ಕಳವಾಗಿದ್ದ ಸೋಮಯ್ಯರ ಒಲಿಂಪಿಕ್ಸ್ ಚಿನ್ನದ ಪದಕ ಸೇರಿ ಕ್ರೀಡಾ ಗೌರವ ಪತ್ತೆ; ಇಬ್ಬರ ಬಂಧನ
M. M. Somaya: ಸೋಮಯ್ಯ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಸೋಮಯಾ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರವನ್ನೂ ಬರೆದಿದ್ದರು.
hockey legend MM Somaya -
ಬೆಂಗಳೂರು, ನ.11: ಭಾರತ ಹಾಕಿ ತಂಡದ ಮಾಜಿ ನಾಯಕ ಮನೆಯಪಂಡ ಮುತ್ತಣ್ಣ ಸೋಮಯ್ಯ ಅವರ ಮನೆಯಿಂದ ಕಳವಾಗಿದ್ದ ಮಾಸ್ಕೊ ಒಲಿಂಪಿಕ್ಸ್ ಚಿನ್ನದ ಪದಕ ಸೇರಿ ವಿವಿಧ ಕ್ರೀಡಾಕೂಟಗಳಲ್ಲಿ ಗೆದ್ದ ಪದಕಗಳು, ನಗದು ಹಾಗೂ ಬೆಳ್ಳಿ ಆಭರಣಗಳನ್ನು ಬೆಂಗಳೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅ.25ರಂದು ಸೋಮಯ್ಯ ಅವರು ತಮ್ಮ ಕುಟುಂಬಸ್ಥರ ಜೊತೆಗೆ ಕೊಡಗು ಜಿಲ್ಲೆಗೆ ತೆರಳಿದ್ದರು. ಈ ವೇಳೆ ಇಬ್ಬರು ಕಳ್ಳರು ಮನೆಗೆ ನುಗ್ಗಿ, 1980ರಲ್ಲಿ ಮಾಸ್ಕೊದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಹಾಕಿ ತಂಡವನ್ನು ಪ್ರತಿನಿಧಿಸಿ ಗೆದ್ದಿದ್ದ ಚಿನ್ನ, 1982ರಲ್ಲಿ ನವದೆಹಲಿಯ ಏಷ್ಯನ್ ಗೇಮ್ಸ್ನಲ್ಲಿ ಗಳಿಸಿದ ಬೆಳ್ಳಿ ಪದಕ, 1986ರಲ್ಲಿ ಸೋಲ್ ಏಷ್ಯನ್ ಗೇಮ್ಸ್ನಲ್ಲಿ ಗಳಿಸಿದ ಕಂಚಿನ ಪದಕ, 1982ರಲ್ಲಿ ಆ್ಯಮ್ಸ್ಟರ್ಡ್ಯಾಂ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಳಿಸಿದ ಕಂಚಿನ ಪದಕ, ತಲಾ 72 ಗ್ರಾಂನ ಎರಡು ಬೆಳ್ಳಿಯ ಕಪ್ಗಳು, 10 ಗ್ರಾಂನ ಚಿನ್ನದ ಬಳೆ, 200 ಗ್ರಾಂನ ಆರು ಬೆಳ್ಳಿ ಚಮಚಗಳು, 80 ಗ್ರಾಂ ತೂಕದ ಒಂದು ಬೆಳ್ಳಿ ಪಾತ್ರೆ, 8 ಗ್ರಾಂ ತೂಕದ ಒಂದು ಚಿನ್ನದ ನಾಣ್ಯ ಹಾಗೂ ₹30 ಸಾವಿರ ನಗದು ದೋಚಿ ಪರಾರಿಯಾಗಿದ್ದರು.
