ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Modi Government: ಚಾರಿತ್ರಿಕ ವಿಶ್ವಕಪ್‌ ಗೆದ್ದ ವನಿತೆಯರು- ಕ್ರೀಡಾ ಕ್ಷೇತ್ರಕ್ಕೆ ಮೋದಿ ಸರಕಾರದ ಪುಷ್ಟಿ

India Womens Cricket Team: ವಿಶ್ವಕಪ್‌ನಲ್ಲಿ ಭಾರತೀಯ ಮಹಿಳೆಯರ ಪ್ರಾಬಲ್ಯವು, ದೇಶದಲ್ಲಿ ಕ್ರೀಡೆಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಸರಕಾರ ನೀಡುತ್ತಿರುವ ಸಕಾರಾತ್ಮಕ ಬೆಂಬಲ, ಪೂರಕವಾಗಿರುವ ಕ್ರೀಡಾ ನೀತಿಗಳು, ಒದಗಿಸುತ್ತಿರುವ ಸೌಕರ್ಯಗಳು ಉತ್ತಮ ಫಲಿತಾಂಶ ನೀಡುತ್ತಿರುವುದಕ್ಕೆ ಸಾಕ್ಷಿಯೂ ಆಗಿದೆ. ಹಾಗಾದರೆ ಮೋದಿ ಸರಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಏನು? ನೋಡೋಣ.

ವಿಶ್ವಕಪ್‌ ಗೆದ್ದ ವನಿತೆಯರು- ಕ್ರೀಡಾ ಕ್ಷೇತ್ರಕ್ಕೆ ಮೋದಿ ಸರಕಾರದ ಪುಷ್ಟಿ

ಮಹಿಳಾ ಕ್ರಿಕೆಟ್‌ ತಂಡ ಚಾರಿತ್ರಿಕ ವಿಶ್ವಕಪ್‌ ಗೆದ್ದ ಕ್ಷಣ(ಸಂಗ್ರಹ ಚಿತ್ರ) -

Rakshita Karkera Rakshita Karkera Nov 5, 2025 7:43 PM

ನವದೆಹಲಿ: ಪ್ರತಿಷ್ಠಿತ " ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ 2025ʼʼ ಟೂರ್ನಮೆಂಟ್‌ನ ಅಂತಿಮ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್‌ ತಂಡವು ಮೊಟ್ಟ ಮೊದಲ ಬಾರಿಗೆ ಚಾಂಪಿಯನ್‌ ಆಗಿದೆ. ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಪಂದ್ಯಾವಳಿಯ 52 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದೆ(India Womens Cricket Team).

ಈ ಹಿನ್ನೆಲೆಯಲ್ಲಿ ತಂಡವನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿಯರು, ಸಾಮಾಜಿಕ ಜಾಲತಾಣ "ಎಕ್ಸ್‌ ʼ ನಲ್ಲಿ ಪ್ರಶಂಸಿಸಿದ್ದಾರೆ. " ಭಾರತೀಯ ತಂಡವು ಐಸಿಸಿ ಮಹಿಳೆಯರ ವಿಶ್ವಕಪ್‌ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ವಿಶೇಷ ಕೌಶಲ, ಪ್ರತಿಭೆ, ಆತ್ಮ ವಿಶ್ವಾಸದಿಂದ ಟೂರ್ನಮೆಂಟ್‌ ಉದ್ದಕ್ಕೂ ತಂಡ ಮುನ್ನಡೆದಿತ್ತು. ಸಾಂಘಿಕ ಪ್ರದರ್ಶನ ನೀಡಿ ಚಾರಿತ್ರಿಕ ಗೆಲುವು ಸಾಧಿಸಿರುವ ಆಟಗಾರರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಗೆಲುವು ಭವಿಷ್ಯದ ಚಾಂಪಿಯನ್ನರಿಗೂ ಪ್ರೇರಣೆಯಾಗಲಿದೆʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ವಿಜೇತ ತಂಡವನ್ನು ನವೆಂಬರ್‌ 5ರಂದು ಖುದ್ದಾಗಿ ಭೇಟಿಯಾಗಿ ಅಭಿನಂದಿಸಲಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತೀಯ ಮಹಿಳೆಯರ ಪ್ರಾಬಲ್ಯವು, ದೇಶದಲ್ಲಿ ಕ್ರೀಡೆಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಸರಕಾರ ನೀಡುತ್ತಿರುವ ಸಕಾರಾತ್ಮಕ ಬೆಂಬಲ, ಪೂರಕವಾಗಿರುವ ಕ್ರೀಡಾ ನೀತಿಗಳು, ಒದಗಿಸುತ್ತಿರುವ ಸೌಕರ್ಯಗಳು ಉತ್ತಮ ಫಲಿತಾಂಶ ನೀಡುತ್ತಿರುವುದಕ್ಕೆ ಸಾಕ್ಷಿಯೂ ಆಗಿದೆ. ಹಾಗಾದರೆ ಮೋದಿ ಸರಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಏನು? ನೋಡೋಣ.

