#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಸ್ಪೋಟಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಅಭಿಷೇಕ್‌ ಶರ್ಮಾ!

Abhishek Shrama breaks many Records with his Hundred: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ, ಇಂಗ್ಲೆಂಡ್‌ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ತಮ್ಮ ಸ್ಪೋಟಕ ಶತಕದ ಮೂಲಕ ಅಭಿಷೇಕ್‌ ಶರ್ಮಾ ಮುರಿದ ದಾಖಲೆಗಳ ವಿವರ!

Abhishek Sharma

Profile Ramesh Kote Feb 2, 2025 9:22 PM

ಮುಂಬೈ: ಇಂಗ್ಲೆಂಡ್‌ ವಿರುದ್ಧದ ಐದನೇ ಹಾಗೂ ಟಿ20ಐ ಸರಣಿಯಲ್ಲಿ ಭಾರತ ತಂಡದ ಯಂಗ್‌ ಓಪನರ್‌ ಅಭಿಷೇಕ್‌ ಶರ್ಮಾ ಅವರು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಕೇವಲ 17 ಎಸೆತಗಳಲ್ಲಿ ಅರ್ಧಶತಕ ಹಾಗೂ ಕೇವಲ 37 ಎಸೆತಗಳಲ್ಲಿ ಶತಕವನ್ನು ಸಿಡಿಸಿದರು. ಆ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಒಟ್ಟು 54 ಎಸೆತಗಳನ್ನು ಎದುರಿಸಿದ ಅಭಿಷೇಕ್‌ ಶರ್ಮಾ, 13 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 135 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಟಿ20ಐ ಪಂದ್ಯವೊಂದರಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಅಲ್ಲದೆ ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ವಿಶ್ವದ ಹಾಗೂ ಭಾರತದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಅಂದ ಹಾಗೆ ತಮ್ಮ ಸ್ಪೋಟಕ ಇನಿಂಗ್ಸ್‌ ಮೂಲಕ ಅಭಿಷೇಕ್‌ ಶರ್ಮಾ ಬರೆದ ದಾಖಲೆಗಳ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

IND vs ENG: ಟಿ20ಐ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿ ಇತಿಹಾಸ ಬರೆದ ಅಭಿಷೇಕ್‌ ಶರ್ಮಾ!

ಇಂಗ್ಲೆಂಡ್ ವಿರುದ್ಧ ಟಿ20ಐನಲ್ಲಿ ಅತಿ ವೇಗದ ಶತಕ

ಇಂಗ್ಲೆಂಡ್ ವಿರುದ್ಧದ ಐದನೇ ಟಿ20ಐ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ಕೇವಲ 37 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು . ಇಂಗ್ಲೆಂಡ್ ವಿರುದ್ಧ ಟಿ20ಐನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ಅಭಿಷೇಕ್ ಶರ್ಮಾ ಹೆಸರಿನಲ್ಲಿದೆ. ಅಭಿಷೇಕ್ ಶರ್ಮಾಗಿಂತ ಮೊದಲು ವಿಂಡೀಸ್‌ ದಿಗ್ಗಜ ಕ್ರಿಸ್ ಗೇಲ್ ಮತ್ತು ಆರೋನ್ ಫಿಂಚ್ ಈ ಸಾಧನೆ ಮಾಡಿದ್ದರು.

ಭಾರತದ ಪರ ಎರಡನೇ ಅತಿ ವೇಗದ ಟಿ20ಐ ಶತಕ

ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸುವುದರ ಜೊತೆಗೆ ಅಭಿಷೇಕ್ ಶರ್ಮಾ ಭಾರತದ ಪರ ಎರಡನೇ ವೇಗದ ಶತಕ ಸಿಡಿಸಿದ್ದಾರೆ. ಅಭಿಷೇಕ್ ಶರ್ಮಾ ಶತಕ ಪೂರೈಸಲು ಕೇವಲ 37 ಎಸೆತಗಳನ್ನು ತೆಗೆದುಕೊಂಡರು. ಭಾರತದ ಪರ ಟಿ20ಐನಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು.