ಇದೀಗ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳುವಾದ ಎಲ್ಲಾ ವಸ್ತುಗಳು ಸೇರಿ ಎಂಟು ಪದಕಗಳು, ಒಂದು ಕ್ಯಾಮೆರಾ, ಕೊಡಗು ಶೈಲಿಯ ಕಠಾರಿ, ಒಲಿಂಪಿಕ್ ಕಿಟ್ ಬ್ಯಾಗ್ ಹಾಗೆಯೇ ಈ ಅಪರಾಧಕ್ಕೆ ಬಳಸಲಾಗಿದೆ ಎಂದು ಶಂಕಿಸಲಾದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಾರತ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ: ರವೀಂದ್ರ, ಕಾನ್ವೇ ಕಮ್ಬ್ಯಾಕ್
ರಾಮನಗರದ ಹಗಲಹಳ್ಳಿ ಕ್ರಾಸ್ ಬಳಿ ಸೋಮವಾರ, ಕಾರ್ಮಿಕರಾದ ಮಾಣಿಕ್ಯ ಅಲಿಯಾಸ್ ಮಣಿಕಂಠ (31) ಮತ್ತು ಭರತ್ (25) ಎಂಬುವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇವರು ಮತ್ತೊಬ್ಬ ಸಹಚರನೊಂದಿಗೆ ಸೇರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆ ಮೂರನೇ ವ್ಯಕ್ತಿ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
"ಇಬ್ಬರೂ ಆರೋಪಿಗಳು ಬೆಂಗಳೂರಿನವರಾಗಿದ್ದು, ಅವರ ವಿರುದ್ಧ ಈ ಹಿಂದೆಯೇ ಪ್ರಕರಣಗಳು ದಾಖಲಾಗಿವೆ. ಮಾಣಿಕ್ಯ, ಕರ್ನಾಟಕದಲ್ಲಿ 25 ಪ್ರಕರಣಗಳಲ್ಲಿ ಹಾಗೂ ತಮಿಳುನಾಡಿನಲ್ಲಿ ಎಂಟು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇವುಗಳ ಪೈಕಿ, ಮೂರು ಪ್ರಕರಣಗಳಲ್ಲಿ ಆತನನ್ನು 'ಘೋಷಿತ ಅಪರಾಧಿ'ಯನ್ನಾಗಿ ಘೋಷಿಸುವ ಪ್ರಕ್ರಿಯೆ ನಡೆದಿದೆ ಮತ್ತು ಆರು ಪ್ರಕರಣಗಳಲ್ಲಿ ಆತನ ವಿರುದ್ಧ ಜಾಮೀನು ರಹಿತ ವಾರಂಟ್ಗಳು ಬಾಕಿ ಇವೆ. ಇನ್ನೊಬ್ಬ ಆರೋಪಿಯು ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಈ ಪದಕಗಳ ಮಹತ್ವದ ಬಗ್ಗೆ ಆರೋಪಿಗಳಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಾಜಿನಗರದಲ್ಲಿರುವ ಚಿನ್ನ ಖರೀದಿಸುವ ಸಂಸ್ಥೆಯೊಂದಕ್ಕೆ ತಾವು ಒಂದು ಚಿನ್ನದ ಪದಕ ಮತ್ತು ಒಂದು ಬೆಳ್ಳಿಯ ಪದಕವನ್ನು ಮಾರಾಟ ಮಾಡಿರುವುದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಉಳಿದ ಆರು ಪದಕಗಳು ಮತ್ತು ಇತರ ವಸ್ತುಗಳನ್ನು ಹೊಸಕೋಟೆಯ 'ಎಚ್ ಕ್ರಾಸ್' (H Cross) ಬಳಿ ಇರುವ ಆರೋಪಿಗಳ ಪೈಕಿ ಒಬ್ಬನ ಮನೆಯಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕಳುವಾಗಿದ್ದ ಪದಕಗಳನ್ನು ಪತ್ತೆಹಚ್ಚಿದ್ದಕ್ಕಾಗಿ ಸೋಮಯ್ಯ ಅವರು ಪೊಲೀಸರಿಗೆ ಧನ್ಯವಾದ ಅರ್ಪಿಸಿದರು. "ಈ ಪದಕಗಳನ್ನು ಮತ್ತೊಮ್ಮೆ ಗೆದ್ದುಕೊಂಡ ಅನುಭವವಾಗುತ್ತಿದೆ" ಎಂದು ಅವರು ಹೇಳಿದರು.
ಪೊಲೀಸ್ ಉಪ ಆಯುಕ್ತ (ಪೂರ್ವ) ವಿಕ್ರಮ್ ಅಮಟೆ ಅವರ ನೇತೃತ್ವದಲ್ಲಿ ಎಂಟು ವಿಶೇಷ ತಂಡಗಳಲ್ಲಿದ್ದ ಸುಮಾರು 85 ಪೊಲೀಸ್ ಸಿಬ್ಬಂದಿ ನಡೆಸಿದ 15 ದಿನಗಳ ತನಿಖೆಯ ನಂತರ ಈ ಬಂಧನಗಳು ನಡೆದಿವೆ. ಸೋಮಯ್ಯ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರವನ್ನೂ ಬರೆದು ತನಿಖೆಗೆ ಆಗ್ರಹಿಸಿದ್ದರು.
ಅಕ್ಟೋಬರ್ 28ರ ಬೆಳಿಗ್ಗೆ 7.15ರ ಸುಮಾರಿಗೆ ಪಕ್ಕದ ಮನೆಯ ಮಾಲೀಕ ಕರೆ ಮಾಡಿ ಮನೆಯ ಬಾಗಿಲು ತೆರೆದಿರುವುದಾಗಿ ಮಾಹಿತಿ ನೀಡಿದ್ದರು. ಮನೆಯಲ್ಲಿ ಕಳ್ಳತನ ಆಗಿರುವ ಶಂಕೆಯನ್ನೂ ವ್ಯಕ್ತಪಡಿಸಿದ್ದರು. ಬಳಿಕ ನಾರಾಯಣ್ ಅವರು ತಮ್ಮ ಮನೆಯಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು, ಮನೆಯ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಒಳಗೆ ನುಗ್ಗಿತ್ತಿರುವ ದೃಶ್ಯ ಸೆರೆಯಾಗಿತ್ತು.