ಈ ಸುದ್ದಿಯನ್ನೂ ಓದಿ: Harmanpreet-Amanjot: ಹರ್ಮನ್‌ಪ್ರೀತ್, ಅಮನ್‌ಜೋತ್‌ಗೆ 11 ಲಕ್ಷ ರೂ. ಬಹುಮಾನ ಘೋಷಿಸಿದ ಪಂಜಾಬ್ ಕ್ರಿಕೆಟ್ ಮಂಡಳಿ

women world cup (1)

ಸಮಾನ ವೇತನ, ಮಾನ್ಯತೆ, ಉತ್ತಮ ಫಲಿತಾಂಶ:

ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವಕಪ್‌ ಗೆದ್ದ ಬಳಿಕ ಬಿಸಿಸಿಐ ಮಹಿಳಾ ತಂಡಕ್ಕೆ 51 ಕೋಟಿ ರುಪಾಯಿ ನಗದು ಬಹುಮಾನವನ್ನು ಘೋಷಿಸಿದೆ. ಕಪ್‌ ಗೆದ್ದಿರುವುದಕ್ಕೆ ಪಂದ್ಯಾವಳಿಯ ಬಹುಮಾನವಾಗಿಯೂ 41.77 ಕೋಟಿ ರುಪಾಯಿ ಲಭಿಸಿದೆ. 2022ರ ಆವೃತ್ತಿಗೆ ಹೋಲಿಸಿದರೆ ಇದು ನಾಲ್ಕು ಪಟ್ಟು ಹೆಚ್ಚು. ಬಿಸಿಸಿಐ ಮಹಿಳಾ ಕ್ರಿಕೆಟ್‌ ಅನ್ನು ಸುಧಾರಿಸಲು ಅತ್ಯುತ್ತಮ ತರಬೇತಿಯನ್ನು ಒದಗಿಸಿತ್ತು. ಪೂರಕ ಸಿಬ್ಬಂದಿ, ವಿಶ್ಲೇಷಕರ ನೆರವನ್ನು ಕಲ್ಪಿಸಿತ್ತು. ಮಹಿಳಾ ಕ್ರಿಕೆಟ್‌ ಪಟುಗಳ ಸಂಬಳವನ್ನು ಏರಿಸಲಾಗಿದೆ. ವಿಶೇಷವೇನೆಂದರೆ ಐಸಿಸಿ ಮಹಿಳೆಯರ ಟೂರ್ನಮೆಂಟ್‌ ಬಹುಮಾನದ ಮೊತ್ತವು ಪುರುಷರ ಟೂರ್ನಮೆಂಟಿಗಿಂತಲೂ ಹೆಚ್ಚು.

