ನವಿ ಮುಂಬೈ: ಭಾರತ ಮಹಿಳಾ ತಂಡ ಚೊಚ್ಚಲ ಐಸಿಸಿ ವಿಶ್ವಕಪ್(Women's World Cup 2025 final) ಕಿರೀಟಕ್ಕೆ ಮುತ್ತಿಡಲು ಇನ್ನೊಂದು ಗೆಲುವಿನ ದೂರದಲ್ಲಿದೆ. ಸೆಮಿ ಫೈನಲ್‌ನಲ್ಲಿ 7 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಮಣ್ಣುಮುಕ್ಕಿಸಿದ ವಿಶ್ವಾಸಲ್ಲಿರುವ ಹರ್ಮನ್‌ಪ್ರೀತ್ ಕೌರ್ ಪಡೆ, ನವಿ ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(South Africa vs India) ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಣ ಈ ಕಾದಾಟ ತೀವ್ರ ಕುತೂಹಲ ಮೂಡಿಸಿದ್ದರೂ, ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ನಡುಕವೊಂದು ಶುರುವಾಗಿದೆ. ಇದಕ್ಕೆ ಕಾರಣ 2023ರ ಪುರುಷರ ಏಕದಿನ ಫೈನಲ್.
ಹೌದು, 2023ರ ವಿಶ್ವಕಪ್‌ನಲ್ಲಿ ಭಾರತ ಅಜೇಯವಾಗಿ ಫೈನಲ್ ತಲುಪಿತ್ತು. ಫೈನಲ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮ ಮತ್ತು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಟ್ರೋಫಿ ಜತೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆಗ ರೋಹಿತ್ ಟ್ರೋಫಿಯ ಎಡ ಭಾಗಕ್ಕೆ ನಿಂತಿದ್ದರು. ಫೈನಲ್‌ನಲ್ಲಿ ಭಾರತ ಸೋಲು ಕಂಡಿತ್ತು. ಇದೀಗ ಮಹಿಳಾ ವಿಶ್ವಕಪ್ ಟ್ರೋಫಿ ಫೋಟೋಶೂಟ್ ವೇಳೆ ಹರ್ಮನ್‌ಪ್ರೀತ್ ಕೌರ್ ಎಡ ಭಾಗದಲ್ಲಿ ನಿಂತಿದ್ದಾರೆ. ಈ ಆಧಾರದಲ್ಲಿ ಇದೀಗ ನೆಟ್ಟಿಗರು ಭಾರತ ಕಪ್ ಗೆಲ್ಲುವುದು ಅನುಮಾನ ಎಂದಿದ್ದಾರೆ.
ಇದನ್ನೂ ಓದಿ Women's World Cup final: ಚಾರಿತ್ರಿಕ ವಿಶ್ವಕಪ್ ಟ್ರೋಫಿಗೆ ಭಾರತ-ದಕ್ಷಿಣ ಆಫ್ರಿಕಾ ಆಟಗಾರ್ತಿಯರ ಸೆಣಸು
ಇನ್ನು ಕೆಲ ನೆಟ್ಟಿಗರು ಈ ಬಾರಿ ಅದೃಷ್ಟ ಬದಲಾಗುತ್ತದೆ, ಭಾರತ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಒಂದೊಮ್ಮೆ ದಕ್ಷಿಣ ಆಫ್ರಿಕಾ ಗೆದ್ದರೆ ಟ್ರೋಫಿಯ ಬಲ ಭಾಗದಲ್ಲಿ ನಿಂತವರು ಅದೃಷ್ಟಶಾಲಿಗಳಿಗಳು ಎಂಬ ನಂಬಿಕೆ ಮತ್ತೆ ಮುಂದುವರಿಯಲಿದೆ. ಈ ಬಾರಿ ಅದೃಷ್ಟ ಯಾರಿಗೆ ಒಲಿಯಲಿದೆ ಎನ್ನುವುದು ಭಾನುವಾರ ನಿರ್ಧಾರವಾಗಲಿದೆ.