ಫ್ರಿಡ್ಜ್, ಡ್ರಮ್ ಬಳಿಕ ಇದೀಗ ಬಾವಿಯಲ್ಲಿ ಮೃತದೇಹ ಪತ್ತೆ: ಅಪ್ರಾಪ್ತ ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಕೊಂದು, ಕಲ್ಲು ಕಟ್ಟಿ ನೀರಿಗೆ ತಳ್ಳಿದ ಪ್ರಿಯಕರ
Crime News: ಇತ್ತೀಚಿನ ದಿನಗಳ ಸಂಗಾತಿಯನ್ನು ಕೊಲೆಗೈವ ಪ್ರಕರಣ ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಫ್ರಿಡ್ಜ್, ನೀಲಿ ಡ್ರಮ್‌ನಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ಇದೀಗ ಗುಜರಾತ್‌ನ ಯುವಕನೊಬ್ಬ ಅಪ್ರಾಪ್ತ ವಯಸ್ಸಿನ ಪ್ರಿಯತಮೆಯನ್ನು ಕೊಂದು ಮೃತದೇಹವನ್ನು ಬಾವಿಗೆ ಎಸೆದಿದ್ದಾನೆ.
ಮೆಟಾ ಎಐ ಚಿತ್ರ. -
ಗಾಂಧಿನಗರ, ಫೆ. 21: ಪ್ರಿಯಕರನ ಕೃತ್ಯದಿಂದ ಮತ್ತೊಂದು ಲವ್ ಸ್ಟೋರಿ ದುರಂತ ಅಂತ್ಯ ಕಂಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಮನಸಾರೆ ಪ್ರೀತಿಸಿ, ನಂಬಿಕೆಯಿಂದ ಪ್ರಿಯಕರನಿಗೆ ದೇಹ ಒಪ್ಪಿಸಿದ್ದ ಅಪ್ರಾಪ್ತ ಬಾಲಕಿ ಇದೀಗ ಶವವಾಗಿ ಬಾವಿಯಲ್ಲಿ ಪತ್ತೆಯಾಗಿದ್ದಾಳೆ. ಗುಜರಾತ್‌ನ ಕಛ್ ಜಿಲ್ಲೆಯಲ್ಲಿ ಈ ಧಾರುಣ ಘಟನೆ ನಡೆದಿದ್ದು (Crime News) ಕೃತ್ಯ ಎಸಗಿದ ಪ್ರಿಯಕರ ಮತ್ತು ಆತನ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. ಗರ್ಭಿಣಿ ಅಪ್ರಾಪ್ತೆಯನ್ನು ಕೊಲೆಗೈದ ಪ್ರಿಯಕರನನ್ನು ರಾಜೇಶ್ ಎಂದು ಗುರುತಿಸಲಾಗಿದೆ.
ಗರ್ಭಿಣಿಯಾಗಿದ್ದ ಅಪ್ರಾಪ್ತೆ ಮದುವೆಯಾಗುವಂತೆ ಒತ್ತಡ ಹೇರಿದ್ದರಿಂದ ರಾಜೇಶ್ ಕೊಲೆ ಮಾಡಿದ್ದ. ಬಳಿಕ ಗೆಳೆಯನ ಸಹಾಯದಿಂದ ಬಾವಿಗೆ ಮೃತದೇಹವನ್ನು ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
ಘಟನೆ ವಿವರ
ತನ್ನದೇ ಗ್ರಾಮದ ಬಾಲಕಿಯನ್ನು ರಾಜೇಶ್ ಸುಮಾರು 1 ವರ್ಷದಿಂದ ಪ್ರೀತಿಸುತ್ತಿದ್ದ. ಮದುವೆಯ ಭರವಸೆ ನೀಡಿದ್ದರಿಂದ ಆಕೆ ಆತನೊಂದಿಗೆ ಆತ್ಮೀಯವಾಗಿಯೇ ಇದ್ದಳು. ಜತೆಗೆ ಇಬ್ಬರ ಮಧ್ಯೆ ದೈಹಿಕ ಸಂಬಂಧವೂ ಇತ್ತು. ಇನ್ನೂ ಅಪ್ರಾಪ್ತೆಯಾಗಿದ್ದ ಆಕೆ ಇತ್ತೀಚೆಗೆ ಗರ್ಭಿಣಿಯಾಗಿದ್ದಳು ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.
ಇದರಿಂದ ಗಾಬರಿಗೊಳಗಾದ ಬಾಲಕಿ ಮದುವೆಯಾಗುವಂತೆ ರಾಜೇಶ್ ಬಳಿ ಮನವಿ ಮಾಡಿದ್ದಳು. ಆತ ನಿರಾಕರಿಸಿದಾಗ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವುದಾಗಿಯೂ ಎಚ್ಚರಿಸಿದ್ದಳು. ಆದರೆ ಆತನಿಗೆ ಆಕೆಯನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಈ ವಿಚಾರವಾಗಿ ಇಬ್ಬರ ಮಧ್ಯೆ ನಿರಂತರ ವಾಗ್ವಾದ ನಡೆಯುತ್ತಲೇ ಇತ್ತು.