pm modi

2022ರ ಅಕ್ಟೋಬರ್‌ನಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ 15ನೇ ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ತೆಗೆದುಕೊಂಡು, ಪುರುಷರು ಮತ್ತು ಮಹಿಳಾ ಕ್ರಿಕೆಟ್‌ ಪಟುಗಳಿಗೆ ಸಮಾನ ವೇತನವನ್ನು ಅಂಗೀಕರಿಸಿತ್ತು.‌ ಇದೇ ಮೊದಲ ಬಾರಿಗೆ ಭಾರತದಲ್ಲಿ ಮಹಿಳಾ ಆಟಗಾರರು ಪುರುಷರಿಗೆ ಸಮಾನವಾಗಿ ವೇತನ ಪಡೆದಿದ್ದರು. ಇದೊಂದು ಐತಿಹಾಸಿಕ ನಿರ್ಧಾರವಾಗಿತ್ತು. ಇದರ ಪರಿಣಾಮವಾಗಿ ಮಹಿಳೆಯರಿಗೆ ಕ್ರಿಕೆಟ್‌ ಆಟವನ್ನು ಪೂರ್ಣಪ್ರಮಾಣದ ವೃತ್ತಿಯಾಗಿ ಸ್ವೀಕರಿಸಲು ಉತ್ತೇಜನ ಸಿಕ್ಕಿದಂತಾಗಿದೆ. ಈ ಮೂಲಕ ಬಿಸಿಸಿಐ ಸಮಾನ ವೇತನ ಪಾವತಿಯ ನ್ಯಾಯವನ್ನು ಕೇವಲ ಚರ್ಚೆಗೆ ಸೀಮಿತಗೊಳಿಸದೆ, ಕಾರ್ಯರೂಪಕ್ಕೂ ತಂದಿದೆ. ಮಹಿಳಾ ಆಟಗಾರರು ಆತ್ಮವಿಶ್ವಾಸದಿಂದ ಆಡಲು ಮತ್ತು ಕ್ರಿಕೆಟ್‌ ಅನ್ನು ವೃತ್ತಿಯಾಗಿ ಸ್ವೀಕರಿಸಲು, ಸಮಾನ ಗೌರವ ಮತ್ತು ಅವಕಾಶ ಪಡೆಯಲು ಈಗ ಸಾಧ್ಯವಾಗಿದೆ. ಇದರಿಂದ ಭಾರತೀಯ ಮಹಿಳೆಯರ ಕ್ರಿಕೆಟ್‌ ಈಗ ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಕ್ಕೇರಿದೆ.

ಮಹಿಳಾ ಕ್ರೀಡಾಪಟುಗಳಿಗೆ 2018ರಲ್ಲಿ ಫಿಟ್ನೆಸ್‌ ಟ್ರೈನಿಂಗ್‌ ಅನ್ನು ಕಡ್ಡಾಯಗೊಳಿಸಲಾಯಿತು. 2019ರಲ್ಲಿ ಮಹಿಳಾ ಆಟಗಾರರಿಗೆ ಗುತ್ತಿಗೆಗಳನ್ನು ನವೀಕರಿಸಲಾಯಿತು. ವ್ಯವಸ್ಥೆಗೆ ವೃತ್ತಿಪರತೆ ಬಂದಿತು. 2025ರ ವೇಳೆಗೆ ಗುತ್ತಿಗೆ ಅಧಾರಿತ ಆಟಗಾರರು ವಾರ್ಷಿಕ 75 ಲಕ್ಷ ರುಪಾಯಿಗಳಿಂದ 3 ಕೋಟಿ ರುಪಾಯಿ ತನಕ ಗಳಿಸುತ್ತಿದ್ದಾರೆ.

PM Narendra Modi

ಕ್ರೀಡಾ ವಲಯದ ಮೂಲಸೌಕರ್ಯ ಅಭಿವೃದ್ಧಿ:

