World Championship: 18ರ ವಯಸ್ಸಿನ ಆಟಗಾರನ ಎದುರು ಸೋತು ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್!
ನವದೆಹಲಿಯಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಅಭಿಯಾನ ಅಂತ್ಯಗೊಂಡಿದೆ. ಅಂತಿಮ 32ನೇ ಸುತ್ತಿನ ಪಂದ್ಯದಲ್ಲಿ 18 ವರ್ಷದ ಅಮೆರಿಕದ ಆಟಗಾರ ಗ್ಯಾರೆಟ್ ಟಾನ್ ಭರ್ಜರಿ ಪ್ರದರ್ಶನ ನೀಡಿ ಲಕ್ಷ್ಯ ಸೇನ್ ಅವರನ್ನು ಸೋಲಿಸಿದ್ದಾರೆ.
ಎರಡನೇ ಸುತ್ತಿನಲ್ಲಿ 18ರ ವಯುಸ್ಸಿನ ಆಟಗಾರನ ಎದುರು ಸೋತ ಲಕ್ಷ್ಯ ಸೇನ್. -
ನವದೆಹಲಿ: ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ (BWF World Championships) ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ (Lakshya Sen) ಅವರ ಅಭಿಯಾನ ಅಂತಿಮ 32ರ ಸುತ್ತಿನಲ್ಲಿ ಅಂತ್ಯಗೊಂಡಿದೆ. ಅಮೆರಿಕದ 18 ವರ್ಷದ ಆಟಗಾರ ಗ್ಯಾರೆಟ್ ಟಾನ್ ಅಂತಿಮ ಹಂತದಲ್ಲಿ ಅದ್ಭುತ ಹೋರಾಟ ನೀಡಿ ಭಾರತೀಯ ಶಟ್ಲರ್‌ಗೆ ಆಘಾತ ನೀಡಿದರು. ಮೂರು ಗೇಮ್‌ಗಳ ರೋಚಕ ಪಂದ್ಯದಲ್ಲಿ ಇಬ್ಬರೂ ತಲಾ ಒಂದು ಗೇಮ್ ಗೆದ್ದ ಕಾರಣ ಪಂದ್ಯ ನಿರ್ಣಾಯಕ ಮೂರನೇ ಗೇಮ್‌ಗೆ ಸಾಗಿತು. ಲಕ್ಷ್ಯ ಸೇನ್ ಮೊದಲ ಗೇಮ್‌ನ್ನು 21-19ರಿಂದ ಗೆದ್ದರೆ, ಟಾನ್ ಕೂಡ ಎರಡನೇ ಗೇಮ್‌ನಲ್ಲಿ 21-19ರಿಂದ ಗೆದ್ದು ಪಂದ್ಯವನ್ನು ಸಮಬಲಕ್ಕೆ ತಂದರು.
ಮೂರನೇ ಗೇಮ್‌ನಲ್ಲಿ ಟಾನ್ ಆರಂಭದಲ್ಲೇ ಹಿಡಿತ ಸಾಧಿಸಿ 11-4ರ ಮುನ್ನಡೆ ಪಡೆದರು. ಆದರೆ ಲಕ್ಷ್ಯ ಸೇನ್ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದರು. ಭಾರತೀಯ ಆಟಗಾರ ಸತತ ಆರು ಅಂಕಗಳನ್ನು ಗಳಿಸಿ ಅಂತರವನ್ನು ಕಡಿಮೆ ಮಾಡಿ 17-16ಕ್ಕೆ ತಂದು ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು. ಆದರೆ 18 ವರ್ಷದ ಟಾನ್ ಒತ್ತಡಕ್ಕೆ ಮಣಿಯಲಿಲ್ಲ. ಅವರು ಮತ್ತೆ 18-16ರ ಮುನ್ನಡೆ ಸಾಧಿಸಿ, ಬಳಿಕ 20-16ರಲ್ಲಿ ಮ್ಯಾಚ್ ಪಾಯಿಂಟ್ ಪಡೆದರು.
