ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಕಿಂಗ್‌ ಆಫ್‌ ಆಸ್ಟ್ರೇಲಿಯಾʼ: ವಿರಾಟ್‌ ಕೊಹ್ಲಿಯ ಟೆಸ್ಟ್‌ ಕ್ರಿಕೆಟ್‌ನ ಪ್ರಮುಖ ದಾಖಲೆಗಳು!

Virat Kohliʼs Top Number in Test: ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಮೇ 12 ರಂದು ಸೋಮವಾರ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ 14 ವರ್ಷಗಳ ಟೆಸ್ಟ್‌ ವೃತ್ತಿ ಪಯಣವನ್ನು ಅಂತ್ಯಗೊಳಿಸಿದ್ದಾರೆ. ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ ವಿರಾಟ್‌ ಕೊಹ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ ಸಂಪೂರ್ಣ ಅಂಕಿ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ವಿರಾಟ್‌ ಕೊಹ್ಲಿಯ ಟೆಸ್ಟ್‌ ಕ್ರಿಕೆಟ್‌ನ ಪ್ರಮುಖ ದಾಖಲೆಗಳು!

ವಿರಾಟ್‌ ಕೊಹ್ಲಿಯ ಟೆಸ್ಟ್‌ ಕ್ರಿಕೆಟ್‌ನ ಪ್ರಮುಖ ದಾಖಲೆಗಳು.

Profile Ramesh Kote May 12, 2025 3:04 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡದ (Indian Cricket Team) ಮಾಜಿ ನಾಯಕ ಹಾಗೂ ದಿಗ್ಗಜ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ (Virat Kohli) ಮೇ 12 ರಂದು ಸೋಮವಾರ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ತಮ್ಮ 14 ವರ್ಷಗಳ ತಮ್ಮ ದೀರ್ಘಾವಧಿ ಸ್ವರೂಪದ ಬದುಕಿನ ಪಯಣವನ್ನು ಮುಗಿಸಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದ್ದಾರೆ. ಅವರ ಸುಮಾರು ಒಂದೂವರೆ ದಶಕದ ಟೆಸ್ಟ್‌ ವೃತ್ತಿ ಜೀವನದಲ್ಲಿ ವಿರಾಟ್‌ ಕೊಹ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ವಿರಾಟ್‌ ಕೊಹ್ಲಿ ಬರೆದಿದ್ದಾರೆ. ಅಂದ ಹಾಗೆ ಪ್ರಸಕ್ತ ವರ್ಷದ ಆರಂಭದಲ್ಲಿ ಆರ್‌ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಕಳೆದ ವಾರ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಈವರ ಸಾಲಿಗೆ ಹೊಸದಾಗಿ ವಿರಾಟ್‌ ಕೊಹ್ಲಿ ಸೇರ್ಪಡೆಯಾಗಿದ್ದಾರೆ.

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಲು ಪ್ರಮುಖ 5 ಕಾರಣಗಳು!

ಟೆಸ್ಟ್‌ ಕ್ರಿಕೆಟ್‌ನಲ್ಲಿನ ವಿರಾಟ್‌ ಕೊಹ್ಲಿಯ ಪ್ರಮುಖ ಅಂಕಿಅಂಶಗಳು

ಭಾರತದ ಪರ ಅತಿ ಹೆಚ್ಚು ಟೆಸ್ಟ್‌ ರನ್‌ ಗಳಿಸಿದ ನಾಲ್ಕನೇ ಬ್ಯಾಟರ್‌

ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಆಡಿದ 123 ಪಂದ್ಯಗಳಿಂದ 46.85ರ ಸರಾಸರಿಯಲ್ಲಿ 9230 ರನ್‌ಗಳನ್ನು ಕಲೆ ಹಾಕಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನೀಲ್ ಗವಾಸ್ಕರ್ ನಂತರ ಕೊಹ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ.

