IPL 2025: ಚೆಪಾಕ್‌ನಲ್ಲಿ ಹಾರಲು ಸಿದ್ಧಗೊಳ್ಳುತ್ತಿದೆ ಧೋನಿಯ 'ಹೆಲಿಕಾಪ್ಟರ್ ಶಾಟ್'
MS Dhoni Practices Power-Hitting: ಧೋನಿ ಈ ಬಾರಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರಾ ಅಥವಾ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಆಗಿ ಆಡಲಿದ್ದಾರಾ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಮೂಲಗಳ ಪ್ರಕಾರ ಅವರು ಕೆಲ ಪಂದ್ಯಗಳಲ್ಲಿ ಮಾತ್ರ ಪೂರ್ಣಪ್ರಮಾಣದಲ್ಲಿ ಆಡಿ ಆ ಬಳಿಕ ಬಹುತೇಕ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟ್ ಬೀಸಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ದೊಡ್ಡ ಹೊಡೆತದ ಅಭ್ಯಾಸ ನಡೆಸುವಂತೆ ಕಾಣುತ್ತಿದೆ.


ಚೆನ್ನೈ: ಬಹುನಿರೀಕ್ಷಿತ ಐಪಿಎಲ್(IPL 2025) ಟೂರ್ನಿ ಮುಂದಿನ ತಿಂಗಳು ಮಾ. 22ರಿಂದ ಆರಂಭಗೊಳ್ಳಲಿದೆ. ಟೂರ್ನಿಗೆ ಒಂದು ತಿಂಗಳು ಬಾಕಿ ಇರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರು ಮೈದಾನವಾದ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದೆ. ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ತಮ್ಮ ನೆಚ್ಚಿನ 'ಹೆಲಿಕಾಪ್ಟರ್ ಶಾಟ್' ಮೂಲಕ ಸಿಕ್ಸರ್ ಬಾರಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೊ ಕಂಡ ಅವರ ಅಭಿಮಾನಿಗಳಿಗೆ ಪಂದ್ಯಕ್ಕೂ ಮುನ್ನವೇ ಭಾರೀ ಕುತೂಹಲ ಕೆರಳಿಸುವಂತೆ ಮಾಡಿದೆ. ಚೆನ್ನೈ ತಂಡ ಮಾ. 23 ರಂದು ಮುಂಬೈ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ವೈರಲ್ ಆಗುತ್ತಿರುವ ಫೋಟೊದಲ್ಲಿ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿ, ಪ್ಯಾಡ್‌ಗಳನ್ನು ಧರಿಸಿ ಬ್ಯಾಟಿಂಗ್ ನಡೆಸುವುದನ್ನು ಕಾಣಬಹುದಾಗಿದೆ. ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನ್‌ಕ್ಯಾಪ್ಟ್ ನಿಯಮದ ಅಡಿಯಲ್ಲಿ ಧೋನಿಯನ್ನು 4 ಕೋಟಿ ರೂ. ನೀಡಿ ರಿಟೇನ್ ಮಾಡಿತ್ತು. ಹಿಂದಿನಿಂದಲೂ ಐಪಿಎಲ್ ಆರಂಭಕ್ಕೆ ತಿಂಗಳುಗಳು ಬಾಕಿ ಇರುವ ಮುಂಚೆಯೇ ಅಭ್ಯಾಸ ನಡೆಸಿ ಫಾರ್ಮ್ ಕಂಡುಕೊಳ್ಳುವುದು ಧೋನಿಯ ಗುಣವಾಗಿದೆ.
ಧೋನಿ ಈ ಬಾರಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರಾ ಅಥವಾ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಆಗಿ ಆಡಲಿದ್ದಾರಾ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಮೂಲಗಳ ಪ್ರಕಾರ ಅವರು ಕೆಲ ಪಂದ್ಯಗಳಲ್ಲಿ ಮಾತ್ರ ಪೂರ್ಣಪ್ರಮಾಣದಲ್ಲಿ ಆಡಿ ಆ ಬಳಿಕ ಬಹುತೇಕ ಪಂದ್ಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟ್ ಬೀಸಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ದೊಡ್ಡ ಹೊಡೆತದ ಅಭ್ಯಾಸ ನಡೆಸುವಂತೆ ಕಾಣುತ್ತಿದೆ.
ಕಳೆದ ವರ್ಷ ತಂಡದಲ್ಲಿ ಸಮರ್ಥ ವಿಕೆಟ್ ಕೀಪರ್ ಇಲ್ಲದ ಕಾರಣದಿಂದ ಮಂಡಿ ನೋವಿನ ಮಧ್ಯೆಯೇ ಧೋನಿ ಕೀಪಿಂಗ್ ನಡೆಸಿದ್ದರು. ಈ ಬಾರಿ ತಂಡದಲ್ಲಿ ಪರಿಣಿತ ಕೀಪರ್ ಡೆವೋನ್ ಕಾನ್ವೆ ತಂಡದಲ್ಲಿರುವ ಕಾರಣ ಇವರೂ ಕೂಡ ಕೀಪಿಂಗ್ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ IPL 2025 Schedule: ಮಾ. 22ರಂದು ಐಪಿಎಲ್ ಹಬ್ಬಕ್ಕೆ ಚಾಲನೆ; ಇಲ್ಲಿದೆ ಸಂಪೂರ್ಣ ಪಟ್ಟಿ
ಚೆನ್ನೈ ತಂಡ
ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ನೂರ್ ಅಹ್ಮದ್, ಆರ್. ಅಶ್ವಿನ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಖಲೀಲ್ ಅಹ್ಮದ್, ವಿಜಯ್ ಶಂಕರ್, ಸ್ಯಾಮ್ ಕರನ್, ಅಂಶುಲ್ ಕಂಬೋಜ್, ಶೇಕ್ ರಶೀದ್, ಮುಕೇಶ್ ಚೌಧರಿ, ದೀಪಕ್ ಹೂಡಾ, ಗುರುಜಪ್ನೀತ್ ಸಿಂಗ್ ,ನಾಥನ್ ಎಲ್ಲಿಸ್, ಜೇಮಿ ಓವರ್ಟನ್, ಕಮಲೇಶ್ ನಾಗರಕೋಟಿ, ರಾಮಕೃಷ್ಣ ಘೋಷ್, ಶ್ರೇಯಸ್ ಗೋಪಾಲ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್.