2026ರ ಸಾಲಿನ ಫಿಫಾ ವಿಶ್ವಕಪ್ ಟೂರ್ನಿ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಫೈನಲ್‌ನ ರೋಚಕ ಹಣಾಹಣಿಯಲ್ಲಿ ಅರ್ಜೆಂಟೀನಾ ವಿರುದ್ಧ 1-0 ಅಂತರದ ಐತಿಹಾಸಿಕ ಜಯ ದಾಖಲಿಸಿದ ಸ್ಪೇನ್, ಬರೋಬ್ಬರಿ 16 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವ ಚಾಂಪಿಯನ್ಸ್ ಪಟ್ಟಕ್ಕೇರಿದೆ.
ಸಾಮಾನ್ಯವಾಗಿ ಅರ್ಜೆಂಟೀನಾ ಎಂದರೆ ವಿಶ್ವದಾದ್ಯಂತ ಅಚ್ಚುಮೆಚ್ಚಿನ ತಂಡ. ವಿಶ್ವಶ್ರೇಷ್ಠ ಫುಟ್ಬಾಲರ್ ಲಿಯೋನೆಲ್ ಮೆಸ್ಸಿಗೆ ಇರುವ ಅಪಾರ ಅಭಿಮಾನಿ ಬಳಗದಿಂದಾಗಿ ಅರ್ಜೆಂಟೀನಾಗೆ ಯಾವಾಗಲೂ ಬೆಟ್ಟದಷ್ಟು ಬೆಂಬಲ ಸಿಗುತ್ತಿತ್ತು. ಆದರೆ, 2026ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಅಭಿಮಾನಿಗಳ ಪಾಲಿಗೆ 'ವಿಲನ್' ಆಗಿ ಬದಲಾಗಿದೆಯೇ? ಇಂತಹುದೊಂದು ವ್ಯಾಪಕ ಚರ್ಚೆ ಮತ್ತು ಆಕ್ರೋಶ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಅಲ್ವಿದಾ ಲಿಯೋನೆಲ್ ಮೆಸ್ಸಿ: ಕಣ್ಣೀರ ವಿದಾಯದಲ್ಲೂ ಸಾರ್ಥಕತೆ ಕಂಡ ಮಾಂತ್ರಿಕ!
ವಿವಾದ ಸೃಷ್ಟಿಸಿದ ಫೈನಲ್ ಹಾದಿ
ಅಭಿಮಾನಿಗಳ ಈ ಬೇಸರಕ್ಕೆ ಬಲವಾದ ಕಾರಣಗಳೂ ಇವೆ. ಈ ಬಾರಿಯ ಟೂರ್ನಿಯಲ್ಲಿ ಅರ್ಜೆಂಟೀನಾ ಫೈನಲ್‌ಗೆ ತಲುಪಿದ ಹಾದಿಯೇ ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಸೆಮಿಫೈನಲ್ ಹಂತದವರೆಗೂ ತಂಡವು ವಿಶ್ವ ಶ್ರೇಯಾಂಕದ ಟಾಪ್ 15ರ ಒಳಗಿರುವ ಯಾವುದೇ ಬಲಿಷ್ಠ ತಂಡವನ್ನು ಎದುರಿಸಲೇ ಇಲ್ಲ! ಇದರೊಂದಿಗೆ ಟೂರ್ನಿಯುದ್ದಕ್ಕೂ ರೆಫ್ರಿಯ ಹಲವು ನಿರ್ಧಾರಗಳು ಅರ್ಜೆಂಟೀನಾ ಪರವಾಗಿಯೇ ಇದ್ದವು ಎಂಬ ಆರೋಪ ಕೇಳಿಬಂದಿದೆ. ಕೇಪ್ ವರ್ಡೆ ವಿರುದ್ಧದ ಪಂದ್ಯ, ಈಜಿಪ್ಟ್ ವಿರುದ್ಧದ ಸೆಣಸಾಟ ಹಾಗೂ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲೂ ರೆಫ್ರಿಗಳ ವಿವಾದಾತ್ಮಕ ತೀರ್ಪುಗಳು ಅರ್ಜೆಂಟೀನಾಗೆ ವರದಾನವಾದವು ಎಂಬುದು ಈಗ ಜಗಜ್ಜಾಹೀರಾಗಿದೆ.
