Asian Games 2026: 5000 ಮೀಟರ್ ಓಟದಲ್ಲಿ ಕಂಚು, ಗುಲ್ವೀರ್ ಸಿಂಗ್ ಹ್ಯಾಟ್ರಿಕ್ ಸಾಧನೆ!
Asian Games 2026: 2026ರ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಗುಲ್ವೀರ್ ಸಿಂಗ್ ಪುರುಷರ 5000 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಆ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಸತತ ಮೂರನೇ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಅವರು ಕ್ರೀಡಾಕೂಟದಲ್ಲಿ ಹ್ಯಾಟ್ರಿಕ್ ಪದಕಗಳ ಸಾಧನೆಯನ್ನು ಮಾಡಿದ್ದಾರೆ.
ಏಷ್ಯಾ ಕ್ರೀಡಾಕೂಟದಲ್ಲಿ ಹ್ಯಾಟ್ರಿಕ್ ಪದಕ ಗೆದ್ದ ಗುಲ್ವೀರ್ ಸಿಂಗ್. -
ನವದೆಹಲಿ: ಭಾರತದ ಓಟಗಾರ ಗುಲ್ವೀರ್ ಸಿಂಗ್ (Gulveer Singh) 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asian games 2026) ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಂಗಳವಾರ ನಡೆದಿದ್ದ ಪುರುಷರ 5000 ಮೀಟರ್ ಓಟದ ಫೈನಲ್‌ನಲ್ಲಿ 13:32.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಈ ಕ್ರೀಡಾಕೂಟದಲ್ಲಿ ಗುಲ್ವೀರ್ ಸಿಂಗ್ ಅವರ ಪದಕಗಳ ಸಂಖ್ಯೆ ಮೂರಕ್ಕೆ ಏರಿದ್ದು, ಅವರು ಪದಕಗಳ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಗುಲ್ವೀರ್ ಸಿಂಗ್ ಇಡೀ ಓಟದಲ್ಲಿ ಬಹುತೇಕ ಮೂರನೇ ಸ್ಥಾನದಲ್ಲೇ ಕಾಣಿಸಿಕೊಂಡರು. ಬಹ್ರೇನ್‌ನ ಬಿರ್ಹಾನು ಬಾಲೆವ್ 13:30.79 ಸಮಯದೊಂದಿಗೆ ಚಿನ್ನದ ಪದಕ ಗೆದ್ದರೆ, ಜಪಾನ್‌ನ ತೊಮೊನೊರಿ ಯಮಗುಚಿ 13:31.43 ಸಮಯದೊಂದಿಗೆ ಬೆಳ್ಳಿ ಪದಕ ಪಡೆದರು. ಗುಲ್ವೀರ್ 13:32.75 ಸಮಯದೊಂದಿಗೆ ಮೂರನೇ ಸ್ಥಾನ ಪಡೆದರು.
ಈ ಕಂಚಿನ ಪದಕದೊಂದಿಗೆ ಒಂದೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಮೂರು ಪದಕ ಗೆದ್ದ ಭಾರತದ ಎರಡನೇ ಪುರುಷ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಗುಲ್ವೀರ್ ಸಿಂಗ್ ಪಾತ್ರರಾಗಿದ್ದಾರೆ. 1951ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಮೊದಲ ಏಷ್ಯನ್ ಗೇಮ್ಸ್‌ನಲ್ಲಿ ಲವಿ ಪಿಂಟೋ ಮೂರು ಪದಕ ಗೆದ್ದಿದ್ದರು. ಅವರು 100 ಮೀಟರ್ ಮತ್ತು 200 ಮೀಟರ್ ಓಟಗಳಲ್ಲಿ ಚಿನ್ನ ಹಾಗೂ 4x100 ಮೀಟರ್ ರಿಲೇಯಲ್ಲಿ ಬೆಳ್ಳಿ ಗೆದ್ದಿದ್ದರು.
ಏಷ್ಯನ್ ಗೇಮ್ಸ್ ಬಾಕ್ಸಿಂಗ್; ನರೇಂದರ್‌ಗೆ ಕಂಚು, ಫೈನಲ್ ಪ್ರವೇಶಿಸಿದ ಪರ್ವೀನ್, ಅಂಕುಶ್
ಒಂದೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಥ್ಲೆಟಿಕ್ಸ್ ಪದಕ ಗೆದ್ದ ಭಾರತೀಯರ ಪಟ್ಟಿಯಲ್ಲಿ ಪಿಟಿ ಉಷಾ ಮತ್ತು ಕೆ.ಎಂ. ಬೀನಾಮೋಲ್ ಕೂಡ ಇದ್ದಾರೆ. 1986ರ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ ಪಿಟಿ ಉಷಾ ನಾಲ್ಕು ಚಿನ್ನ ಹಾಗೂ ಒಂದು ಬೆಳ್ಳಿ ಸೇರಿದಂತೆ ಐದು ಪದಕ ಗೆದ್ದಿದ್ದರು. 2002ರ ಬುಸಾನ್ ಏಷ್ಯನ್ ಗೇಮ್ಸ್‌ನಲ್ಲಿ ಬೀನಾಮೋಲ್ ಮೂರು ಪದಕ ಗೆದ್ದಿದ್ದರು.
ಗುಲ್ವೀರ್ ಸಿಂಗ್ ಈ ಕ್ರೀಡಾಕೂಟದಲ್ಲಿ 10,000 ಮೀಟರ್ ಮತ್ತು 1500 ಮೀಟರ್ ಓಟಗಳಲ್ಲಿ ಈಗಾಗಲೇ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ 5000 ಮೀಟರ್‌ನಲ್ಲಿ ಕಂಚು ಗೆಲ್ಲುವ ಮೂಲಕ ಮೂರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಏಷ್ಯನ್ ಗೇಮ್ಸ್ ಶೂಟಿಂಗ್; ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ನೀರೂ ಧಂಡಾ
ಭಾರತದ ಪ್ರಮುಖ ದೂರ ಓಟಗಾರರಲ್ಲಿ ಒಬ್ಬರಾಗಿರುವ ಗುಲ್ವೀರ್, 5000 ಮೀಟರ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ಅವರು ಪುರುಷರ 5000 ಮೀಟರ್‌ನಲ್ಲಿ ಕಂಚು ಗೆದ್ದು, ಈ ಸ್ಪರ್ಧೆಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ದಾಖಲೆ ನಿರ್ಮಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ಗುಲ್ವೀರ್, ವೇದಿಕೆಯಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಬೇಕು ಎಂಬುದು ತಮ್ಮ ದೊಡ್ಡ ಆಸೆಯಾಗಿತ್ತು ಎಂದು ಹೇಳಿದ್ದಾರೆ. ಈ ಬಾರಿ ಅದು ಸಾಧ್ಯವಾಗದಿರುವುದರಿಂದ ಸಂಪೂರ್ಣ ತೃಪ್ತಿ ಸಿಗಲಿಲ್ಲ ಎಂದ ಅವರು, ಮುಂದಿನ ಸ್ಪರ್ಧೆಗಳಲ್ಲಿ ಇನ್ನಷ್ಟು ಕಠಿಣ ಪರಿಶ್ರಮಪಟ್ಟು ಮರಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.