ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಏಷ್ಯನ್ ಗೇಮ್ಸ್ ಬಾಕ್ಸಿಂಗ್‌; ನರೇಂದರ್‌ಗೆ ಕಂಚು, ಫೈನಲ್‌ ಪ್ರವೇಶಿಸಿದ ಪರ್ವೀನ್, ಅಂಕುಶ್

Asian Games 2026 boxing: ಮಹಿಳೆಯರ 65 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಪರ್ವೀನ್ ಅವರು ಚೀನಾದ ಲಿ ಶೂ ಅವರನ್ನು 5-0 ಅಂತರದಿಂದ ಸೋಲಿಸಿದರು. ಮತ್ತೊಂದೆಡೆ, ಪುರುಷರ 80 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಅಂಕುಶ್ ಅವರು ಅದ್ಭುತವಾಗಿ ಪುಟಿದೆದ್ದು, ಉಜ್ಬೇಕಿಸ್ತಾನದ ಫಜ್ಲಿದ್ದಿನ್ ಎರ್ಕಿನ್‌ಬೋವ್ ಅವರನ್ನು 4-1 ಅಂತರದಿಂದ ಮಣಿಸಿದರು.

ಏಷ್ಯನ್ ಗೇಮ್ಸ್ ಬಾಕ್ಸಿಂಗ್‌; ಕಂಚು ಗೆದ್ದ ನರೇಂದರ್ ಬೆರ್ವಾಲ್

Narender Berwal -

Abhilash BC
Abhilash BC Sep 29, 2026 2:28 PM

ನಗೋಯಾ, ಸೆ.29: ಏಷ್ಯನ್ ಗೇಮ್ಸ್ 2026ರ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಪರ್ವೀನ್ ಹೂಡಾ ಮತ್ತು ಅಂಕುಶ್ ಪಂಗಲ್ ಅವರು ಸೆಮಿಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟರು. ಆದರೆ ನರೇಂದರ್ ಬೆರ್ವಾಲ್ ಮಂಗಳವಾರ ನಡೆದ ಪುರುಷರ +90 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ಸೆಮಿಫೈನಲ್ ಪಂದ್ಯದಲ್ಲಿ, ಕಝಾಕಿಸ್ತಾನದ ಹಾಲಿ ವಿಶ್ವ ಚಾಂಪಿಯನ್ ಐಬೆಕ್ ಒರಾಲ್‌ಬೇ ವಿರುದ್ಧ ನರೇಂದರ್ ಬೆರ್ವಾಲ್ 5-0 ಅಂತರದಲ್ಲಿ ಸೋಲನುಭವಿಸಿದರು. ಇದು ನರೇಂದರ್ ಬೆರ್ವಾಲ್ ಅವರ ಸತತ ಎರಡನೇ ಏಷ್ಯನ್ ಗೇಮ್ಸ್ ಕಂಚಿನ ಪದಕ. ಈ ಹಿಂದೆ ಅವರು ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ 2023ರಲ್ಲಿ ಪುರುಷರ +92 ಕೆಜಿ ವಿಭಾಗದಲ್ಲಿಯೂ ಮೂರನೇ ಸ್ಥಾನವನ್ನು ಪಡೆದಿದ್ದರು.

ಮಹಿಳೆಯರ 65 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಪರ್ವೀನ್ ಅವರು ಚೀನಾದ ಲಿ ಶೂ ಅವರನ್ನು 5-0 ಅಂತರದಿಂದ ಸೋಲಿಸಿದರು. ಮತ್ತೊಂದೆಡೆ, ಪುರುಷರ 80 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಅಂಕುಶ್ ಅವರು ಅದ್ಭುತವಾಗಿ ಪುಟಿದೆದ್ದು, ಉಜ್ಬೇಕಿಸ್ತಾನದ ಫಜ್ಲಿದ್ದಿನ್ ಎರ್ಕಿನ್‌ಬೋವ್ ಅವರನ್ನು 4-1 ಅಂತರದಿಂದ ಮಣಿಸಿದರು.

