ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಶುಭಮನ್‌ ಗಿಲ್‌ ಶತಕ; ಉತ್ತಮ ಸ್ಥಿತಿಯಲ್ಲಿ ಭಾರತ

ಭಾರತ ತಂಡ ಈ ಪಂದ್ಯಕ್ಕೆ ಮೂರು ಬದಲಾವಣೆ ಮಾಡಿತು. ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ರಾಂತಿ ನೀಡಿದರೆ, ಶಾರ್ದೂಲ್‌ ಠಾಕೂರ್‌ ಮತ್ತು ಸಾಯಿ ಸದರ್ಶನ್‌ ಅವರನ್ನು ಕೈಬಿಡಲಾಯಿತು. ಆಕಾಶ್‌ ದೀಪ್‌, ನಿತೀಶ್‌ ಕುಮಾರ್‌ ರೆಡ್ಡಿ ಮತ್ತು ವಾಷಿಂಗ್ಟನ್‌ ಸುಂದರ್‌ ಈ ಪಂದ್ಯದಲ್ಲಿ ಬದಲಿಯಾಗಿ ಆಡಿದ ಮೂವರು ಆಟಗಾರರು.

ಶುಭಮನ್‌ ಗಿಲ್‌ ಶತಕ; ಉತ್ತಮ ಸ್ಥಿತಿಯಲ್ಲಿ ಭಾರತ

Profile Abhilash BC Jul 2, 2025 11:29 PM

ಬರ್ಮಿಂಗ್‌ಹ್ಯಾಮ್‌: ನಾಯಕ ಶುಭಮನ್‌ ಗಿಲ್‌(Shubman Gill) ಅವರ ಆಕರ್ಷಕ ಅಜೇಯ ಶತಕ ಹಾಗೂ ಯಶಸ್ವಿ ಜೈಸ್ವಾಲ್‌(Yashasvi Jaiswal) ಅವರ ಸಮಯೋಚಿತ ಆಟದ ನೆರವಿನಿಂದ ಇಂಗ್ಲೆಂಡ್‌(IND vs ENG) ವಿರುದ್ಧದ ದ್ವಿತೀಯ ಟೆಸ್ಟ್‌ನ ಮೊದಲ ದಿನದಾಟದಲ್ಲಿ, ಆರಂಭಿಕ ಆಘಾತದ ಹೊರತಾಗಿಯೂ 5 ವಿಕೆಟ್‌ಗೆ 310 ರನ್‌ ಗಳಿಸಿ ಚೇತರಿಕೆಯ ಸ್ಥಿತಿಯಲ್ಲಿದೆ. ಗಿಲ್‌(114) ಮತ್ತು ಜಡೇಜಾ(41) ರನ್‌ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಭಾರತ ಆರಂಭಿಕ ಆಘಾತ ಎದುರಿಸಿತು. ಕನ್ನಡಿಗ ಕೆ.ಎಲ್‌ ರಾಹುಲ್‌(2) ಬೇಗನೆ ವಿಕೆಟ್‌ ಕಳೆದುಕೊಂಡರು. ಬ್ಯಾಟಿಂಗ್‌ ಭಡ್ತಿ ಪಡೆದ ಕರುಣ್‌ ನಾಯರ್‌(31) ಗಳಿಸಿದರು. 100 ರನ್‌ ಗಳಿಸುವ ಮುನ್ನ 2 ವಿಕೆಟ್‌ ಕಳೆದುಕೊಂಡು ಭಾರತಕ್ಕೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಮತ್ತು ನಾಯಕ ಶುಭಮನ್‌ ಗಿಲ್‌ ಆಸರೆಯಾದರು. ಈ ಜೋಡಿ ಕೆಲ ಹೊತ್ತು ತಾಳ್ಮೆಯುತ ಬ್ಯಾಟಿಂಗ್‌ ನಡೆಸಿ ಆಂಗ್ಲರ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಉತ್ತಮ ಜತೆಯಾಟವೊಂದನ್ನು ನಡೆಸಿದರು.

