Neeraj Chopra Marriage: ಸದ್ದಿಲ್ಲದೆ ಹಸೆಮಣೆ ಏರಿದ ಚಿನ್ನದ ಹುಡುಗ ನೀರಜ್
ನೀರಜ್ ವಿವಾಹವಾದ ಹುಡುಗಿ ಹಿಮಾನಿ ಪ್ರಸ್ತುತ ಯುಎಸ್‌ಎಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Neeraj Chopra Married

ನವದೆಹಲಿ: ಭಾರತದ ಖ್ಯಾತ ಜಾವೆಲಿನ್ ಪಟು ಹಾಗೂ ಅವಳಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra Marriage) ಅವರು ಸದ್ದಿಲ್ಲದೆ ಹಿಮಾನಿ ಮೋರ್ ಜತೆ ಹಸೆಮಣೆ ಏರಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾದರು. ವಿವಾಹದ ಫೋಟೊವನ್ನು ನೀರಜ್ ಚೋಪ್ರಾ ಅವರು ಭಾನುವಾರ(ಜ.19) ರಾತ್ರಿ ವೇಳೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಬಿತ್ತರಿಸಿದರು.
ಮದುವೆಯ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನೀರಜ್, 'ಕುಟುಂಬದೊಂದಿಗೆ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ. ಈ ಕ್ಷಣದಲ್ಲಿ ನಮ್ಮನ್ನು ಹಾರೈಸಿದ ಮತ್ತು ಆಶೀರ್ವದಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಪ್ರೀತಿಯಿಂದ ಬಂಧಿತನಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ನೀರಜ್ ವಿವಾಹವಾದ ಹುಡುಗಿ ಹಿಮಾನಿ ಟೆನಿಸ್ ಆಟಗಾರ್ತಿಯಾಗಿದ್ದು, ಪ್ರಸ್ತುತ ಯುಎಸ್‌ಎಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ನೀರಜ್ ಅವರ ಬ್ರಾಂಡ್ ಮೌಲ್ಯ ಭಾರೀ ಏರಿಕೆ ಕಂಡಿದೆ. ಎಕನಾಮಿಕ್ ಟೈಮ್ಸ್ ಪ್ರಕಾರ, ಹಣಕಾಸು ಸಲಹಾ ಸಂಸ್ಥೆ ಕ್ರೋಲ್‌ನ ಅಂಕಿಅಂಶಗಳ ವರದಿಯ ಪ್ರಕಾರ ನೀರಜ್ ಚೋಪ್ರಾ ಬ್ರ್ಯಾಂಡ್ ಮೌಲ್ಯ 29.6 ದಶಲಕ್ಷ ಡಾಲರ್ ನಿಂದ 40 ದಶಲಕ್ಷ ಡಾಲರ್ಗೆ ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ಅವರ ಬ್ರ್ಯಾಂಡ್ ಮೌಲ್ಯ 330 ಕೋಟಿ ರೂ. ಆಗಿದೆ. ಇದು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ(hardik pandya) ಬ್ರ್ಯಾಂಡ್ ಮೌಲ್ಯಕ್ಕಿಂತ ಹೆಚ್ಚಾಗಿದೆ. ನೀರಜ್ ಪ್ರಸ್ತುತ 24 ವಿವಿಧ ವರ್ಗಗಳಲ್ಲಿ 21 ಬ್ರ್ಯಾಂಡ್‌ಗಳನ್ನು ಹೊಂದಿದ್ದಾರೆ.