ರಾಜ್‌ಗಿರ್ (ಬಿಹಾರ): ನಾಯಕ ಹರ್ಮನ್‌ಪ್ರೀತ್ ಸಿಂಗ್(Harmanpreet Singh) ಬಾರಿಸಿದ ಹ್ಯಾಟ್ರಿಕ್ ಗೋಲು ಮತ್ತು ತಂಡದ ಸರ್ವಾಂಗೀಣ ಪ್ರದರ್ಶನ ನೆರವಿನಿಂದ ಶುಕ್ರವಾರ ಇಲ್ಲಿ ಆರಂಭಗೊಂಡ ಏಷ್ಯಾ ಕಪ್(Hockey Asia Cup) ಟೂರ್ನಿಯಲ್ಲಿ ಮೂರು ಬಾರಿಯ ಚಾಂಪಿಯನ್ ಭಾರತ(IND vs CHN) ಪುರುಷರ ಹಾಕಿ ತಂಡವು ಗೆಲುವಿನ ಶುಭಾರಂಭ ಮಾಡಿದೆ. ತನಗಿಂತ ಕೆಳ ಕ್ರಮಾಂಕದ ಚೀನಾ ತಂಡದ ವಿರುದ್ಧ 4-3 ಗೋಲ್ ಅಂತರದಿಂದ ಗೆದ್ದುಬೀಗಿತು.
ತೀವ್ರ ಪೈಪೋಟಿಯಿಂದ ಕೂಡಿದ ಈ ಪಂದ್ಯದಲ್ಲಿ ಚೀನಾ ಆರಂಭಿಕ ಮುನ್ನಡೆ ಸಾಧಿಸಿರೂ ಆ ಬಳಿಕ ಹರ್ಮನ್‌ಪ್ರೀತ್ ಸಿಂಗ್ ಅವರು ಪೆನಾಲ್ಟಿ ಕಾರ್ನರ್‌ನಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಭಾರತ ಗೆಲುವಿನ ನಗೆ ಬೀರಿತು.
ಚೀನಾ ಮೊದಲ ಕ್ವಾರ್ಟರ್‌ನ 12ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಿತು. ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಡು ಶಿಹಾವೊ ಗೋಲು ಬಾರಿಸುವ ಮೂಲಕ ಚೀನಾಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಆದರೆ ದ್ವಿತೀಯ ಕ್ವಾರ್ಟರ್‌ನಲ್ಲಿ ತಿರುಗಿಬಿದ್ದ ಭಾರತ ಸತತವಾಗಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಮೊದಲ ಗೋಲ್ ಹಾರ್ದಿಕ್ ಸಿಂಗ್ ಬಾರಿಸಿದರೆ, ದ್ವಿತೀಯ ಗೋಲನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಗಳಿಸಿದರು. ಮೊದಲಾರ್ಧ 2-1 ಅಂತರದಿಂದ ಕೊನೆಗೊಂಡಿತು.
ಇದನ್ನೂ ಓದಿ Asia Cup 2025: ಏಷ್ಯಾಕಪ್‌ನಲ್ಲಿ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಭಾರತ ಕಣಕ್ಕೆ!
ದ್ವಿತೀಯಾರ್ಧದಲ್ಲಿ ತಿರುಗಿಬಿದ್ದ ಚೀನಾ, ಮೂರನೇ ಕ್ವಾರ್ಟರ್‌ನಲ್ಲಿ 2 ಗೋಲು ದಾಖಲಿಸಿತು. ಭಾರತ ಒಂದು ಗೋಲು ಮಾತ್ರ ಗಳಿಸಿತು. ಈ ಕ್ವಾರ್ಟರ್ 3-3 ಸಮಬಲೊಂದಿಗೆ ಮುಕ್ತಾಯಗೊಂಡಿತು. ಅಂತಿಮ ಹಾಗೂ ನಾಲ್ಕನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ರಕ್ಷಣಾ ವಿಭಾಗ ಬಲಿಷ್ಠಗೊಂಡ ಕಾರಣ ಅಷ್ಟು ಸುಲಭವಾಗಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇನ್ನೇನು ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷ ಇರುವಾಗ 47ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ಭಾರತ ಮುಂದಿನ ಪಂದ್ಯವನ್ನು ಸೆಪ್ಟೆಂಬರ್ 1 ರಂದು ಜಪಾನ್ ವಿರುದ್ಧ ಆಡಲಿದೆ.