59 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ಜೈಸ್ವಾಲ್‌ 87 ರನ್‌ ಗಳಿಸಿದ ವೇಳೆ ನಾಯಕ ಬೆನ್‌ ಸ್ಟೋಕ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಟೆಸ್ಟ್‌ನಲ್ಲಿ ಆರಂಭಿಕನಾಗಿ ಅತ್ಯಧಿಕ ರನ್‌ ಗಳಿಸಿದ ಮೊದಲ ಭಾರತೀಯ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಸುಧೀರ್ ನಾಯಕ್( 77) ಹೆಸರಿನಲ್ಲಿತ್ತು. ಜೈಸ್ವಾಲ್‌ ವಿಕೆಟ್‌ ಬಿದ್ದ ಬಳಿಕ ಭಾರತ ಮತ್ತೆ ದಿಢೀರ್‌ ಕುಸಿತ ಕಂಡಿತು. ಕಳೆದ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ರಿಷಭ್‌ ಪಂತ್‌(25) ಮತ್ತು ಶಾರ್ದೂಲ್‌ ಠಾಕೂರ್‌ ಬದಲಿಗೆ ಅವಕಾಶ ಪಡೆದ ನಿತೀಶ್‌ ಕುಮಾರ್‌ ರೆಡ್ಡಿ(1) ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು.



ಜಡೇಜಾ-ಗಿಲ್‌ ಆಸರೆ

ಇನ್ನೇನು ಭಾರತ 250 ರನ್‌ ಒಳಗಡೆ ಗಂಟುಮೂಟೆ ಕಟ್ಟುತ್ತದೆ ಎನ್ನುವಾಗ ಸಮಯೋಚಿತ ಬ್ಯಾಟಿಂಗ್‌ ನಡೆಸಿದ ಶುಭಮನ್‌ ಗಿಲ್‌ ಮತ್ತು ರವೀಂದ್ರ ಜಡೇಜಾ ಮುರಿಯ 6ನೇ ವಿಕೆಟ್‌ಗೆ 99ರನ್‌ ಜತೆಯಾಟ ನಡೆಸುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇದೇ ವೇಳೆ ಗಿಲ್‌ ನಾಯಕನಾಗಿ ಸತತ ಎರಡು ಟೆಸ್ಟ್‌ನಲ್ಲಿ ಶತಕ ಬಾರಿಸಿದ ನಾಲ್ಕನೇ ಭಾರತೀಯ ನಾಯಕ ಎನಿಸಿಕೊಂಡರು. ನಾಯಕನಾಗಿ ಎರಡು ಶತಕಗಳನ್ನು ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ದಾಖಲೆ ವಿಜಯ್ ಹಜಾರೆ ಹೆಸರಿನಲ್ಲಿದೆ. 1951ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಅವರು ಈ ಸಾಧನೆ ಮಾಡಿದ್ದರು. ಅತ್ಯಧಿಕ ಶತಕ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಅವರು ಶತತ ಮೂರು ಶತಕ ಬಾರಿಸಿದ್ದಾರೆ.

ಭಾರತ ಮೂರು ಬದಲಾವಣೆ

ನಿರೀಕ್ಷೆಯಂತೆ ಭಾರತ ತಂಡ ಈ ಪಂದ್ಯಕ್ಕೆ ಮೂರು ಬದಲಾವಣೆ ಮಾಡಿತು. ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ರಾಂತಿ ನೀಡಿದರೆ, ಶಾರ್ದೂಲ್‌ ಠಾಕೂರ್‌ ಮತ್ತು ಸಾಯಿ ಸದರ್ಶನ್‌ ಅವರನ್ನು ಕೈಬಿಡಲಾಯಿತು. ಆಕಾಶ್‌ ದೀಪ್‌, ನಿತೀಶ್‌ ಕುಮಾರ್‌ ರೆಡ್ಡಿ ಮತ್ತು ವಾಷಿಂಗ್ಟನ್‌ ಸುಂದರ್‌ ಈ ಪಂದ್ಯದಲ್ಲಿ ಬದಲಿಯಾಗಿ ಆಡಿದ ಮೂವರು ಆಟಗಾರರು.