ಈ ಹಿಂದೆ ಭಾರತೀಯ ಮಹಿಳಾ ಕ್ರಿಕೆಟ್‌ ತಂಡವು ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳಿಗಿಂತಲೂ ಹಿಂದುಳಿದಿತ್ತು. ತಂಡವನ್ನು ಅಭಿವೃದ್ಧಿಪಡಿಸಲು 2023ರಲ್ಲಿ ಮಹಿಳೆಯರ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್)‌ ಅನ್ನು ಆರಂಭಿಸಲಾಯಿತು. ಡಬ್ಲ್ಯುಪಿಎಲ್‌ ನಿಂದ ಭಾರತೀಯ ಆಟಗಾರರಿಗೆ ವಿಶ್ವದ ನಾನಾ ಭಾಗಗಳ ಉತ್ತಮ ಕ್ರೀಡಾಪಟುಗಳ ಜತೆಗೆ ಆಡುವ ಅವಕಾಶ ಸಿಕ್ಕಿತು. ಅವರ ಆತ್ಮ ವಿಶ್ವಾಸವನ್ನು ವೃದ್ಧಿಸಿತು. ಡಬ್ಲ್ಯುಪಿಎಲ್‌ನಿಂದ ತಂಡದ ನಿರ್ವಹಣೆಗೂ ಆದ್ಯತೆ ಲಭಿಸಿತು. 2017ರ ತನಕ ಟೀಮ್‌ ಇಂಡಿಯಾದಲ್ಲಿ ದಿಲ್ಲಿ, ಮುಂಬಯಿ ಮತ್ತು ದಕ್ಷಿಣ ಭಾರತದ ಆಟಗಾರರ ಪ್ರಾಬಲ್ಯವಿತ್ತು. ಬಿಸಿಸಿಐನ ನೂತನ ಸ್ಕಾಟಿಂಗ್‌ ಸಿಸ್ಟಮ್‌ ಪರಿಣಾಮ ರಾಯಗಢ, ಜಿಸ್ಸಾರ್‌, ಆಗ್ರಾ, ಸಿಲ್‌ಚಾರ್‌ ಮೊದಲಾದ ಸಣ್ಣ ಪಟ್ಟಣಗಳಿಂದಲೂ ಆಟಗಾರರು ಬರುವಂತಾಗಿದೆ. ಆರ್ಥಿಕ ಭದ್ರತೆಯೂ ಸಿಕ್ಕಿರುವುದರಿಂದ ಆಟಗಾರರು ಇದೀಗ ಸಂಪೂರ್ಣವಾಗಿ ಆಟಕ್ಕೆ ಗಮನ ಕೊಡುವಂತಾಗಿದೆ. ಇದರ ಫಲಿತಾಂಶವೂ ಕಂಡುಬರುತ್ತಿದೆ.

ಭಾರತ ತಂಡದ ಗೆಲುವು, ಸಮಾನತೆಯ ಗೆಲುವನ್ನೂ ಬಿಂಬಿಸಿದೆ. ಅಮೆರಿಕದಂತ ದೇಶದಲ್ಲೂ ಅಲ್ಲಿನ ಮಹಿಳಾ ಫುಟ್ಬಾಲ್‌ ತಂಡವು ಸಮಾನ ವೇತನಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವಾಗ ಬಿಸಿಸಿಐ ಸಕಾರಾತ್ಮಕ ಬದಲಾವಣೆ ತಂದು ಮಾದರಿಯಾಗಿದೆ. ಇದರೊಂದಿಗೆ ಭಾರತವು ಹೊಸ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಕಳೆದ 11 ವರ್ಷಗಳಲ್ಲಿ ದೇಶದ ಕ್ರೀಡಾ ವಲಯದ ಕ್ರಾಂತಿಕಾರಕ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಕ್ರೀಡಾ ಮೂಲಸೌಕರ್ಯ ಪ್ರಗತಿಗೆ ಹೂಡಿಕೆ ಹೆಚ್ಚಿಸಲಾಗಿದೆ. 2025-26ರ ಸಾಲಿನಲ್ಲಿ ದಾಖಲೆಯ 3,794 ಕೋಟಿ ರುಪಾಯಿಗಳನ್ನು ಕ್ರೀಡಾ ಸಚಿವಾಲಯಕ್ಕೆ ಮಂಜೂರು ಮಾಡಲಾಗಿತ್ತು. 2014 ಕ್ಕೆ ಹೋಲಿಸಿದರೆ 130.9 ಪರ್ಸೆಂಟ್‌ ಹೆಚ್ಚಳವಾಗಿದೆ. 323 ನೂತನ ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು 3,074 ಕೋಟಿ ರುಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.

pm modi met cricket team

ಈ ಸುದ್ದಿಯನ್ನೂ ಓದಿ: ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಗೌತಮ್‌ ಗಂಭೀರ್‌ ಕಾರಣ?

