IPL 2025: ಪಂದ್ಯದ ವೇಳೆ ಫೀಲ್ಡ್ ಅಂಪೈರ್ ದಿಢೀರ್ ಬ್ಯಾಟ್ ಪರಿಶೀಲನೆ; ಏನಿದು ಹೊಸ ನಿಯಮ?
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಬ್ಯಾಟ್ ಪರಿಶೀಲನೆ ಕೂಡ ಒಂದಾಗಿದೆ. ಫೀಲ್ಡ್ ಅಂಪೈರ್ಗೆ ಬ್ಯಾಟ್‌ನ ಬಗ್ಗೆ ಸಂದೇಹ ಬಂದರೆ ಮೈದಾನದಲ್ಲೇ ಪರಿಶೀಲಿಸಲು ಅವಕಾಶ ನೀಡಲಾಗಿದೆ.


ನವದೆಹಲಿ: ಹಾಲಿ ಆವೃತ್ತಿಯ ಐಪಿಎಲ್(IPL 2025) ಟೂರ್ನಿಯ ಪಂದ್ಯಗಳ ವೇಳೆ ಫೀಲ್ಡ್ ಅಂಪೈರ್‌ಗಳು ಆಟಗಾರರ ಬ್ಯಾಟ್‌ಗಳನ್ನು ಪರಿಶೀಲನೆ(umpires randomly checking bats) ಮಾಡಲು ಆರಂಭಿಸಿದ್ದಾರೆ. ಈ ದಿಢೀರ್ ಬೆಳವಣಿಗೆ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಕಳೆದ ಆರ್‌ಸಿಬಿ ಮತ್ತು ರಾಜಸ್ಥಾನ್ ಪಂದ್ಯದ ವೇಳೆ ಆರ್‌ಸಿಬಿ ಬ್ಯಾಟರ್‌ಗಳಾದ ದೇವದತ್ತ ಪಡಿಕ್ಕಲ್, ಫಿಲ್ ಸಾಲ್ಟ್ ಮತ್ತು ರಾಜಸ್ಥಾನ್ ತಂಡದ ಶಿಮ್ರಾನ್ ಹೆಡ್‌ಮೇರ್ ಅವರ ಬ್ಯಾಟ್‌ಗಳ ಗಾತ್ರವನ್ನು ಅಂಪೈರ್‌ಗಳು ಮೈದಾನದಲ್ಲಿ ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ ಅದೇ ದಿನ ರಾತ್ರಿ ನಡೆದಿದ್ದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್ ಕೂಡ ಪರಿಶೀಲಿಸಿದ್ದು ಕಂಡುಬಂದಿತ್ತು.
ಹೌದು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಬ್ಯಾಟ್ ಪರಿಶೀಲನೆ ಕೂಡ ಒಂದಾಗಿದೆ. ಫೀಲ್ಡ್ ಅಂಪೈರ್ಗೆ ಬ್ಯಾಟ್‌ನ ಬಗ್ಗೆ ಸಂದೇಹ ಬಂದರೆ ಮೈದಾನದಲ್ಲೇ ಪರಿಶೀಲಿಸಲು ಅವಕಾಶ ನೀಡಲಾಗಿದೆ.
ಈ ಹಿಂದೆ ಅಂಪೈರ್‌ಗಳಿಗೆ ಆಟಗಾರರ ಬ್ಯಾಟ್‌ನ ಬಗ್ಗೆ ಯಾವುದೇ ಸಂದೇಹ ಬಂದರೆ ಸಾರ್ವಜನಿಕವಾಗಿ ಅದನ್ನು ಪರಿಶೀಲನೆ ಮಾಡುವಂತಿರಲಿಲ್ಲ. ಬದಲಾಗಿ ಡ್ರೆಸಿಂಗ್ ರೂಮ್‌ನಲ್ಲಿ ಬ್ಯಾಟ್‌ನ ಗಾತ್ರದ ಪರೀಕ್ಷಿಸಲಾಗುತ್ತಿತ್ತು. ಈ ಸಂಪ್ರದಾಯವನ್ನು ಈ ಬಾರಿಯ ಐಪಿಎಲ್‌ನಿಂದ ಕೈ ಬಿಡಲಾಗಿದೆ.
Umpire checked Hetmyer and Salt bat before they came to bat 😭😭
— Aravind (@140_Manchester_) April 14, 2025
Unreal Aura🔥🔥 https://t.co/G8OTXYRObf pic.twitter.com/T9iJjhSYZt
ಮಿತಿ ನಿಗದಿ
ಐಪಿಎಲ್‌ನ ಪಂದ್ಯಗಳಿಗೆ ಬ್ಯಾಟ್‌ನ ಆಯಾಮಗಳಿಗೆ ಮಿತಿ ನಿಗದಿಪಡಿಸಿದೆ. ಅದರಂತೆ ಬ್ಯಾಟ್‌ನ ಅಗಲ 4.25 ಇಂಚುಗಳು ಅಥವಾ 10.8 ಸೆಂಟಿ ಮೀಟರ್, ಆಳ 2.64 ಇಂಚು (6.7 ಸೆಂ.ಮೀ), ಅಂಚು 1.56 ಇಂಚು (4.0 ಸೆಂ.ಮೀ) ಮೀರಿರಬಾರದು. ಬ್ಯಾಟ್‌ನ ಉದ್ದ ಹ್ಯಾಂಡಲ್‌ನ ಮೇಲ್ಭಾಗದಿಂದ ಬೇಸ್‌ನವರೆಗೆ 38 ಇಂಚು (96.4 ಸೆಂ.ಮೀ)ಗಿಂತ ಹೆಚ್ಚಿರಬಾರದು. ಇದನ್ನು ಫೀಲ್ಡ್ ಅಂಪೈರ್‌ಗಳು ಗೇಜ್ ಬಳಸಿ ಪರಿಶೀಲನೆ ಮಾಡುತ್ತಾರೆ.
ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಧೋನಿ-ಜಡೇಜಾ ಜೋಡಿ
ಸದ್ಯ ಪಂದ್ಯದ ವೇಳೆ ಪರಿಶೀಲನೆ ಮಾಡಲಾದ ಎಲ್ಲಾ ಬ್ಯಾಟರ್‌ಗಳು ನಿಗದಿ ಪಡಿಸಿದ ಮಿತಿಯಲ್ಲಿದ್ದವು. ಹೀಗಾಗಿ, ಬ್ಯಾಟರ್‌ಗಳಿಗೆ ಅದೇ ಬ್ಯಾಟ್ ಬಳಸಲು ಅವಕಾಶ ನೀಡಲಾಗಿತ್ತು. ಒಂದೊಮ್ಮೆ ಬ್ಯಾಟ್ ಹೆಚ್ಚಿನ ಅಗಲ ಮತ್ತು ತೂಕ ಇದ್ದರೆ ಆಟಗಾರನಿಗೆ ಈ ಬ್ಯಾಟ್‌ನಲ್ಲಿ ಆಡುವ ಅವಕಾಶ ನೀಡಲಾಗುವುದಿಲ್ಲ. ಆತ ಬ್ಯಾಟ್ ಬದಲಾಯಿಸಿ ನಿಯಮಕ್ಕೆ ಬದ್ಧವಾದ ಬ್ಯಾಟ್‌ನಲ್ಲಿಯೇ ಆಡಬೇಕು.