ಫಿಫಾ ವಿಶ್ವಕಪ್ ಗೆದ್ದ ಸ್ಪೇನ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?
'ಆನ್‌ಫೀಲ್ಡ್ ರೌಡಿಸಂ' ಮತ್ತು ರೆಫ್ರಿಯ ಅಸಹಾಯಕತೆ
ಹಿಂದಿನ ಆವೃತ್ತಿಗಳಲ್ಲಿ ಕಂಡ ಶಿಸ್ತಿನ ಅರ್ಜೆಂಟೀನಾ ತಂಡಕ್ಕೂ, ಈ ಬಾರಿಯ ತಂಡಕ್ಕೂ ಆಕಾಶ-ಭೂಮಿಯಷ್ಟು ವ್ಯತ್ಯಾಸವಿತ್ತು. 2022ರಲ್ಲಿ ಅರ್ಜೆಂಟೀನಾ ಟ್ರೋಫಿ ಗೆದ್ದಾಗ ಇಡೀ ವಿಶ್ವವೇ ಸಂಭ್ರಮಿಸಿತ್ತು. ಅಂದು ಶಿಸ್ತು ಹಾಗೂ ಬದ್ಧತೆಯ ಆಟ ಪ್ರದರ್ಶಿಸಿದ್ದ ಅರ್ಜೆಂಟೀನಾ, 2026ರಲ್ಲಿ ಸಂಪೂರ್ಣ ನೆಗೆಟಿವ್ ಆಗಿ ಕಂಡುಬಂತು. ಸ್ಪೇನ್ ವಿರುದ್ಧದ ಫೈನಲ್ ಪಂದ್ಯ ನೋಡಿದ ಯಾರಿಗಾದರೂ ಇದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ.
ಪಂದ್ಯದುದ್ದಕ್ಕೂ ಸಾಲು ಸಾಲು ಅಪಾಯಕಾರಿ ಟ್ಯಾಕಲ್‌ಗಳು (Dangerous Tackles) ನಡೆದರೂ ರೆಫ್ರಿ ಕಣ್ಣಿದ್ದು ಕುರುಡರಂತೆ ವರ್ತಿಸಿದರು. ಮೈದಾನದಲ್ಲಿ ರೆಫ್ರಿಯೇ ಅರ್ಜೆಂಟೀನಾದ 12ನೇ ಆಟಗಾರನಂತೆ ಬೆಂಬಲಕ್ಕೆ ನಿಂತಾಗ, ಆಟಗಾರರು ಅದರ ದುರ್ಲಾಭ ಪಡೆಯದೇ ಇರುತ್ತಾರೆಯೇ? ಪಂದ್ಯ ಜಿದ್ದಾಜಿದ್ದಿನ ಆಟ ಬಿಟ್ಟು, ತೀರಾ ಅತಿರೇಕದ ಹೊಡೆದಾಟಕ್ಕೆ ತಿರುಗಿತು. ರೆಫ್ರಿ ಎಷ್ಟೇ ರಕ್ಷಿಸಲು ಯತ್ನಿಸಿದರೂ, ಅರ್ಜೆಂಟೀನಾ ಆಟಗಾರರ ಒರಟು ವರ್ತನೆ ಮಿತಿಮೀರಿದಾಗ ಕೊನೆಗೆ ಅನಿವಾರ್ಯವಾಗಿ ನಾಲ್ಕು ಹಳದಿ ಕಾರ್ಡ್ ಹಾಗೂ ಒಂದು ರೆಡ್ ಕಾರ್ಡ್ ನೀಡಲೇಬೇಕಾಯಿತು. ಈ ಕಾರ್ಡ್‌ಗಳ ಸಂಖ್ಯೆಯೇ ಅರ್ಜೆಂಟೀನಾದ 'ಆನ್‌ಫೀಲ್ಡ್ ರೌಡಿಸಂ'ಗೆ ಸಾಕ್ಷಿಯಾಗಿತ್ತು.
ಅಜೇಯವಾಗಿದ್ದ ಅರ್ಜೆಂಟೀನಾದ ಫೈನಲ್ ಸೋಲಿಗೆ ಕಾರಣವೇನು?
