Asian Games 2026: ದಕ್ಷಿಣ ಕೊರಿಯಾ ವಿರುದ್ಧ 2-0 ಗೆಲುವು, ಫೈನಲ್‌ಗೆ ಲಗ್ಗೆ ಇಟ್ಟ ಭಾರತ ಮಹಿಳಾ ಹಾಕಿ ತಂಡ!
2026ರ ಏಷ್ಯಾ ಕ್ರೀಡಾಕೂಟದ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಭಾರತ ವನಿತೆಯರು ಫೈನಲ್‌ಗೆ ಪ್ರವೇಶ ಮಾಡಿದ್ದಾರೆ. ಸೆಪ್ಟಂಬರ್ 30 ರಂದು ದಕ್ಷಿಣ ಕೊರಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2-0 ಅಂತರದಲ್ಲಿ ಗೆದ್ದು ಚಿನ್ನದ ಪದಕದ ಸುತ್ತಿಗೆ ಪ್ರವೇಶ ಮಾಡಿದೆ. ಅಕ್ಟೋಬರ್ 2ರಂದು ಫೈನಲ್‌ನಲ್ಲಿ ಚೀನಾ ಎದುರು ಭಾರತ ಕಾದಾಟ ನಡೆಸಲಿದೆ.
ಏಷ್ಯಾ ಕ್ರೀಡಾಕೂಟದ ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಭಾರತ ಫೈನಲ್‌ಗೆ. -
ನವದೆಹಲಿ: ಜಪಾನ್ ಆತಿಥ್ಯದಲ್ಲಿ ಇದೀಗ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದ (Asian Games 2026) ಮಹಿಳೆಯರ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡ (India's women Hockey) ಫೈನಲ್‌ಗೆ ಲಗ್ಗೆ ಪ್ರವೇಶ ಮಾಡಿದೆ. ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿದ ಭಾರತ, ಚಿನ್ನದ ಪದಕದ ಸುತ್ತಿಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಭಾರತ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದು, ಇದೀಗ ಚಿನ್ನದ ಪದಕಕ್ಕಾಗಿ ಚೀನಾವನ್ನು ಎದುರಿಸಲಿದೆ. ಫೈನಲ್ ಪಂದ್ಯ ಅಕ್ಟೋಬರ್ 2ರಂದು ನಡೆಯಲಿದೆ.
ಪಂದ್ಯದ ಆರಂಭದಿಂದಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೆಚ್ಚಿನ ಸಮಯ ಚೆಂಡಿನ ನಿಯಂತ್ರಣವನ್ನು ತನ್ನಲ್ಲೇ ಇಟ್ಟುಕೊಂಡ ಭಾರತೀಯ ಆಟಗಾರ್ತಿಯರು ದಕ್ಷಿಣ ಕೊರಿಯಾದ ಗೋಲು ವಲಯದತ್ತ ಪದೇಪದೇ ದಾಳಿ ನಡೆಸಿದರು. ಆರಂಭಿಕ ಹಂತದಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸೇರಿದಂತೆ ಹಲವು ಅವಕಾಶಗಳು ದೊರೆತವು. ಆದರೆ ದಕ್ಷಿಣ ಕೊರಿಯಾದ ಗೋಲ್‌ಕೀಪರ್ ಸಿಯೋಯೆನ್ ಲೀ ಅತ್ಯುತ್ತಮ ಪ್ರದರ್ಶನ ನೀಡಿ ಭಾರತದ ಹಲವು ಪ್ರಯತ್ನಗಳನ್ನು ತಡೆದರು. ದೀಪಿಕಾ ಸೇರಿದಂತೆ ಭಾರತದ ಆಟಗಾರ್ತಿಯರ ಪ್ರಯತ್ನಗಳಿಗೆ ಅವರು ಪದೇಪದೇ ಅಡ್ಡಿಯಾದರು. ಪರಿಣಾಮ ಮೊದಲ ಎರಡು ಕ್ವಾರ್ಟರ್‌ಗಳು ಗೋಲು ರಹಿತವಾಗಿ ಮುಕ್ತಾಯಗೊಂಡವು. ಮೊದಲಾರ್ಧದ ಸಮಯಕ್ಕೆ ಉಭಯ ತಂಡಗಳ ಸ್ಕೋರ್ 0-0 ಆಗಿತ್ತು.