30 ಟೆಸ್ಟ್‌ ಶತಕಗಳು

ವಿರಾಟ್‌ ಕೊಹ್ಲಿ ಅವರು ಭಾರತ ತಂಡದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ 30 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್ ಮತ್ತು ಸುನೀಲ್‌ ಗವಾಸ್ಕರ್ ಬಳಿಕ ಭಾರತದ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ ವಿರಾಟ್‌ ಕೊಹ್ಲಿ. ಟೆಸ್ಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕೊಹ್ಲಿ 15ನೇ ಸ್ಥಾನದಲ್ಲಿದ್ದಾರೆ.

Virat Kohli: ಭಾವುಕ ಪೋಸ್ಟ್‌ ಶೇರ್‌ ಮಾಡಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್‌ ಕೊಹ್ಲಿ

ಏಷ್ಯಾದ ಅತ್ಯಂತ ಶ್ರೇಷ್ಠ ನಾಯಕ

ಭಾರತ ಹಾಗೂ ಏಷ್ಯಾದಲ್ಲಿಯೇ ಅತ್ಯಂತ ಯಶಸ್ವಿ ಟೆಸ್ಟ್‌ ತಂಡದ ನಾಯಕ ಎಂಬ ದಾಖಲೆ ಕೂಡ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ. ಅವರ ನಾಯಕತ್ವದಲ್ಲಿ ಭಾರತ ಆಡಿದ 50 ಟೆಸ್ಟ್‌ ಪಂದ್ಯಗಳ ಪೈಕಿ 40ರಲ್ಲಿ ಗೆಲುವು ಪಡೆದಿದೆ. ಈ ಪಟ್ಟಿಯಲ್ಲಿ ಮಾಜಿ ನಾಯಕ ಎಂಎಸ್‌ ಧೋನಿ (27 ಟೆಸ್ಟ್‌ ಜಯ) ಎರಡನೇ ಸ್ಥಾನದಲ್ಲಿದ್ದಾರೆ ಹಾಗೂ ಮೂರನೇ ಸ್ಥಾನದಲ್ಲಿ ಮಿಜ್ಬಾ ಉಲ್‌ ಹಕ್‌ (26 ಟೆಸ್ಟ್‌ ಜಯ) ಇದ್ದಾರೆ. ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌. (53 ಟೆಸ್ಟ್‌ ಜಯ).



ವಿಶ್ವದ ಎರಡನೇ ಅದ್ಭುತ ಟೆಸ್ಟ್‌ ನಾಯಕ

ವಿರಾಟ್‌ ಕೊಹ್ಲಿ ಟೆಸ್ಟ್‌ ತಂಡದ ನಾಯಕನಾಗಿ 58ರಷ್ಟು ಗೆಲುವಿನ ಸರಾಸರಿಯನ್ನು ಹೊಂದಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನ ಅತ್ಯಂತ ಹೆಚ್ಚು ಗೆಲುವಿನ ಸರಾಸರಿಯನ್ನು ಹೊಂದಿರುವ ಎರಡನೇ ನಾಯಕ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ((62.33) ಅಗ್ರ ಸ್ಥಾನದಲ್ಲಿದ್ದಾರೆ.



ನಾಯಕನಾಗಿ ಮೂರನೇ ಸ್ಥಾನ

ನಾಯಕನಾಗಿ ದ್ವಿಪಕ್ಷೀಯ ಟೆಸ್ಟ್‌ ಸರಣಿಯಲ್ಲಿ 600ಕ್ಕೂ ಅಧಿಕ ರನ್‌ ಗಳಿಸಿದ ಮೂರನೇ ಆಟಗಾರ ಎಂಬ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ. ಡಾನ್‌ ಬ್ರಾಡ್ಮನ್‌ ಹಾಗೂ ಸುನೀಲ್‌ ಗವಾಸ್ಕರ್‌ ಈ ದಾಖಲೆ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.