ಇತ್ತ ರಾಜೇಶ್ ತನ್ನ ಗೆಳೆಯ ರಾಹುಲ್ ಜತೆ ಈ ವಿಚಾರವನ್ನು ಚರ್ಚಿಸಿದ್ದ. ಆಕೆ ಮದುವೆಯಾಗುವಂತೆ ಒತ್ತಡ ಹಾಕುತ್ತಿರುವುದಾಗಿಯೂ, ತನಗೆ ಇದು ಇಷ್ಟವಿಲ್ಲವೆಂದೂ ಹೇಳಿದ್ದ. ಬಳಿಕ ಇಬ್ಬರು ಸೇರಿ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದರು.
ಮಟನ್ ಕರಿಯಲ್ಲಿ ಮಾತ್ರೆ ಬೆರೆಸಿ ಪತಿ ಹತ್ಯೆ ಯತ್ನ; ಸಾಧ್ಯವಾಗದ್ದಕ್ಕೆ ಕತ್ತು ಹಿಸುಕಿ ಪತಿಯನ್ನೇ ಕೊಂದ ಪಾಪಿ ಪತ್ನಿ!
ಅಂದು ನಡೆದಿದ್ದೇನು?
ಸೋಶಿಯಲ್ ಮೀಡಿಯಾ ಮೂಲಕ ಬಾಲಕಿಯನ್ನು ಸಂಪರ್ಕಿಸಿದ್ದ ರಾಜೇಶ್ ಅಂದು ರಾತ್ರಿ ಭೇಟಿಯಾಗುವಂತೆ ಸೂಚಿಸಿದ್ದ. ಓಡಿ ಹೋಗಿ ಮದುವೆಯಾಗುವುದಾಗಿ ಹೇಳಿ ಆಕೆಯಲ್ಲಿ ನಂಬಿಕೆ ಹುಟ್ಟಿಸಿದ್ದ. ಆತನ ಮಾತು ನಂಬಿದ ಬಾಲಕಿ ಯಾರಲ್ಲೂ ಏನನ್ನೂ ಹೇಳದೆ ಸೂಚಿಸಿದ ಸ್ಥಳಕ್ಕೆ ತೆರಳಿದಳು. ಆಕೆ ಬರುತ್ತಿದ್ದಂತೆ ರಾಜೇಶ್ ತನ್ನ ಗೆಳೆಯ ರಾಹುಲ್‌ನ ಸಹಾಯದಿಂದ ಆಕೆಯ ಕತ್ತು ಹಿಸುಕಿ ಕೊಂದೇ ಬಿಟ್ಟ.
ಆಕೆಯ ಸೊಂಟಕ್ಕೆ ವೇಲ್ ಸುತ್ತಿ ಭಾರವಾದ ಕಲ್ಲನ್ನು ಕಟ್ಟಿ ರಾಜೇಶ್ ಮತ್ತು ರಾಹುಲ್ ಮೃತದೇಹವನ್ನು ಊರಾಚೆಗಿನ ಬಾವಿಗೆ ಎಸೆದು ತಮಗೇನೂ ಗೊತ್ತಿಲ್ಲವೆಂದು ಕೈ ಕೊಡವಿ ಹೊರಟು ಹೋಗಿದ್ದರು. ಭಾರವಾದ ಕಲ್ಲು ಕಟ್ಟಿದ್ದರಿಂದ ಮೃತದೇಹ ಸುಲಭವಾಗಿ ಮೇಲೆ ಬರಲಾರದು ಎನ್ನುವ ನಂಬಿಕೆ ಅವರಿಗಿತ್ತು.
ಮದುವೆ ಕಾರ್ಡ್‌ನಲ್ಲಿ ಹೆಸರು ಹಾಕದಿದ್ದಕ್ಕೆ ಬಿತ್ತು ಮೂವರ ಹೆಣ; ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ
ಪ್ರಕರಣಕ್ಕೆ ತಿರುವು ಕೊಟ್ಟ ನಾಪತ್ತೆ ದೂರು
ಬಾಲಕಿ ಮನೆಯವರು ನಾಪತ್ತೆ ದೂರು ನೀಡುವ ಮೂಲಕ ಪ್ರಕರಣದ ಎಳೆ ಬಿಚ್ಚತೊಡಗಿತು. ದೂರು ದಾಖಲಿಸಿಕೊಂಡ ಪೊಲೀಸರು ಮೊದಲು ವಿಚಾರಣೆಗೆ ಒಳಪಡಿಸಿದ್ದೇ ರಾಜೇಶ್‌ನನ್ನು. ಆರಂಭದಲ್ಲಿ ತನಗೇನೂ ಗೊತ್ತಿಲ್ಲ ಎಂದೇ ವಾದಿಸಿದ ಆತ ಕೊನೆಗೆ ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದ. ಅಗ್ನಿ ಶಾಮಕ ದಳ ಕಾರ್ಯಾಚರಣೆ ನಡೆಸಿ ಮೃತದೇಹ ಹೊರಗೆಳೆದಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.