ಕರಾರ (ಗೋಲ್ಡ್ ಕೋಸ್ಟ್): ಭಾರತದ ಮೊನಚಾದ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೆಲಿಯಾ, ಗುರುವಾರ ನಡೆದ 4ನೇ ಟಿ20(IND vs AUS 4th T20) ಪಂದ್ಯದಲ್ಲಿ 48 ರನ್‌ಗಳ ಸೋಲಿಗೆ ತುತ್ತಾಯಿತು. ಸತತ ಎರಡನೇ ಗೆಲುವಿನ ಓಟವನ್ನು ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಪಡೆ, ಐದು ಪಂದ್ಯಗಳ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಶನಿವಾರ ಗಾಬ್ಬಾದಲ್ಲಿ ನಡೆಯುವ ಅಂತಿಮ ಹಾಗೂ ಸರಣಿ ನಿರ್ಣಾಯಕ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 167 ರನ್ ಬಾರಿಸಿತು. ಜವಾಬಿತ್ತ ಆಸ್ಟ್ರೇಲಿಯಾ 18.2 ಓವರ್‌ಗಳಲ್ಲಿ 119 ರನ್‌ಗೆ ಸರ್ವಪತನ ಕಂಡಿತು. ಇದು ತವರಿನ ಟಿ20ಯಲ್ಲಿ ಆಸ್ಟ್ರೇಲಿಯಾ ಗಳಿಸಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ.
ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ಉತ್ತಮ ಆರಂಭವನ್ನೇ ಪಡೆಯಿತು. ಉತ್ತಮವಾಗಿ ಆಡುತ್ತಿದ ನಾಯಕ ಮಿಚೆಲ್ ಮಾರ್ಷ್(30) ಮತ್ತು ಮ್ಯಾಥ್ಯೂ ಶಾರ್ಟ್(25) ಜೋಡಿಯನ್ನು ಅಕ್ಷರ್ ಪಟೇಲ್ ಬೇರ್ಪಡಿಸಿರು. ಬಳಿಕ ಬಂದ ಜೋಶ್ ಇಂಗ್ಲಿಷ್(12) ಅವರನ್ನು ಅಕ್ಷರ್ ಕ್ಷೀನ್ ಬೌಲ್ಡ್ ಮಾಡಿದರು. ಅಪಾಯಕಾರಿ ಮಾರ್ಷ್ ಮತ್ತು ಟಿಮ್ ಡೇವಿಡ್(14) ವಿಕೆಟ್ ಶಿವಂ ದುಬೆ ಪಾಲಾಯಿತು.
ಸರಣಿಯಲ್ಲಿ ಇದೇ ಮೊದಲ ಬಾರಿಗೆ ಆಡಲಿಳಿದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್(2) ಒಂದಂಕಿಗೆ ವಿಕೆಟ್ ಕಳೆದುಕೊಂಡರು. ವರುಣ್ ಚಕ್ರವರ್ತಿ ಗೂಗ್ಲಿ ಎಸೆದು ಕ್ಲೀನ್ ಬೌಲ್ಡ್ ಮಾಡಿದರು. ಟ್ರಾವಿಸ್ ಹೆಡ್, ಜೋಶ್ ಹ್ಯಾಸಲ್ವುಡ್ ಅನುಪಸ್ಥಿತಿ ಆಸೀಸ್ ತಂಡದಲ್ಲಿ ಎದ್ದು ಕಾಣಿಸಿತು. ವಾಷಿಂಗ್ಟನ್ ಸುಂದರ್ ತಾವೆಸೆದ ಮೊದಲ ಓವರ್‌ನಲ್ಲಿಯೇ ಸತತ ಎರಡು ವಿಕೆಟ್ ಕಿತ್ತರು. ಒಟ್ಟು 3 ರನ್‌ಗೆ ಮೂರು ವಿಕೆಟ್ ಕಿತ್ತರು. ಆಲ್‌ರೌಂಡರ್ ಪ್ರದರ್ಶನ ತೋರಿದ ಅಕ್ಷರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗಿಲ್-ಅಭಿಷೇಕ್ ಆಸರೆ
ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಆರಂಭಿಕರಾದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮ ಬೀಸಾಟದ ಮೂಲಕ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟ ನಡೆಸಿದರು. ಆದರೆ ಉಭಯ ಆಟಗಾರರ ವಿಕೆಟ್ ಪತನದ ಬಳಿಕ ತಂಡ ದಿಢೀರ್ ಕುಸಿತ ಕಂಡಿತು.
ಹೊಡಿಬಡಿ ಆಟಗಾರರಾದ ಸೂರ್ಯಕುಮಾರ್(20) ತಿಲಕ್ ವರ್ಮ(5), ಜಿತೇಶ್ ಶರ್ಮ(3) ವಾಷಿಂಗಷ್ಟನ್ ಸುಂದರ್(12) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಲಾರಂಭಿಸಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಶಿವಂ ದುಬೆ ತಲಾ ಒಂದು ಸಿಕ್ಸ್ ಮತ್ತು ಬೌಂಡರಿಗಷ್ಟೇ ಸೀಮಿತವಾಗಿ 22 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಅಕ್ಷರ್ ಪಟೇಲ್ 21 ರನ್ ಗಳಿಸಿದರು. ಅವರು ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದರು.
ಇದನ್ನೂ ಓದಿ IND vs SA: ಭಾರತ ಟೆಸ್ಟ್ ತಂಡದಿಂದ ಔಟ್! ಮೊಹಮ್ಮದ್ ಶಮಿ ವೃತ್ತಿ ಜೀವನ ಅಂತ್ಯ?
46 ರನ್ ಗಳಿಸಿದ ಶುಭಮನ್ ಗಿಲ್ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಅಭಿಷೇಕ್ ಶರ್ಮಾ 28 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ನಥಾನ್ ಎಲ್ಲಿಸ್ 21 ರನ್ ವೆಚ್ಚದಲ್ಲಿ 3 ವಿಕೆಟ್ ಕಿತ್ತರು. ಸ್ಪಿನ್ನರ್ ಜಂಪಾ 3 ವಿಕೆಟ್ ಉರುಳಿಸಿದರೂ 45 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಜೇವಿಯರ್ ಬಾರ್ಟ್ಲೆಟ್ ಮತ್ತು ಮಾರ್ಕಸ್ ಸ್ಟೋಯಿನಿಸ್ ತಲಾ ಒಂದು ವಿಕೆಟ್ ಪಡೆದರು.