ನಾಯಕನಾಗಿ ಭಾರತದ ಪರ ಅತಿ ಹೆಚ್ಚು ಟೆಸ್ಟ್‌ ರನ್‌

ಭಾರತ ತಂಡದ ನಾಯಕನಾಗಿ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ. ಅವರು ಭಾರತ ಟೆಸ್ಟ್‌ ತಂಡದ ನಾಯಕನಾಗಿ 5864 ರನ್‌ಗಳನ್ನು ಬಾರಿಸಿದ್ದಾರೆ. ಒಟ್ಟಾರೆ ನಾಯಕರ ಪಟ್ಟಿಯಲ್ಲಿ ಗ್ರೇಮ್‌ ಸ್ಮಿತ್‌, ರಿಕಿ ಪಾಂಟಿಂಗ್‌ ಹಾಗೂ ಅಲಾನ್‌ ಬಾರ್ಡನ್‌ ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿದ್ದಾರೆ.



ಏಳು ದ್ವಿಶತಕ ಬಾರಿಸಿರುವ ವಿರಾಟ್‌ ಕೊಹ್ಲಿ

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ 7 ದ್ವಿಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಡಾನ್‌ ಬ್ರಾಡ್ಮನ್‌ (12 ದ್ವಿಶತಕ) ಅಗ್ರ ಸ್ಥಾನದಲ್ಲಿದ್ದಾರೆ.

ಸತತ ಎರಡು ದ್ವಿಶತಕ ಸಿಡಿಸಿರುವ ಕೊಹ್ಲಿ

2017ರಲ್ಲಿ ಶ್ರೀಲಂಕಾ ವಿರುದ್ಧ ವಿರಾಟ್‌ ಕೊಹ್ಲಿ ಸತತ ಎರಡು ಬಾರಿ ದ್ವಿಶತಕವನ್ನು ಬಾರಿಸಿದ್ದರು. ಸತತ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಸತತ ಎರಡು ದ್ವಿಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ವಿನೋದ್‌ ಕಾಂಬ್ಳಿ ಹೆಸರಿನಲ್ಲಿದೆ. ಈ ಪಟ್ಟಿಗೆ ಯಶಸ್ವಿ ಜೈಸ್ವಾಲ್‌ ಕೂಡ 2024ರಲ್ಲಿ ಸೇರ್ಪಡೆಯಾಗಿದ್ದರು.



ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದ ಕಿಂಗ್‌

ಆಸ್ಟ್ರೇಲಿಯಾ ನೆಲದಲ್ಲಿ ವಿರಾಟ್‌ ಕೊಹ್ಲಿ ಏಳು ಶತಕಗಳನ್ನು ಬಾರಿಸಿದ್ದಾರೆ. ಜ್ಯಾಕ್‌ ಹಬ್ದ್‌ ಬಳಿಕ ಆಸೀಸ್‌ ನಾಡಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಎರಡನೇ ವಿದೇಶಿ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ ವಿರಾಟ್‌ ಕೊಹ್ಲಿ.

ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲಿ ಕೊಹ್ಲಿ ಪ್ರಾಬಲ್ಯ

ವಿರಾಟ್‌ ಕೊಹ್ಲಿ ತಮ್ಮ ಟೆಸ್ಟ್‌ ವೃತ್ತಿ ಜೀವನದ ಅವಧಿಯಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಗಳಲ್ಲಿ ಅತಿ ಹೆಚ್ಚು ಬಾರಿ 500ಕ್ಕೂ ಅಧಿಕ ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅಗ್ರ ಸ್ಥಾನದಲ್ಲಿದ್ದಾರೆ.



ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಗೆದ್ದ ಮೊದಲ ಏಷ್ಯಾ ನಾಯಕ

ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ ಮೊದಲ ಏಷ್ಯಾದ ನಾಯಕ ಎಂಬ ದಾಖಲೆ ಕೂಡ ವಿರಾಟ್‌ ಕೊಹ್ಲಿಯ ಹೆಸರಿನಲ್ಲಿದೆ. 2018-19ರ ಸಾಲಿನಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯನ್ನು ಗೆದ್ದಿತ್ತು. ನಂತರ ಅಜಿಂಕ್ಯ ರಹಾನೆ ನಾಯಕತ್ವದಲ್ಲಿಯೂ ಭಾರತ, ಕಾಂಗರೂ ನಾಡಿನಲ್ಲಿ ಟೆಸ್ಟ್‌ ಸರಣಿಯನ್ನು ಗೆದ್ದಿತ್ತು.