ಕರಾಚಿ: ಮುಂಬರುವ ಏಷ್ಯಾಕಪ್(Asia Cup 2025) ಕೂಟದಲ್ಲಿ ಭಾರತ ತಂಡ ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯವನ್ನು ನಿರಾಕರಿಸುವ ಸಾಧ್ಯತೆ ಇದೆ ಎಂಬ ಊಹಾಪೋಹ ಎದ್ದಿದೆ. ಹೀಗಿರುವಾಗಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ(Basit Ali) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತ ನಮ್ಮ ತಂಡದ ವಿರುದ್ಧ ಆಡಲು ನಿರಾಕರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಅವರ ಈ ಹೇಳಿಕೆ ಪಾಕ್‌ನಲ್ಲಿ ಭಾರೀ ವಿವಾಧಕ್ಕೆ ಕಾರಣವಾಗಿದೆ.
2025 ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆ.14 ರಂದು ನಿಗದಿಯಾಗಿದೆ. ಪಂದ್ಯಕ್ಕೂ ಮುನ್ನ ಬಾಸಿತ್ ಅಲಿ ಕಳವಳ ವ್ಯಕ್ತಪಡಿಸಿದ್ದು, ತಮ್ಮ ದೇಶಕ್ಕೆ ಮತ್ತೊಂದು ಹೀನಾಯ ಸೋಲುಂಟಾಗುವ ಭೀತಿ ಇದೆ. ಹೀಗಾಗಿ ಭಾರತ ಪಂದ್ಯವನ್ನು ನಿರಾಕರಿಸಿದರೆ ಒಳ್ಳೆಯದ್ದು ಎಂದು ಹೇಳಿದ್ದಾರೆ.
ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು 33 ವರ್ಷಗಳ ನಂತರ 2-1 ಅಂತರದಿಂದ ಸೋತಿದೆ. ಇದು ಏಷ್ಯಾಕಪ್‌ಗೂ ಮುನ್ನ ತಂಡದ ಪ್ರದರ್ಶನದ ಬಗ್ಗೆ ಚಿಂತೆ ಮತ್ತಷ್ಟು ಹೆಚ್ಚಿಸಿದೆ.
"ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ಭಾರತ ಹೇಗೆ ಪಾಕ್ ವಿರುದ್ಧದ ಪಂದ್ಯವನ್ನು ನಿರಾಕರಿಸಿತೋ ಹಾಗೆಯೇ ಏಷ್ಯಾ ಕಪ್‌ನಲ್ಲಿಯೂ ಪಾಕಿಸ್ತಾನದ ವಿರುದ್ಧ ಆಡಲು ಭಾರತ ನಿರಾಕರಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಏಕೆಂದರೆ ನೀವು ಊಹಿಸಲೂ ಸಾಧ್ಯವಾಗದಷ್ಟು ಕೆಟ್ಟದಾಗಿ ಅವರು(ಭಾರತ) ನಮ್ಮನ್ನು ಸೋಲಿಸುತ್ತದೆ" ಎಂದು ಬಾಸಿತ್ ದಿ ಗೇಮ್ ಪ್ಲಾನ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ತಮ್ಮ ಗುಂಪಿನಲ್ಲಿ ಅಗ್ರ ಎರಡು ತಂಡಗಳಾಗಿ ಸ್ಥಾನ ಪಡೆದರೆ, ಸೆಪ್ಟೆಂಬರ್ 21 ರಂದು ಸೂಪರ್ 4 ಹಂತದಲ್ಲಿ ಮತ್ತೆ ಮುಖಾಮುಖಿಯಾಗಲಿದಾರೆ. ಸೆಪ್ಟೆಂಬರ್ 9 ರಿಂದ 28 ರವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಫೈನಲ್ ಸಹಿತ ಒಟ್ಟು 19 ಪಂದ್ಯಗಳು ನಡೆಯಲಿದ್ದು, ಈ ಪೈಕಿ ದುಬೈ ಕ್ರೀಡಾಂಗಣ 11 ಪಂದ್ಯ ಹಾಗೂ ಅಬುಧಾಬಿ ಕ್ರೀಡಾಂಗಣ 8 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಈ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದ್ದು, 8 ತಂಡಗಳು ಭಾಗವಹಿಸಲಿವೆ.
ಇದನ್ನೂ ಓದಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಬಲ್ಲ ಮೂವರು ಆಟಗಾರರು!