Champions Trophy ಫೈನಲ್‌ಗೇರುವ ನೆಚ್ಚಿನ ತಂಡಗಳನ್ನು ಆರಿಸಿದ ಪಾಂಟಿಂಗ್, ರವಿ ಶಾಸ್ತ್ರಿ!
India vs Australia: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡೆಯುವ ಎರಡು ತಂಡಗಳನ್ನು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಭಾರತದ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಆಯ್ಕೆ ಮಾಡಿದ್ದಾರೆ.
ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ಫೆಬ್ರವರಿ 19 ರಂದು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದೆ. ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಇದರ ನಡುವೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಭಾರತದ ಮಾಜಿ ಆಲ್‌ರೌಂಡರ್ ರವಿ ಶಾಸ್ತ್ರಿ ಈ ಟೂರ್ನಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವ ಎರಡು ತಂಡಗಳನ್ನು ಆರಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುವ ಬಲಿಷ್ಠ ಸ್ಪರ್ಧಿಗಳಾಗಿವೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಈಗಾಗಲೇ ಟಿ20ಐ ವಿಶ್ವಕಪ್ ಗೆದ್ದಿರುವ ಭಾರತ ತಂಡ ಹಾಗೂ ಏಕದಿನ ವಿಶ್ವಕಪ್ ಗೆದ್ದರುವ ಆಸ್ಟ್ರೇಲಿಯಾ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಾಗಿವೆ. ಐಸಿಸಿ ರಿವ್ಯೂವ್‌ನಲ್ಲಿ ಸಂಜನಾ ಗಣೇಶನ್ ಅವರ ಜೊತೆ ಮಾತನಾಡಿದ ರಿಕಿ ಪಾಂಟಿಂಗ್ ಹಾಗೂ ರವಿ ಶಾಸ್ತ್ರಿ, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನ ಸಮಾರಂಭ ರದ್ದು
"ಮತ್ತೊಮ್ಮೆ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ನೋಡುವುದು ಕಠಿಣವಾಗಿದೆ. ಎರಡೂ ತಂಡಗಳಲ್ಲಿನ ಆಟಗಾರರನ್ನು ನೀವು ನೋಡಬಹುದು ಹಾಗೂ ದೊಡ್ಡ ಟೂರ್ನಿಗಳ ಫೈನಲ್‌ಗಳು ಮತ್ತು ಐಸಿಸಿಯ ಟೂರ್ನಿಗಳ ಫೈನಲ್‌ಗಳನ್ನು ನಾವು ನೋಡುವುದಾದರೆ, ಅಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಕಾಣಬಹುದು." ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
"ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಸ್ತುತ ಪ್ರೈಮ್ ಫಾರ್ಮ್‌ನಲ್ಲಿವೆ ಹಾಗೂ ಬೇರೆ ಯಾವುದೇ ತಂಡಗಳನ್ನು ನೀವು ಪರಿಗಣಿಸಿದರೂ ಆ ತಂಡಗಳಿಗೆ ಈ ಎರಡೂ ತಂಡಗಳು ಕಠಿಣ ಸವಾಲನ್ನು ನೀಡಬಲ್ಲವು," ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅನುಮಾನ?; ಬದಲಿ ಬೌಲರ್ ಸಿದ್ಧಪಡಿಸಿದ ಬಿಸಿಸಿಐ!
ಭಾರತ-ಆಸ್ಟ್ರೇಲಿಯಾ ನಡುವೆ ಫೈನಲ್
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ರೇಸ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಂಚೂಣಿಯಲ್ಲಿವೆ ಹಾಗೂ ಇವುಗಳ ಜೊತೆಗೆ ಆತಿಥೇಯ ಪಾಕಿಸ್ತಾನ ತಂಡ ಕೂಡ ಸೇರ್ಪಡೆಯಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಈ ತಂಡಗಳು ಗಮನಾರ್ಹ ಪ್ರದರ್ಶನವನ್ನು ತೋರಿವೆ. ದಕ್ಷಿಣ ಆಫ್ರಿಕಾ ವಿರುದ್ದ 3-0 ಅಂತರದ ಗೆಲುವಿನಿಂದ ಪಾಕ್ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
"ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಹೊರತುಪಡಿಸಿ ಇತರೆ ಬಲಿಷ್ಠ ತಂಡವೆಂದರೆ ಪಾಕಿಸ್ತಾನ ತಂಡ. ಪಾಕಿಸ್ತಾನ ತಂಡ ಕಳೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನವನ್ನು ತೋರಿತ್ತು. ಆದರೆ, ಐಸಿಸಿಯ ದೊಡ್ಡ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡವನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ, ಅವರು ಟೂರ್ನಿಯಲ್ಲಿ ಎಲ್ಲರ ಅಭಿಪ್ರಾಯವನ್ನು ಸುಳ್ಳು ಮಾಡುತ್ತಾರೆ," ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.