ಖೇಲೋ ಇಂಡಿಯಾ‌ ಸಕಾರಾತ್ಮಕ ಎಫೆಕ್ಟ್:

ಖೇಲೊ ಇಂಡಿಯಾ ಮತ್ತು ಒಲಿಂಪಿಕ್‌ ಪದಕ ಗೆಲ್ಲುವ ಗುರಿ ಯೋಜನೆಯು ಭಾರತದ ಇಡೀ ಕ್ರೀಡಾ ವಾತಾವರಣವನ್ನು (ಟಾಪ್ಸ್) ಮೇಲ್ದರ್ಜೆಗೇರಿಸಿದೆ. ‌ 2014ರ ಜುಲೈನಲ್ಲಿ ಜಾರಿಯಾದ ಟಾಪ್ಸ್‌ ಯೋಜನೆಯ ಅಡಿಯಲ್ಲಿ ಪದಕ ಗೆಲ್ಲುವ ಸಂಭವನೀಯ ಕ್ರೀಡಾಪಟುಗಳಿಗೆ ತರಬೇತಿಯ ಜತೆಗೆ, ಮಾಸಿಕ 50,000 ಸ್ಟೈಫಂಡ್‌ ನೀಡಲಾಗುತ್ತಿದೆ. 2017ರಲ್ಲಿ ಖೇಲೋ ಇಂಡಿಯಾ ಅಡಿಯಲ್ಲಿ ಯುವ ಕ್ರೀಡೆ, ಯುನಿವರ್ಸಿಟಿ ಕ್ರೀಡಾಕೂಟ, ಪ್ಯಾರಾ ಗೇಮ್ಸ್‌ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ. 2022ರ ಏಷ್ಯನ್‌ ಗೇಮಸ್‌ನಲ್ಲಿ ಭಾರತವು 107 ಪದಕಗಳನ್ನು ಗೆದ್ದಿತ್ತು. ಇದರಲ್ಲಿ 28 ಬಂಗಾರದ ಪದಕಗಳು ಇತ್ತು. ಖೇಲೊ ಇಂಡಿಯಾದ ಆಟಗಾರರು ಇದುವರೆಗೆ 6,000 ರಾಷ್ಟ್ರೀಯ ದಾಖಲೆಗಳು ಮತ್ತು 1,400 ಅಂತಾರಾಷ್ಟ್ರೀಯ ದಾಖಲೆಗಳನ್ನು ಮಾಡಿದ್ದಾರೆ. ಭಾತತವು ಟೋಕಿಯೊ ಒಲಿಂಪಿಕ್‌ನಲ್ಲಿ 7 ಪದಕಗಳನ್ನು ಗೆದ್ದಿದೆ. ಪ್ಯಾರಿಸ್‌ ಒಲಿಂಪಿಕ್‌ನಲ್ಲಿ 6 ಪದಕಗಳು ಸಿಕ್ಕಿವೆ. ಪ್ಯಾರಿಸ್‌ ಪ್ಯಾರಾಲಂಪಿಕ್ಸ್‌ನಲ್ಲಿ 29 ಪದಕಗಳನ್ನು ಗೆದ್ದಿರುವುದು ವಿಶೇಷ. ಈಗ 1,057 ಖೇಲೊ ಇಂಡಿಯಾ ಸೆಂಟರ್‌ಗಳು ಮತ್ತು 34 ಸ್ಟೇಟ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಇವೆ. 11,000 ಯೂತ್‌ ಕ್ಲಬ್‌ಗಳಿಗೆ ಕ್ರೀಡಾ ಪರಿಕರಗಳನ್ನು ಒದಗಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯಿದೆ 2025 ಕ್ರಾಂತಿಕಾರಕ ಸುಧಾರಣಾ ಕ್ರಮವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಕ್ರೀಡಾ ಕ್ಷೇತ್ರವು ಕಳೆದ 11 ವರ್ಷಗಳಲ್ಲಿ ಸಂಪೂರ್ಣ ಸಕಾರಾತ್ಮಕವಾಗಿ ಬದಲಾಗಿದೆ. ಉತ್ತಮ ಫಲಿತಾಂಶ ನೀಡುತ್ತಿದೆ. ಹೊಸ ಪೀಳಿಗೆಯ, ಆತ್ಮವಿಶ್ವಾಸ ಭರಿತ ಕ್ರೀಡಾಪಟುಗಳು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿಯನ್ನು ಬೆಳಗುತ್ತಿದ್ದಾರೆ.