ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲಮೀನ್‌ ಯಮಾಲ್‌: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್‌ ಜಗತ್ತಿನ ತಾರೆ!

ಲಮೀನ್‌ ಯಮಾಲ್‌ ಅವರ ಜೀವನಯಾನ, ಮೆಸ್ಸಿಯೊಂದಿಗೆ ವೈರಲ್‌ ಆದ ಬಾಲ್ಯದ ಫೋಟೋ, ಕುಟುಂಬದ ಹಿನ್ನೆಲೆ ಮತ್ತು ವಿಶ್ವ ಫುಟ್ಬಾಲ್‌ನಲ್ಲಿ ಅವರ ವೇಗದ ಬೆಳವಣಿಗೆಯ ಸಂಪೂರ್ಣ ಕಥೆ ಈ ಲೇಖನದಲ್ಲಿದೆ. 2026ರ ಫಿಫಾ ವಿಶ್ವಕಪ್‌ ಫೈನಲ್‌ಗೂ ಮುನ್ನ ಮೆಸ್ಸಿ ಮತ್ತು ಯಮಾಲ್‌ ನಡುವಣ ಜಟಾಪಟಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಲಿಯೋನೆಲ್‌ ಮೆಸ್ಸಿ ಮತ್ತು ಲಮೀನ್‌ ಯಮಾಲ್‌ (ಎಐ ಚಿತ್ರ).

ಫುಟ್ಬಾಲ್‌ ಇತಿಹಾಸದಲ್ಲಿ ಕೆಲವು ಕಾಕತಾಳೀಯ ಘಟನೆಗಳು ಕಲ್ಪನೆಗೂ ಮೀರಿದ್ದಾಗಿರುತ್ತವೆ. 2026ರ ಫಿಫಾ ವಿಶ್ವಕಪ್‌ ಟೂರ್ನಿ ಈಗ ಅಂತಿಮ ಘಟ್ಟ ತಲುಪಿದ್ದು, ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಮತ್ತು ಯೂರೋಪ್‌ನ ಬಲಿಷ್ಠ ಸ್ಪೇನ್‌ ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ, ಈ ಹೈವೋಲ್ಟೇಜ್‌ ಹಣಾಹಣಿಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಫೋಟೋವೊಂದು ಭಾರಿ ವೈರಲ್‌ ಆಗಿದ್ದು, ವಿಶ್ವಾದ್ಯಂತ ಫುಟ್ಬಾಲ್‌ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

ಆ ಚಿತ್ರದಲ್ಲಿ ಅರ್ಜೆಂಟೀನಾದ ದಿಗ್ಗಜ ಆಟಗಾರ ಲಿಯೋನೆಲ್‌ ಮೆಸ್ಸಿ, ಆರು ತಿಂಗಳ ಮಗುವೊಂದಕ್ಕೆ ಚಾರಿಟಿ ಫೋಟೋಶೂಟ್‌ ವೇಳೆ ಸ್ನಾನ ಮಾಡಿಸುತ್ತಿರುವ ಅಪರೂಪದ ದೃಶ್ಯವಿದೆ. ಅಂದು ಮೆಸ್ಸಿ ಕೈಯಲ್ಲಿದ್ದ ಆ ಮುಗ್ಧ ಮಗು ಬೇರೆ ಯಾರೂ ಅಲ್ಲ; ಇಂದು ಸ್ಪೇನ್‌ ತಂಡದ ಜಾದೂಗಾರ, ಯುವ ಸಂಚಲನ ಲಮೀನ್‌ ಯಮಾಲ್‌. ವರ್ಷಗಳ ಹಿಂದೆ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದ ಈ ಇಬ್ಬರು, ಇಂದು ವಿಶ್ವಕಪ್‌ ಫೈನಲ್‌ನಲ್ಲಿ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿಯುತ್ತಿರುವುದು ಕ್ರೀಡಾ ಲೋಕದ ಅಚ್ಚರಿ!

ಅರ್ಜೆಂಟೀನಾ - ಸ್ಪೇನ್‌ ಮುಖಾಮುಖಿ ದಾಖಲೆ!

