ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ (Sanjay manjrekar) ಶ್ಲಾಘಿಸಿದ್ದಾರೆ. ಅಲ್ಲದೆ ಭಾರತ ಟಿ20 ತಂಡದಿಂದ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿರುವುದು ಅನ್ಯಾಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸ್ಪೋರ್ಟ್ಸ್ ಸ್ಟಾರ್ ಜೊತೆ ನಡೆದ ವಿಶ್ಲೇಷಣಾತ್ಮಕ ಚರ್ಚೆಯಲ್ಲಿ ಸಂಜಯ್ ಮಾಂಜ್ರೇಕರ್ ಅವರು ಶ್ರೇಯಸ್ ಅಯ್ಯರ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರೀಯ ಆಯ್ಕೆದಾರರಿಂದ ತಮಗೆ ಅನ್ಯಾಯವಾಗಿದೆ ಎಂಬ ಭಾವನೆ ಶ್ರೇಯಸ್ ಅಯ್ಯರ್‌ಗೆ ಇದ್ದರೆ, ಅವರ ಪ್ರಸ್ತುತ ಫಾರ್ಮ್‌ನ್ನು ಗಮನಿಸಿದರೆ ಆ ಭಾವನೆ ಸಂಪೂರ್ಣ ನ್ಯಾಯಸಮ್ಮತವೆಂದು ಮಾಂಜ್ರೇಕರ್ ಹೇಳಿದ್ದಾರೆ.
"ಬಿಸಿಸಿಐ ವಾರ್ಷಿಕ ಗುತ್ತಿಗೆಯನ್ನು ಶ್ರೇಯಸ್ ಅಯ್ಯರ್‌ಗೆ ನೀಡಬಾರದೆಂದು ಅವರು ನಿರ್ಧರಿಸಿದ್ದಾರೆ ಹಾಗೂ ಇದು ಖಚಿತವಾಗಿಯೂ ಬಲಗೈ ಬ್ಯಾಟ್ಸ್‌ಮನ್‌ಗೆ ನೋವುಂಟು ಮಾಡಿದೆ. ಆದರೆ, ಅವರು ಮುಂಬೈ ತಂಡದ ಪರ ಸಂಗತಿಗಳನ್ನು ಬದಲಿಸಿದ್ದಾರೆ ಹಾಗೂ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಐಪಿಎಲ್ ಟೂರ್ನಿಯಲ್ಲಿ ಪ್ರದರ್ಶನವನ್ನು ತೋರಿದ್ದಾರೆ, ಆದರೂ ಅವರು ಇನ್ನೂ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ," ಎಂದು ಸಂಜಯ್ ಮಾಂಜ್ರೇಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಶತಕಕ್ಕೂ ಮುನ್ನ ತಿಲಕ್ ವರ್ಮಾಗೆ ನೀಡಿದ್ದ ಸಲಹೆಯನ್ನು ಬಹಿರಂಗಪಡಿಸಿದ ಹಾರ್ದಿಕ್ ಪಾಂಡ್ಯ!
ಭಾರತ ತಂಡದಿಂದ ಕೈ ಬಿಟ್ಟಿರುವುದು ಶ್ರೇಯಸ್ ಅಯ್ಯರ್‌ಗೆ ಅನ್ಯಾಯ
ಸರಿಯಾದ ಸಂವಹನದ ಕೊರತೆ ಹಾಗೂ ನಿರಂತರ ಫಿಟ್ನೆಸ್ ಸಮಸ್ಯೆಗಳಿಂದ ತಾನು ಭಾರತ ತಂಡದಲ್ಲಿ ಹಾಗೂ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದ್ದೇನೆ ಎಂದು ಈ ಹಿಂದೆ ಶ್ರೇಯಸ್ ಅಯ್ಯರ್ ಬಹಿರಂಗಪಡಿಸಿದ್ದರು.
ಆದರೆ ನಾಯಕತ್ವದಲ್ಲಿನ ತಮ್ಮ ಸಾಧನೆಗಳು ಸಾಮರ್ಥ್ಯವನ್ನು ಇನ್ನಷ್ಟು ದೃಢಪಡಿಸುತ್ತಿವೆ. 2020ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲ ಬಾರಿ ಐಪಿಎಲ್ ಫೈನಲ್‌ಗೆ ಕೊಂಡೊಯ್ದರು. ಬಳಿಕ 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ ಅವರು, 2026ರ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರಿಸಲು ಯಶಸ್ವಿಯಾಗಿದ್ದಾರೆ.
Ayush Mhatre: ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೊಂದು ಆಘಾತ, ಐಪಿಎಲ್ ಟೂರ್ನಿಯಿಂದ ಯುವ ಬ್ಯಾಟ್ಸ್‌ಮನ್ ಔಟ್!
“ಆ ರೀತಿಯ ಪ್ರದರ್ಶನವಿದ್ದರೂ ಕೂಡ ಭಾರತ ತಂಡದಲ್ಲಿ ಸ್ಥಾನ ಸಿಗದಿದ್ದರೆ, ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್ ಅವರಂತಹ ಆಟಗಾರನಿಗೆ ಇದು ನಿಜವಾಗಿಯೂ ಅನ್ಯಾಯ,” ಎಂದು ಹೇಳಿದ ಸಂಜಯ್ ಮಾಂಜ್ರೇಕರ್, “ತಮ್ಮ ವಿರುದ್ಧ ಯಾರಾದರೂ ಈ ರೀತಿ ನಡೆದುಕೊಳ್ಳುತ್ತಿದ್ದರೆ, ಇದರ ಬಗ್ಗೆ ಯಾರ ಮೇಲಾದರೂ ಅಸಮಾಧಾನ ಇದ್ದರೆ, ಅದು ಸಹಜ ಮತ್ತು ನ್ಯಾಯಸಮ್ಮತವೇ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಸೇರಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಪ್ರದರ್ಶನ
ಪಂಜಾಬ್ ಕಿಂಗ್ಸ್ ಪರ ಶ್ರೇಯಸ್ ಅಯ್ಯರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಇಲ್ಲಿಯವರೆಗೂ 52ರ ಸರಾಸರಿ ಮತ್ತು 182.46ರ ಸ್ಟ್ರೈಕ್ ರೇಟ್‌ನಲ್ಲಿ 208 ರನ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಅವರು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂರು ಅರ್ಧಶತಕಗಳ ರನ್ ಚೇಸ್‌ನಲ್ಲಿ ಮೂಡಿ ಬಂದಿರುವುದು ವಿಶೇಷ.
ತಂಡದ ನಾಯಕತ್ವದ ಒತ್ತಡದ ಹೊರತಾಗಿಯೂ ಅವರು ಈ ಟೂರ್ನಿಯಲ್ಲಿ ತಮ್ಮ ಅಸಾಧಾರಣ ಪ್ರದರ್ಶನವನ್ನು ಕಾಯ್ದುಕೊಂಡಿದ್ದಾರೆ. ಏಪ್ರಿಲ್ 25ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂದಿನ ಪಂದ್ಯವನ್ನು ಆಡಲು ರಾಜಧಾನಿ ನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.