ಸ್ಪೇನ್ ಪಾಲಾದ ಅವಿಸ್ಮರಣೀಯ ಜಯ
ನಿಗದಿತ 90 ನಿಮಿಷಗಳ ಅಂತ್ಯಕ್ಕೆ ಯಾವುದೇ ಗೋಲು ಮೂಡದಿದ್ದಾಗ ಪಂದ್ಯ ಹೆಚ್ಚುವರಿ ಸಮಯಕ್ಕೆ (Extra Time) ಸಾಗಿತು. ನಂತರದ 30 ನಿಮಿಷಗಳ ಆಟದಲ್ಲಿ ಹಸಿದ ಹುಲಿಗಳಂತೆ ಸ್ಪೇನ್ ಆಟಗಾರರು ಗೋಲು ಗಳಿಸಲು ತಂತ್ರ ರೂಪಿಸುತ್ತಿದ್ದರೆ, ಅರ್ಜೆಂಟೀನಾ ಆಟಗಾರರು ಮಾತ್ರ ದೈಹಿಕ ಘರ್ಷಣೆಗೆ ಇಳಿದಿದ್ದರು. ಆದರೆ, 106ನೇ ನಿಮಿಷದಲ್ಲಿ ಫೆರಾನ್ ಟೋರೆಸ್ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಸ್ಪೇನ್ 1-0 ಇತಿಹಾಸ ಬರೆಯಿತು.
ಗೆದ್ದವರ ಮೇಲೆಯೇ ದಾಳಿ!
ಅರ್ಜೆಂಟೀನಾ ಆಟಗಾರರ ದುರ್ನಡತೆ ಇಲ್ಲಿಗೇ ನಿಲ್ಲಲಿಲ್ಲ. ಪಂದ್ಯ ಮುಗಿದು ಜಯದ ಸಂಭ್ರಮದಲ್ಲಿದ್ದ ಸ್ಪೇನ್ ಆಟಗಾರರ ಮೇಲೆ ಕಾಲ್ಕೆರೆದು ಜಗಳಕ್ಕೆ ನಿಂತ ಅರ್ಜೆಂಟೀನಾ ಆಟಗಾರರು, ಮೈದಾನದಲ್ಲೇ ಹೊಡೆದಾಟ ನಡೆಸಿದರು. ಈ ವಿಕೃತ ಅವತಾರವನ್ನು ಕಂಡ ಅಭಿಮಾನಿಗಳು "ನಾವು ಬೆಂಬಲಿಸಿದ ಸಾತ್ವಿಕ್ ತಂಡ ಇದೇನಾ?" ಎಂದು ಮರುಗುವಂತಾಯಿತು. ಇದೇ ಕಾರಣಕ್ಕೆ ಫೈನಲ್ ಪಂದ್ಯ ಆರಂಭಕ್ಕೂ ಮುನ್ನವೇ ಹಲವು ಅಭಿಮಾನಿಗಳು ತಮ್ಮ ನಿಲುವು ಬದಲಾಯಿಸಿ ಸ್ಪೇನ್ ತಂಡವನ್ನು ಬೆಂಬಲಿಸಿದ್ದರು.
ಟಿವಿ ಟೆಲಿಕಾಸ್ಟ್‌ನಲ್ಲಿ ಕಾಣಿಸದ ಹಲವು ಕರಾಳ ಮುಖಗಳನ್ನು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅರ್ಜೆಂಟೀನಾ ಮಾಡಿದ ಫೌಲ್‌ಗಳು, ಉದ್ದೇಶಪೂರ್ವಕ ಹ್ಯಾಂಡ್‌ಬಾಲ್ ನಾಟಕಗಳು ಈಗ ಜಗತ್ತಿನ ಎದುರಿಗಿವೆ. ಹೀಗಾಗಿಯೇ ಟ್ರೋಫಿ ಯಾರ ಕೈ ಸೇರಿದರೂ, ಸ್ಪೇನ್ ಮಾತ್ರ ನಿಜವಾದ 'ಪೀಪಲ್ಸ್ ಚಾಂಪಿಯನ್' ಆಗಿ ಹೊರಹೊಮ್ಮಿದೆ.