ಏಷ್ಯನ್ ಗೇಮ್ಸ್‌ಗೆ ಪದಾರ್ಪಣೆ ಮಾಡಿದ ಅಂಕುಶ್ ಅವರ ಈ ಗೆಲುವು ಅತ್ಯಂತ ಗಮನಾರ್ಹ ಸಾಧನೆಯಾಗಿದೆ. ಎರ್ಕಿನ್‌ಬೋವ್ ಹಾಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಮೊದಲ ಸುತ್ತಿನ ನಂತರ ಅಂಕುಶ್ 1-4 ಅಂತರದಲ್ಲಿ ಹಿನ್ನಡೆಯಲ್ಲಿದ್ದರು, ಆದರೆ ಮುಂದಿನ ಎರಡು ಸುತ್ತುಗಳಲ್ಲಿನ ಅದ್ಭುತ ಪ್ರದರ್ಶನದ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಏಷ್ಯನ್‌ ಗೇಮ್ಸ್‌ ಶೂಟಿಂಗ್‌; ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ನೀರೂ ಧಂಡಾ

ಎರಡನೇ ಸುತ್ತಿನಲ್ಲಿ 3-2 ಅಂತರದಿಂದ ಜಯ ಸಾಧಿಸಿದರೆ, ಮೂರನೇ ಸುತ್ತಿನಲ್ಲಿ 5-0 ಅಂತರದ ಸಂಪೂರ್ಣ ಪ್ರಾಬಲ್ಯ ಮೆರೆದು ಅಂತಿಮವಾಗಿ 4-1 ಅಂತರದ 'ಸ್ಪ್ಲಿಟ್-ಡಿಸಿಷನ್' (ವಿಭಜಿತ ತೀರ್ಪು) ಮೂಲಕ ಗೆಲುವು ದಾಖಲಿಸಿದರು. ನಾಲ್ವರು ತೀರ್ಪುಗಾರರು 29-28 ಅಂಕಗಳೊಂದಿಗೆ ಅವರ ಪರವಾಗಿ ತೀರ್ಪು ನೀಡಿದರೆ, ಒಬ್ಬ ತೀರ್ಪುಗಾರರು ಸುತ್ತುವಾರು ಅಂಕಗಳ ಆಧಾರದ ಮೇಲೆ ಎರ್ಕಿನ್‌ಬೋವ್ ಅವರಿಗೆ ಜಯ ನೀಡಿದರು.



2018ರ ಜಕಾರ್ತ ಕ್ರೀಡಾಕೂಟದಲ್ಲಿ ಅಮಿತ್ ಪಂಗಲ್ ಅವರು 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನಂತರ, ಏಷ್ಯನ್ ಗೇಮ್ಸ್‌ನ ಫೈನಲ್ ತಲುಪಿದ ಮೊದಲ ಭಾರತೀಯ ಪುರುಷ ಬಾಕ್ಸರ್ ಆಗಿ ಅಂಕುಶ್ ಹೊರಹೊಮ್ಮಿದ್ದಾರೆ.

ಇದಕ್ಕೂ ಮುನ್ನ, ಪರ್ವೀನ್ ಅವರು ಲಿ ಶು ವಿರುದ್ಧ ಪ್ರಬಲ ಪ್ರದರ್ಶನ ನೀಡಿದರು. ಅವರು ಮೊದಲ ಸುತ್ತಿನಲ್ಲಿ 3-2 ಅಂತರದ ಕಠಿಣ ಜಯವನ್ನು ಸಾಧಿಸಿದರೆ, ನಂತರದ ಎರಡು ಸುತ್ತುಗಳಲ್ಲಿ ತಲಾ 5-0 ಅಂತರದಿಂದ ಗೆದ್ದು, ಒಟ್ಟಾರೆಯಾಗಿ 5-0 ಅಂತರದ ಭರ್ಜರಿ ಜಯವನ್ನು ತಮ್ಮದಾಗಿಸಿಕೊಂಡರು.