LA 2028 Olympics: ದಕ್ಷಿಣ ಕ್ಯಾಲಿಫೋರ್ನಿಯಾದ ಪೊಮೊನಾ ನಗರದಲ್ಲಿ ಒಲಿಂಪಿಕ್ಸ್ ಕ್ರಿಕೆಟ್ ಆಯೋಜನೆ
2028 olympics cricket: ಪೊಮೊನಾ ಲಾಸ್ ಏಂಜಲೀಸ್‌ನಿಂದ ಸರಿಸುಮಾರು 50 ಕಿಲೋಮೀಟರ್ ದೂರದಲ್ಲಿದೆ. ಮತ್ತು ಔಪಚಾರಿಕವಾಗಿ ಫೇರ್‌ಪ್ಲೆಕ್ಸ್ ಎಂದು ಕರೆಯಲ್ಪಡುವ ಫೇರ್‌ಗ್ರೌಂಡ್ಸ್ 500 ಎಕರೆ ವಿಸ್ತೀರ್ಣದ ಸ್ಥಳವಾಗಿದ್ದು, 1922 ರಿಂದ ಲಾಸ್ ಏಂಜಲೀಸ್ ಕೌಂಟಿ ಮೇಳವನ್ನು ಆಯೋಜಿಸುತ್ತಿದೆ.


ನವದೆಹಲಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್(LA 2028 Olympics)ನಲ್ಲಿ ಕ್ರಿಕೆಟ್(2028 olympics cricket) ಸೇರಿಸಿರುವುದನ್ನು ಈಗಾಗಲೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ದೃಢಪಡಿಸಿದೆ. ಇದೀಗ ಬರೋಬ್ಬರಿ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಯ ತಾಣವನ್ನು ಪ್ರಕಟಿಸಲಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಪೊಮೊನಾದಲ್ಲಿರುವ ಫೇರ್‌ಗ್ರೌಂಡ್ಸ್‌ನಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದು ಲಾಸ್ ಏಂಜಲೀಸ್ ಒಲಿಂಪಿಕ್ಸ್ ಸಂಘಟನಾ ಸಮಿತಿ ಘೋಷಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ಘೋಷಣೆಯನ್ನು ಸ್ವಾಗತಿಸಿದೆ.
'2028 ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಸೇರಿಸಲಾದ ಪ್ರಸಿದ್ಧ ಕ್ರೀಡೆಯಾದ ಕ್ರಿಕೆಟ್ (T20) ಪಂದ್ಯಾವಳಿ ನಡೆಸಲು ದಕ್ಷಿಣ ಕ್ಯಾಲಿಫೋರ್ನಿಯಾದ ಪೊಮೊನಾವನ್ನು ತಾತ್ಕಾಲಿಕ ಸ್ಥಳವಾಗಿ ಆಯ್ಕೆ ಮಾಡಲಾಗಿದೆ' ಎಂದು ಕ್ರೀಡಾಕೂಟದ ಆಯೋಜಕರು ಘೋಷಿಸಿದ್ದಾರೆ.
ಪೊಮೊನಾ ಲಾಸ್ ಏಂಜಲೀಸ್‌ನಿಂದ ಸರಿಸುಮಾರು 50 ಕಿಲೋಮೀಟರ್ ದೂರದಲ್ಲಿದೆ. ಮತ್ತು ಔಪಚಾರಿಕವಾಗಿ ಫೇರ್‌ಪ್ಲೆಕ್ಸ್ ಎಂದು ಕರೆಯಲ್ಪಡುವ ಫೇರ್‌ಗ್ರೌಂಡ್ಸ್ 500 ಎಕರೆ ವಿಸ್ತೀರ್ಣದ ಸ್ಥಳವಾಗಿದ್ದು, 1922 ರಿಂದ ಲಾಸ್ ಏಂಜಲೀಸ್ ಕೌಂಟಿ ಮೇಳವನ್ನು ಆಯೋಜಿಸುತ್ತಿದೆ.
ʼ2028 ರ ಲಾಸ್ ಏಂಜಲೀಸ್‌ನಲ್ಲಿ ಕ್ರಿಕೆಟ್ ನಡೆಯುವ ಸ್ಥಳದ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ಇದು ನಮ್ಮ ಕ್ರೀಡೆಯನ್ನು ಒಲಿಂಪಿಕ್ಸ್‌ಗೆ ಮರಳಿಸುವ ತಯಾರಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ' ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರಿಕೆಟ್‌ನಲ್ಲಿ 6 ತಂಡಗಳಿಗೆ ಅವಕಾಶ
ಟಿ20 ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ 6 ತಂಡಗಳಿಗಷ್ಟೇ ಸ್ಪರ್ಧಿಸುವ ಅವಕಾಶವಿದೆ. ಆದರೆ ಅರ್ಹತೆ ಪಡೆಯುವುದು ಹೇಗೆ ಎಂಬುದನ್ನು ಇನ್ನಷ್ಟೇ ನಿರ್ಧರಿಸಲಾಗುವುದು. ಅಮೆರಿಕ ಆತಿಥೇಯ ರಾಷ್ಟ್ರವಾದ ಕಾರಣ ನೇರ ಪ್ರವೇಶ ಪಡೆಯಬಹುದು. ಆದ್ದರಿಂದ ಅರ್ಹತೆ ಪಡೆಯಲು 5 ರಾಷ್ಟ್ರಗಳಷ್ಟೇ ಉಳಿದಂತಾಗುತ್ತದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದಿತ್ತು ಕ್ರಿಕೆಟ್
ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ಕ್ರಿಕೆಟ್ ಆಡಿದ್ದು 1900ರಲ್ಲಿ. ಅಂದಿನ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 4 ತಂಡಗಳು ಆಡಬೇಕಿತ್ತು. ಗ್ರೇಟ್ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್. ಆದರೆ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಹಿಂದೆ ಸರಿದ ಕಾರಣ ಕೊನೆಗೆ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಟೆಸ್ಟ್ ಮಾದರಿಯಲ್ಲಿ 2 ದಿನಗಳ ಒಂದು ಪಂದ್ಯವನ್ನು ಆಡಲಾಯಿತು. ಇದನ್ನು ಗ್ರೇಟ್ ಬ್ರಿಟನ್ 158 ರನ್ನುಗಳಿಂದ ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತ್ತು.