ಬಡತನದ ಬೇಗೆಯಲ್ಲಿ ಅರಳಿದ ಅಪೂರ್ವ ಪ್ರತಿಭೆ

ಲಮೀನ್‌ ಯಮಾಲ್‌ ಅವರ ಬದುಕಿನ ಕಥೆ ಯಾವುದೇ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ. ಅವರ ತಂದೆ ಮೊರೊಕ್ಕೊ ಮೂಲದವರಾದರೆ, ತಾಯಿ ಈಕ್ವಟೋರಿಯಲ್‌ ಗಿನಿ ಮೂಲದವರು. ಉತ್ತಮ ಬದುಕಿನ ಕನಸು ಹೊತ್ತು ಈ ಕುಟುಂಬ ಸ್ಪೇನ್‌ನ ಬಾರ್ಸಿಲೋನಾ ಸಮೀಪದ ರೋಕಾಫೊಂಡಾ ಎಂಬಲ್ಲಿ ನೆಲೆಸಿತು.

ಆರಂಭಿಕ ದಿನಗಳಲ್ಲಿ ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿತು. ಕನಿಷ್ಠ ಮನೆ ಬಾಡಿಗೆ ಕಟ್ಟುವುದಕ್ಕೂ ಹಣವಿಲ್ಲದೆ ಪರದಾಡುತ್ತಿದ್ದಾಗ, ಇಬ್ಬರು ನೆರೆಹೊರೆಯವರು ದೇವದೂತರಂತೆ ಬಂದು ನೆರವಾದರು. ಆ ಇಬ್ಬರು ದಯಾಮಯಿಗಳ ಹೆಸರೇ "ಲಮೀನ್" ಮತ್ತು "ಯಮಾಲ್". ಆ ಕಷ್ಟದ ಕಾಲದಲ್ಲಿ ನೆರವಾದವರ ಮೇಲಿನ ಕೃತಜ್ಞತೆಗಾಗಿ, ತಮ್ಮ ಮಗನಿಗೆ ಆ ಎರಡೂ ಹೆಸರುಗಳನ್ನು ಸೇರಿಸಿ "ಲಮೀನ್‌ ಯಮಾಲ್‌" ಎಂದು ನಾಮಕರಣ ಮಾಡಲಾಯಿತು.

ಲಮೀನ್‌ ಎಂದರೆ 'ವಿಶ್ವಾಸಾರ್ಹ' ಎಂದರ್ಥ.

ಯಮಾಲ್‌ ಎಂದರೆ 'ಸುಂದರ' ಎಂದರ್ಥ.

ಫಿಫಾ ವಿಶ್ವಕಪ್‌ ಫೈನಲ್‌: ಮಿಡ್‌ನೈಟ್‌ ಸಂಭ್ರಮಕ್ಕೆ ಗ್ರೀನ್‌ ಸಿಗ್ನಲ್‌!

ಬೇರುಗಳನ್ನು ಮರೆಯದ '304' ಸಂಭ್ರಮ!

ಎಷ್ಟೇ ಎತ್ತರಕ್ಕೆ ಬೆಳೆದರೂ ತಾವು ಬಂದ ಹಾದಿಯನ್ನು ಮರೆಯಬಾರದು ಎಂಬುದಕ್ಕೆ ಯಮಾಲ್‌ ಅತ್ಯುತ್ತಮ ಉದಾಹರಣೆ. ಯಮಾಲ್‌ ಮೈದಾನದಲ್ಲಿ ಗೋಲು ಗಳಿಸಿದಾಗಲೆಲ್ಲಾ ಕೈ ಬೆರಳುಗಳಿಂದ "304" ಎಂದು ಸನ್ನ ಓಪನಿಂಗ್ ಮಾಡಿ ಸಂಭ್ರಮಿಸುತ್ತಾರೆ. ಇದು ಅವರು ಬೆಳೆದ ಅತ್ಯಂತ ಹಿಂದುಳಿದ ಪ್ರದೇಶವಾದ ರೋಕಾಫೊಂಡಾದ ಪೋಸ್ಟಲ್‌ ಕೋಡ್‌ (08304) ನ ಕೊನೆಯ ಮೂರು ಅಂಕಿಗಳು! ಜಗತ್ತಿನ ಅತಿ ದೊಡ್ಡ ವೇದಿಕೆಯಲ್ಲಿ ನಿಂತಿದ್ದರೂ, ತಮ್ಮ ಬಾಲ್ಯದ ದಿನಗಳು ಮತ್ತು ತಮಗೆ ಆಶ್ರಯ ನೀಡಿದ ನೆಲಕ್ಕೆ ಯಮಾಲ್‌ ಸಲ್ಲಿಸುವ ಅದ್ಭುತ ಗೌರವವಿದು.

