲಿ ಸಿಕ್ಸರ್‌ ಹೊಡೆಸಿಕೊಂಡರೂ ಎಂಎಸ್‌ ಧೋನಿಯನ್ನು ಔಟ್‌ ಮಾಡಿದ ಬಳಿಕ ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಅವರನ್ನು ಕಟ್ಟಿ ಹಾಕಿದರು. ಅಂತಿಮವಾಗಿ 12 ರನ್‌ ನೀಡಿದರೂ ಆರ್‌ಸಿಬಿಗೆ ಗೆಲುವು ಖಾತ್ರಿ ಪಡೆಸಿದರು. ಅಂತಿಮವಾಗಿ ಸಿಎಸ್‌ಕೆ 20 ಓವರ್‌ಗಳಿಗೆ 5 ವಿಕೆಟ್‌ಗಳಿಗೆ 211 ರನ್‌ಗಳಿಗೆ ಸೀಮಿತವಾಯಿತು.



213 ರನ್‌ ಕಲೆ ಹಾಕಿದ್ದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಜಾಕೋಬ್‌ ಬೆಥೆಲ್‌, ವಿರಾಟ್‌ ಕೊಹ್ಲಿ ಹಾಗೂ ರೊಮ್ಯಾರಿಯೊ ಶೆಫರ್ಡ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 213 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಸಿಎಸ್‌ಕೆಗೆ 214 ರನ್‌ಗಳ ಗುರಿಯನ್ನು ನೀಡಿತ್ತು.

ಕೊಹ್ಲಿ-ಬೆಥೆಲ್‌ ಜುಗಲ್‌ಬಂದಿ

ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ್ದ ವಿರಾಟ್‌ ಕೊಹ್ಲಿ ಹಾಗೂ ಜಾಕೋಬ್‌ ಬೆಥೆಲ್‌ ಮೊದಲನೇ ಓವರ್‌ನಿಂದಲೂ ಸ್ಪೋಟಕ ಬ್ಯಾಟ್‌ ಮಾಡಿದ್ದರು. ಪವರ್‌ಪ್ಲೇನಲ್ಲಿ ಕೊಹ್ಲಿ ಮತ್ತು ಬೆಥೆಲ್‌ ಅಬ್ಬರಿಸಿದರು. ಈ ಜೋಡಿ ಫೋರ್‌ ಹಾಗೂ ಸಿಕ್ಸರ್‌ಗಳ ಮೂಲಕ ಮುರಿಯದ ಮೊದಲನೇ ವಿಕೆಟ್‌ಗೆ 59 ಎಸೆತಗಳಲ್ಲಿ 97 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಈ ಇಬ್ಬರೂ ಆರ್‌ಸಿಬಿಗೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು.



ಚೊಚ್ಚಲ ಅರ್ಧಶತಕ ಸಿಡಿಸಿದ ಬೆಥೆಲ್‌

ಫಿಲ್‌ ಸಾಲ್ಟ್‌ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಜತೆ ಇನಿಂಗ್ಸ್‌ ಆರಂಭಿಸಿದ ಜಾಕೋಬ್‌ ಬೆಥೆಲ್‌, ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಇವರು ಆಡಿದ 33 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 55 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಅಬ್ಬರಿಸಿದ ವಿರಾಟ್‌ ಕೊಹ್ಲಿ ಕೂಡ ಈ ಟೂರ್ನಿಯಲ್ಲಿ ಏಳನೇ ಅರ್ಧಶತಕವನ್ನು ಸಿಡಿಸಿದರು. ಇವರು 33 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 62 ರನ್‌ ಸಿಡಿಸಿ ಔಟ್‌ ಆದರು.



ಎರಡನೇ ವೇಗದ ಅರ್ಧಶತಕ ಬಾರಿಸಿದ ಶೆಫರ್ಡ್‌

ಬೆಥೆಲ್‌, ಕೊಹ್ಲಿ ವಿಕೆಟ್‌ ಒಪ್ಪಿಸಿದ ಬಳಿಕ ಬ್ಯಾಟ್‌ ಮಾಡಿದ್ದ ದೇವದತ್‌ ಪಡಿಕ್ಕಲ್‌, ರಜತ್‌ ಪಾಟಿದಾರ್‌ ಹಾಗೂ ಜಿತೇಶ್‌ ಶರ್ಮಾ ಸ್ಪೋಟಕ ಬ್ಯಾಟ್‌ ಮಾಡಲು ಸಿಎಸ್‌ಕೆ ಬೌಲರ್‌ಗಳು ಅವಕಾಶ ನೀಡಲಿಲ್ಲ. ಮಧ್ಯಮ ಓವರ್‌ಗಳಲ್ಲಿ ಆರ್‌ಸಿಬಿ ಹಿನ್ನಡೆ ಅನುಭವಿಸಿತ್ತು. ಆದರೆ, 19ನೇ ಓವರ್‌ನಲ್ಲಿ ರೊಮ್ಯಾರಿಯೊ ಶೆಫರ್ಡ್‌, 4 ಸಿಕ್ಸರ್‌ ಹಾಗೂ ಎರಡು ಬೌಂಡರಿ ಸೇರಿದಂತೆ 33 ರನ್‌ ಸಿಡಿಸಿದ್ದರು. ನಂತರ 20ನೇ ಓವರ್‌ನಲ್ಲಿ ಶೆಫರ್ಡ್‌ ತಲಾ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಬಾರಿಸಿದ್ದರು. ಆ ಮೂಲಕ ಕೇವಲ 14 ಎಸೆತಗಳಲ್ಲಿ ಶೆಫರ್ಡ್‌, 53 ರನ್‌ಗಳನ್ನು ಬಾರಿಸಿದರು. ಆ ಮೂಲಕ ಐಪಿಎಲ್‌ ಇತಿಹಾಸದ ಎರಡನೇ ವೇಗದ ಅರ್ಧಶತಕವನ್ನು ಬಾರಿಸಿದರು.

ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 213-5 (ವಿರಾಟ್‌ ಕೊಹ್ಲಿ 63, ಜಾಕೋಬ್‌ ಬೆಥೆಲ್‌ 55, ರೊಮ್ಯಾರಿಯೊ ಶೆಫರ್ಡ್‌ 53*; ಮತೀಶ ಪತಿರಣ 36 ಕ್ಕೆ 3)

ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಿಗೆ 211-5 (ಆಯುಷ್‌ ಮ್ಹಾತ್ರೆ 94, ರವೀಂದ್ರ ಜಡೇಜಾ 77*; ಲುಂಗಿ ಎನ್‌ಗಿಡಿ 30 ಕ್ಕೆ3, ಯಶ್‌ ದಯಾಳ್‌ 41 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ರೊಮ್ಯಾರಿಯೊ ಶೆಫರ್ಡ್‌