ಕ್ವಿಂಟನ್ ಡಿ ಕಾಕ್ ಅವರನ್ನು ಹಿಂದಿಕ್ಕಿದ ಅಭಿಷೇಕ್

ಇಂಗ್ಲೆಂಡ್ ವಿರುದ್ಧ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಅಭಿಷೇಕ್ ಶರ್ಮಾ, ದಕ್ಷಿಣ ಆಫ್ರಿಕಾ ದಿಗ್ಗಜ ಕ್ವಿಂಟನ್ ಡಿ ಕಾಕ್ ಅವರ ದಾಖಲೆಯನ್ನು ಮುರಿದಿದ್ದಾರೆ. ಅಭಿಷೇಕ್ ಶರ್ಮಾ ಟಿ20ಐ ಪಂದ್ಯದ ಕೇವಲ 10.1 ಓವರ್‌ಗಳಲ್ಲಿ ಶತಕ ಪೂರೈಸಿದರು. ಇದಕ್ಕೂ ಮೊದಲು, ಡಿ ಕಾಕ್ 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 10.2 ಓವರ್‌ಗಳಲ್ಲಿಯೇ ಶತಕವನ್ನು ಪೂರ್ಣಗೊಳಿಸಿದ್ದರು.

ಪವರ್ ಪ್ಲೇನಲ್ಲಿ ಅಭಿಷೇಕ್ ಶರ್ಮಾ ಅರ್ಧಶತಕ

ಶತಕ ಸಿಡಿಸುವುದಕ್ಕೂ ಮುನ್ನ ಅಭಿಷೇಕ್ ಶರ್ಮಾ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದು ಭಾರತದ ಪರ ಟಿ20ಐನಲ್ಲಿ ಎರಡನೇ ಅತಿ ವೇಗದ ಅರ್ಧಶತಕವಾಗಿದೆ. ಅಭಿಷೇಕ್ ಶರ್ಮಾ ಅರ್ಧಶತಕದ ವಿಶೇಷವೆಂದರೆ ಅವರು ಅದನ್ನು ಪವರ್ ಪ್ಲೇನಲ್ಲಿ ಪೂರ್ಣಗೊಳಿಸಿದ್ದರು. ಪವರ್ ಪ್ಲೇನಲ್ಲಿ ಅರ್ಧಶತಕ ಗಳಿಸಿದವರಲ್ಲಿ ಅಭಿಷೇಕ್ ಶರ್ಮಾ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಮಾಜಿ ಆರಂಭಿಕ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಪವರ್ ಪ್ಲೇನಲ್ಲಿ ರೋಹಿತ್ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.



ಪವರ್ ಪ್ಲೇನಲ್ಲಿ ಭಾರತದ ಅತ್ಯಧಿಕ ಸ್ಕೋರ್

ಅಭಿಷೇಕ್‌ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಭಾರತ ತಂಡ, ಪವರ್ ಪ್ಲೇನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ದಾಖಲೆಯನ್ನು ಬರೆಯಿತು. ಭಾನುವಾರ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದಿದ್ದ ಪಂದ್ಯದ ಪವರ್ ಪ್ಲೇನಲ್ಲಿ ಟೀಮ್ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿತು. ಇದಕ್ಕೂ ಮೊದಲು ಭಾರತ ಪವರ್ ಪ್ಲೇನಲ್ಲಿ 82 ರನ್ ಗಳಿಸಿತ್ತು.

ಟಿ20ಐನಲ್ಲಿ ಸಿಕ್ಸರ್‌ಗಳ ದಾಖಲೆ ಬರೆದ ಅಭಿಷೇಕ್‌ ಶರ್ಮಾ

ಇಂಗ್ಲೆಂಡ್ ವಿರುದ್ಧದ ಈ ಟಿ20ಐ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಭಾರತದ ಪರ 135 ರನ್‌ಗಳ ಸ್ಪೋಟಕ ಇನಿಂಗ್ಸ್‌ ಆಡಿದರು. ಅಭಿಷೇಕ್ ಶರ್ಮಾ ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ ಒಟ್ಟು 13 ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ಟಿ20ಐ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.



ಟಿ20ಐನಲ್ಲಿ ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತ

ಇಂಗ್ಲೆಂಡ್ ವಿರುದ್ಧದ 5ನೇ ಟಿ20ಐ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅತಿ ದೊಡ್ಡ ಇನಿಂಗ್ಸ್‌ ಆಡಿದ ದಾಖಲೆಯನ್ನು ಬರೆದರು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಆಡಿದ 54 ಎಸೆತಗಳಲ್ಲಿ 13 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 135 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತದ ಪರ ಟಿ20ಐ ಪಂದ್ಯದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.