ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರಿಕೆಟ್‌ನಲ್ಲಿ 6 ತಂಡಗಳಿಗೆ ಅವಕಾಶ
Los Angeles 2028 Olympics: 2023ರಲ್ಲಿ ಮುಂಬೈನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಕ್ರಿಕೆಟ್ ಜತೆಗೆ ಒಟ್ಟು ಐದು ಆಟಗಳನ್ನು ಸೇರ್ಪಡೆ ಮಾಡಲಾಗಿತ್ತು. ಅವುಗಳೆಂದರೆ ಕ್ರಿಕೆಟ್, ಫ್ಲ್ಯಾಗ್ ಫುಟ್ ಬಾಲ್, ಬೇಸ್‌ಬಾಲ್-ಸಾಫ್ಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್.


ಲಾಸ್ ಏಂಜಲೀಸ್: 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟ(Los Angeles 2028 Olympics)ದಲ್ಲಿ ಕ್ರಿಕೆಟ್ ಪಂದ್ಯ ಕೂಡ ನಡೆಯಲಿದೆ. 128 ವರ್ಷಗಳ ಬಳಿಕ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನಡೆಯುತ್ತಿದೆ. ಪುರುಷರು ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಆರು ತಂಡಗಳ 90 ಆಟಗಾರರು ಭಾಗವಹಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಗುರುವಾರ ದೃಢಪಡಿಸಿದೆ. ಜತೆಗೆ ಟಿ20 ಸ್ವರೂಪದಲ್ಲಿ ಪಂದ್ಯಗಳನ್ನು ಆಡಲಾಗುವುದು ಎಂದು ತಿಳಿಸಿದೆ.
ಆದರೆ, ಕ್ರಿಕೆಟ್ ಪಂದ್ಯಾವಳಿಗೆ ಅರ್ಹತಾ ಮಾನದಂಡಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ. ಐಸಿಸಿ ಅಡಿಯಲ್ಲಿ 12 ಪೂರ್ಣ-ಸದಸ್ಯ ರಾಷ್ಟ್ರಗಳಿದ್ದು, ಟಿ 20 ಆಡುವ ಇತರ 90 ಕ್ಕೂ ಹೆಚ್ಚು ದೇಶಗಳಿವೆ. ಒಲಿಂಪಿಕ್ಸ್ ಆತಿಥ್ಯವಹಿಸಿದ ಯುಎಸ್ಎ ಕ್ರೀಡಾಕೂಟದಲ್ಲಿ ನೇರ ಸ್ಥಾನವನ್ನು ಗಳಿಸುವ ಸಾಧ್ಯತೆಯಿರುವುದರಿಂದ, ಅರ್ಹತಾ ಪ್ರಕ್ರಿಯೆಯಲ್ಲಿ ಕೇವಲ ಐದು ತಂಡಗಳಿಗೆ ಮಾತ್ರ ಅವಕಾಶವಿದೆ.
2023ರಲ್ಲಿ ಮುಂಬೈನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಭೆಯಲ್ಲಿ ಕ್ರಿಕೆಟ್ ಜತೆಗೆ ಒಟ್ಟು ಐದು ಆಟಗಳನ್ನು ಸೇರ್ಪಡೆ ಮಾಡಲಾಗಿತ್ತು. ಅವುಗಳೆಂದರೆ ಕ್ರಿಕೆಟ್, ಫ್ಲ್ಯಾಗ್ ಫುಟ್ ಬಾಲ್, ಬೇಸ್‌ಬಾಲ್-ಸಾಫ್ಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್. 2028 ರ ಕ್ರೀಡಾಕೂಟವು ಒಟ್ಟು 351 ಪದಕ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ - ಪ್ಯಾರಿಸ್ ಒಲಿಂಪಿಕ್ಸ್‌ಗಿಂತ 22 ಹೆಚ್ಚು.
1900ರ ಬಳಿಕ ಮೊದಲ ಬಾರಿಗೆ ಕ್ರಿಕೆಟನ್ನು ಒಲಿಂಪಿಕ್ ಸ್ಥಾನಮಾನ ಲಭಿಸಿದೆ. ಒಲಿಂಪಿಕ್ ಕಾರ್ಯಕ್ರಮಕ್ಕೆ ಕ್ರಿಕೆಟನ್ನು ಸೇರಿಸುವುದರಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಭಾರತದ ಪ್ರಸಾರ ಹಕ್ಕುಗಳ ಮೌಲ್ಯವನ್ನು 100 ಮಿಲಿಯನ್ ಡಾಳರ್ ಗಿಂತ ಹೆಚ್ಚು ವೃದ್ದಿಸುವ ನಿರೀಕ್ಷೆಯಿದೆ.
ಐಸಿಸಿ ಅಧ್ಯಕ್ಷ ಜಯ್ ಶಾ ಅವರು 2032 ರ ಬ್ರಿಸ್ಬೇನ್ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಭವಿಷ್ಯದ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಹಲವು ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. 2028 ರಲ್ಲಿ ಕ್ರಿಕೆಟ್ ಅನ್ನು ಒಲಿಂಪಿಕ್ ಹಂತಕ್ಕೆ ತರುವ ಅಭಿಯಾನದಲ್ಲಿ ಜಯ್ ಶಾ ಪ್ರಮುಖ ಪಾತ್ರ ವಹಿಸಿದ್ದರು.