ಏಷ್ಯನ್ ಗೇಮ್ಸ್; ಕುಸ್ತಿಯಲ್ಲಿ ಮೊದಲ ಪದಕ ಗೆದ್ದ ಸುನಿಲ್ ಕುಮಾರ್
ಮೂರನೇ ಕ್ವಾರ್ಟರ್‌ನಲ್ಲಿ ಇಶಿಕಾ ಮಿಂಚು
ವಿರಾಮದ ಬಳಿಕ ಭಾರತ ಇನ್ನಷ್ಟು ಒತ್ತಡ ಹೇರಿತು. ದಕ್ಷಿಣ ಕೊರಿಯಾ ತನ್ನ ರಕ್ಷಣೆಯನ್ನು ಗಟ್ಟಿಗೊಳಿಸಿಕೊಂಡಿದ್ದರೂ, ಭಾರತ ಅವಕಾಶಗಳನ್ನು ಸೃಷ್ಟಿಸುವುದನ್ನು ಮುಂದುವರಿಸಿತು. 44ನೇ ನಿಮಿಷದಲ್ಲಿ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಸಂದರ್ಭದಲ್ಲಿ ದೀಪಿಕಾ ವಿಭಿನ್ನ ತಂತ್ರ ಬಳಸಿದರು. ನೇರವಾಗಿ ಡ್ರ್ಯಾಗ್-ಫ್ಲಿಕ್ ಮಾಡುವ ಬದಲು ಅವರು ಚೆಂಡನ್ನು ಇಶಿಕಾ ಕಡೆಗೆ ಕಳುಹಿಸಿದರು. ಸಿದ್ಧವಾಗಿದ್ದ ಇಶಿಕಾ ಮೊದಲ ಸ್ಪರ್ಶದಲ್ಲೇ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಸಲೀಮಾ ಟೆಟೆ ಗೋಲಿನಿಂದ ಮುನ್ನಡೆ ದ್ವಿಗುಣ
ಒಂದು ಗೋಲಿನ ಮುನ್ನಡೆ ಪಡೆದ ಬಳಿಕವೂ ಭಾರತ ಆಕ್ರಮಣ ಆಟವನ್ನು ಮುಂದುವರಿಸಿತು. ನಾಲ್ಕನೇ ಕ್ವಾರ್ಟರ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ನಾಯಕಿ ಸಲೀಮಾ ಟೆಟೆ ತಂಡದ ಮುನ್ನಡೆಯನ್ನು 2-0ಕ್ಕೆ ಹೆಚ್ಚಿಸಿದರು. 48ನೇ ನಿಮಿಷದಲ್ಲಿ ಬಲಭಾಗದಿಂದ ಅದ್ಭುತ ಓವರ್‌ಲ್ಯಾಪಿಂಗ್ ರನ್ ಮಾಡಿದ ಸಲೀಮಾ, ದಕ್ಷಿಣ ಕೊರಿಯಾದ ಗೋಲು ವಲಯ ಪ್ರವೇಶಿಸಿ ಚೆಂಡನ್ನು ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿದರು. ನಾಯಕಿಯ ಈ ಗೋಲು ಭಾರತದ ಗೆಲುವಿಗೆ ಮತ್ತಷ್ಟು ಬಲ ನೀಡಿತು.
𝗜𝗡𝗗𝗜𝗔 𝗔𝗥𝗘 𝗜𝗡 𝗧𝗛𝗘 𝗙𝗜𝗡𝗔𝗟! 🇮🇳🔥
— Hockey India (@TheHockeyIndia) September 30, 2026
The Indian Women’s Team beats South Korea 2-0 in the second semi-final of Asian Games 2026 to book their place in the gold medal match! 🏑💪
China await in the final on October 2. One last battle for gold. 🇮🇳🏆#HockeyIndia… pic.twitter.com/lAb0o7MnZL
ಕೊನೆಯ ಹಂತದಲ್ಲಿ ರಕ್ಷಣಾ ಕೋಟೆ
2-0 ಹಿನ್ನಡೆಯಾದ ಬಳಿಕ ದಕ್ಷಿಣ ಕೊರಿಯಾ ಪಂದ್ಯಕ್ಕೆ ಕಮ್‌ಬ್ಯಾಕ್ ಮಾಡಲು ಪ್ರಯತ್ನಿಸಿತು. ಕೊನೆಯ ಹಂತದಲ್ಲಿ ಅವರಿಗೆ ಪೆನಾಲ್ಟಿ ಕಾರ್ನರ್ ಕೂಡ ದೊರೆಯಿತು. ಆದರೆ ಭಾರತದ ರಕ್ಷಣಾ ವಿಭಾಗ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಯಾವುದೇ ಗೋಲು ಬಿಟ್ಟುಕೊಡಲಿಲ್ಲ. ಭಾರತದ ಆಟಗಾರ್ತಿಯರು ಕೊನೆಯ ನಿಮಿಷಗಳಲ್ಲೂ ತಮ್ಮ ಸಂಯಮ ಕಳೆದುಕೊಳ್ಳದೆ ಮುನ್ನಡೆಯನ್ನು ಕಾಪಾಡಿಕೊಂಡರು. ಅಂತಿಮವಾಗಿ ಭಾರತ ವನಿತೆಯರು 2-0 ಗೆಲುವು ದಾಖಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು.
ಕಾಂಪೌಂಡ್ ಆರ್ಚರಿಯಲ್ಲಿ ಚಿನ್ನದ ಹ್ಯಾಟ್ರಿಕ್; ಭಾರತದ ಪದಕಗಳ ಸಂಖ್ಯೆ 59ಕ್ಕೆ ಏರಿಕೆ
ಫೈನಲ್‌ನಲ್ಲಿ ಭಾರತಕ್ಕೆ ಚೀನಾ ಎದುರಾಳಿ
ಇದೀಗ ಭಾರತ ಮಹಿಳಾ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ಚೀನಾ ಎದುರು ಕಾದಾಟ ನಡೆಸಲಿದೆ. ಮೊದಲ ಸೆಮಿಫೈನಲ್‌ನಲ್ಲಿ ಚೀನಾ, ಆತಿಥೇಯ ಜಪಾನ್ ವಿರುದ್ಧ ಗೋಲು ರಹಿತ 60 ನಿಮಿಷಗಳ ಬಳಿಕ ಶೂಟೌಟ್‌ನಲ್ಲಿ 4-2 ಗೆದ್ದು ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಅಕ್ಟೋಬರ್ 2ರಂದು ಭಾರತ ಮತ್ತು ಚೀನಾ ನಡುವೆ ಚಿನ್ನದ ಪದಕಕ್ಕಾಗಿ ಕಾದಾಟ ನಡೆಯಲಿದೆ.