ಅಂದುಕೊಳ್ಳದ ಪವಾಡ!

ಯಮಾಲ್‌ ಬಾಲ್ಯದಲ್ಲಿ ನಡೆದ ಆ ಒಂದು ಚಾರಿಟಿ ಕಾರ್ಯಕ್ರಮವೇ ಇಂದು ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಅಂದು ಮೆಸ್ಸಿಯೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ಆ ಬಡ ಕುಟುಂಬಕ್ಕೆ ತಿಳಿದಿರಲಿಲ್ಲ; ಮುಂದೆ ಇದೇ ಮಗು ವಿಶ್ವ ಫುಟ್ಬಾಲ್‌ನ ಅತ್ಯಂತ ಪ್ರತಿಭಾವಂತ ಆಟಗಾರನಾಗಿ ಬೆಳೆದು, ಅದೇ ಮೆಸ್ಸಿ ವಿರುದ್ಧ ವಿಶ್ವಕಪ್‌ ಫೈನಲ್‌ನಲ್ಲಿ ಸೆಣಸಾಡಲಿದ್ದಾನೆ ಎಂದು!

ಸ್ಪೇನ್‌ ಫೈನಲ್‌ ಗೆಲ್ಲುವ ಹಾಟ್‌ ಫೇವರಿಟ್ ತಂಡ!

ಕಿರಿಯ ವಯಸ್ಸಿನಲ್ಲೇ ಹಿರಿ ಸಾಧನೆ

ಹದಿಹರೆಯದ ಪ್ರಾಯದಲ್ಲೇ ಲಮೀನ್‌ ಯಮಾಲ್‌ ತಮ್ಮ ಮಿಂಚಿನ ವೇಗ, ಅದ್ಭುತ ಡ್ರಿಬ್ಲಿಂಗ್ ಚಾತುರ್ಯ, ಸೃಜನಾತ್ಮಕ ಆಟ ಮತ್ತು ಗೋಲು ಗಳಿಸುವ ಅಪ್ರತಿಮ ಸಾಮರ್ಥ್ಯದಿಂದ ಫುಟ್ಬಾಲ್ ದಿಗ್ಗಜರನ್ನೇ ಬೆರಗುಗೊಳಿಸಿದ್ದಾರೆ. ಅನೇಕ ಫುಟ್ಬಾಲ್‌ ತಜ್ಞರು ಇವರನ್ನು ಮುಂದಿನ ದಶಕದ ಜಾಗತಿಕ ಫುಟ್ಬಾಲ್‌ನ ಸುಲ್ತಾನ್ ಎಂದು ಈಗಾಗಲೇ ಘೋಷಿಸಿದ್ದಾರೆ.

ವಿಶ್ವಕಪ್‌ ಯಾರಿಗೆ ಒಲಿಯಲಿದೆ? ಇದು ತಲೆಮಾರುಗಳ ಮಹಾಸಂಗ್ರಾಮ!

ಒಂದೆಡೆ ಎರಡು ದಶಕಗಳಿಂದ ಫುಟ್ಬಾಲ್ ಜಗತ್ತನ್ನು ಆಳುತ್ತಿರುವ, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಲಿಯೋನೆಲ್ ಮೆಸ್ಸಿ. ಮತ್ತೊಂದೆಡೆ, ಅದೇ ಮೆಸ್ಸಿಯ ಆಶೀರ್ವಾದ ಪಡೆದು ಭವಿಷ್ಯದ ಭರವಸೆಯಾಗಿ ಮುನ್ನುಗ್ಗುತ್ತಿರುವ ಯುವ ತಾರೆ ಲಮೀನ್‌ ಯಮಾಲ್.

ಈ ಫೈನಲ್‌ ಪಂದ್ಯ ಕೇವಲ ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಪ್ರಶಸ್ತಿ ಹೋರಾಟ ಮಾತ್ರವಲ್ಲ; ಇದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಾಗುತ್ತಿರುವ ಫುಟ್ಬಾಲ್‌ ಪರಂಪರೆಯ ಮಹಾ ಸಂಕೇತ. ಕ್ರೀಡಾ ಇತಿಹಾಸದ ಈ ರೋಮಾಂಚನಕಾರಿ ಕಾಕತಾಳೀಯಕ್ಕೆ ಸಾಕ್ಷಿಯಾಗಲು ಇಡೀ ಜಗತ್ತೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದೆ!