IND vs BAN: ಬಾಂಗ್ಲಾ ವಿರುದ್ಧದ ಸೂಪರ್ 4 ಪಂದ್ಯಕ್ಕೆ ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತದೆಯೇ?
ಈ ಪಂದ್ಯಕ್ಕೆ ಭಾರತ ಮತ್ತು ಬಾಂಗ್ಲಾ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಕಳೆದ ಪಂದ್ಯದಲ್ಲಿ ಆಡಿಸಿದ ತಂಡವನ್ನೇ ಈ ಪಂದ್ಯದಲ್ಲೂ ಮುಂದುವರಿಸಬಹುದು. ಅಭ್ಯಾಸದ ಸಮಯದಲ್ಲಿ ಎಡ ಪಕ್ಕೆಲುಬಿಗೆ ಗಾಯ ಮಾಡಿಕೊಂಡಿದ್ದ ಲಿಟ್ಟನ್ ದಾಸ್ ಫಿಟ್ ಆಗಿದ್ದಾರೆ ಎಂದು ಬಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

-

ದುಬೈ: ಇಂದು(ಬುಧವಾರ) ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಏಷ್ಯಾ ಕಪ್ ಸೂಪರ್ ಫೋರ್( Asia Cup 2025) ಹಂತದಲ್ಲಿ ಭಾರತ ಮತ್ತು ಬಾಂಗ್ಲಾದೇಶ(IND vs BAN) ಮುಖಾಮುಖಿಯಾಗಲಿವೆ. ಸೂಪರ್ ಫೋರ್‌ನಲ್ಲಿ ಈ ಎರಡೂ ತಂಡಗಳು ಅಜೇಯವಾಗಿವೆ. ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ಬಹುತೇಕ ಫೈನಲ್‌ಗೆ ಪ್ರವೇಶಿಸಲಿದ್ದಾರೆ. ಹೀಗಾಗಿ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ.
ಇತ್ತಂಡಗಳ ನಡುವಣ ಟಿ20 ಮುಖಾಮುಖಿ ದಾಖಲೆ ನೋಡುವಾಗ ಭಾರತವೇ ಪಂದ್ಯದ ಫೇವರಿಟ್ ಎನಿಸಿದೆ. ಭಾರತ 16–1 ಗೆಲುವಿನ ದಾಖಲೆ ಹೊಂದಿದೆ. ಬಾಂಗ್ಲಾದೇಶ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಸೋಲಿಸಲು 9 ಪಂದ್ಯಗಳವರೆಗೆ ಕಾಯಬೇಕಾಯಿತು. ದೆಹಲಿಯಲ್ಲಿ 2019ರ ನವೆಂಬರ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಬಾಂಗ್ಲಾ ಜಯಗಳಿಸಿತ್ತು.
ಹಾಗಂತ ಈ ಬಾರಿ ಬಾಂಗ್ಲಾವನ್ನು ಕಡೆಗಣಿಸುವಂತಿಲ್ಲ, ಕಾರಣ ಬಾಂಗ್ಲಾದೇಶ ಈಗ ಹಿಂದಿಗಿಂತ ಉತ್ತಮವಾಗಿ ಆಡುತ್ತಿದೆ. ನಾಯಕ ಲಿಟನ್ ದಾಸ್, ಮುಸ್ತಫಿಝುರ್ ರೆಹಮಾನ್, ತಸ್ಕಿನ್ ಅಹ್ಮದ್, ಮಹೆದಿ ಹಸನ್ ಹೀಗೆ ಕೆಲವು ಅನುಭವಿಗಳು ತಂಡದಲ್ಲಿದ್ದಾರೆ. ಇನ್ನೊಂದೆಡೆ ಪಂದ್ಯಕ್ಕೂ ಮುನ್ನವೇ ಭಾರತ ತಂಡವನ್ನು ಯಾವ ತಂಡ ಬೇಕಾದರೂ ಸೋಲಿಸಬಹುದು ಎಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ ಮುಖ್ಯ ಕೋಚ್ ಫಿಲ್ ಸಿಮನ್ಸ್ ಹೇಳಿದ್ದಾರೆ. ಇದಕ್ಕೆ ತಕ್ಕ ಉತ್ತರ ಭಾರತ ತಂಡ ನೀಡಬೇಕಿದೆ.
ಈ ಪಂದ್ಯಕ್ಕೆ ಭಾರತ ಮತ್ತು ಬಾಂಗ್ಲಾ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಕಳೆದ ಪಂದ್ಯದಲ್ಲಿ ಆಡಿಸಿದ ತಂಡವನ್ನೇ ಈ ಪಂದ್ಯದಲ್ಲೂ ಮುಂದುವರಿಸಬಹುದು. ಅಭ್ಯಾಸದ ಸಮಯದಲ್ಲಿ ಎಡ ಪಕ್ಕೆಲುಬಿಗೆ ಗಾಯ ಮಾಡಿಕೊಂಡಿದ್ದ ಲಿಟ್ಟನ್ ದಾಸ್ ಫಿಟ್ ಆಗಿದ್ದಾರೆ ಎಂದು ಬಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಉಭಯ ಸಂಭಾವ್ಯ ತಂಡಗಳು
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (ವಿ.ಕೀ.), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ಬಾಂಗ್ಲಾದೇಶ: ಸೈಫ್ ಹಸನ್, ತಂಝಿದ್ ಹಸನ್ ತಮೀಮ್, ಲಿಟ್ಟನ್ ದಾಸ್ (ನಾಯಕ), ತೌಹಿದ್ ಹೃದಯೋಯ್, ಶಮೀಮ್ ಹೊಸೈನ್, ಜೇಕರ್ ಅಲಿ, ಮಹೇದಿ ಹಸನ್, ನಸುಮ್ ಅಹ್ಮದ್, ಟಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್.