ಲಕ್ಷ್ಯ ಒಂದು ಮ್ಯಾಚ್ ಪಾಯಿಂಟ್ ಉಳಿಸಿಕೊಂಡರೂ, ಟಾನ್ ಅಂತಿಮವಾಗಿ ನಿರ್ಣಾಯಕ ಗೇಮ್‌ನ್ನು 21-17ರಿಂದ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಈ ಗೆಲುವಿನೊಂದಿಗೆ ಗ್ಯಾರೆಟ್ ಟಾನ್ ರೌಂಡ್ ಆಫ್ 16ಕ್ಕೆ ಪ್ರವೇಶಿಸಿದರೆ, ಲಕ್ಷ್ಯ ಸೇನ್ ಅವರ ವಿಶ್ವ ಚಾಂಪಿಯನ್‌ಶಿಪ್ ಅಭಿಯಾನ ಅಂತ್ಯಗೊಂಡಿದೆ. ಲಕ್ಷ್ಯ ಸೇನ್ ಕಮ್‌ಬ್ಯಾಕ್ ಪೂರ್ಣಗೊಳಿಸುವ ಹಂತಕ್ಕೆ ಬಹಳ ಹತ್ತಿರ ಬಂದಿದ್ದರೂ, ನಿರ್ಣಾಯಕ ಕ್ಷಣಗಳಲ್ಲಿ ಟಾನ್ ತಾಳ್ಮೆ ಕಾಪಾಡಿಕೊಂಡು ಐತಿಹಾಸಿಕ ಗೆಲುವು ದಾಖಲಿಸಿದರು.
BWF World Championships: ಪ್ರೀ-ಕ್ವಾರ್ಟರ್‌ಫೈನಲ್ಸ್‌ಗೆ ಲಗ್ಗೆಯಿಟ್ಟ ಸಾತ್ವಿಕ್-ಚಿರಾಗ್ ಜೋಡಿ!
ಎರಡನೇ ಸುತ್ತಿನಲ್ಲಿ ಸೋತ ಉನ್ನತಿ ಹೂಡಾ
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ 18 ವರ್ಷದ ಭಾರತದ ಉನ್ನತಿ ಹೂಡಾ ಅವರ ಮೊದಲ ಅಭಿಯಾನ ಎರಡನೇ ಸುತ್ತಿನಲ್ಲೇ ಅಂತ್ಯಗೊಂಡಿದೆ. 13ನೇ ಶ್ರೇಯಾಂಕದ ಕೆನಡಾದ ಮಿಶೆಲ್ ಲೀ ವಿರುದ್ಧ ಉನ್ನತಿ ತೀವ್ರ ಪೈಪೋಟಿಯಲ್ಲಿ ಸೋಲು ಅನುಭವಿಸಿದರು. ಮೂರು ಗೇಮ್‌ಗಳ ರೋಚಕ ಪಂದ್ಯದಲ್ಲಿ ಮಿಶೆಲ್ ಲೀ 11-21, 21-9, 23-21 ಅಂತರದಲ್ಲಿ ಗೆದ್ದು ಮುಂದಿನ ಹಂತಕ್ಕೆ ಪ್ರವೇಶಿಸಿದರು. ಪಂದ್ಯದಲ್ಲಿ ಇಬ್ಬರೂ ಆಟಗಾರ್ತಿಯರು ಹಂತ ಹಂತವಾಗಿ ಮೇಲುಗೈ ಸಾಧಿಸಿದ್ದು, ಅಂತಿಮ ಗೇಮ್‌ನಲ್ಲಿ ಕೇವಲ ಎರಡು ಅಂಕಗಳ ಅಂತರದಲ್ಲಿ ಫಲಿತಾಂಶ ನಿರ್ಧಾರವಾಯಿತು.
ಮೊದಲ ಗೇಮ್‌ನಲ್ಲಿ ಉನ್ನತಿ ಮೇಲುಗೈ
ಉನ್ನತಿ ಪಂದ್ಯವನ್ನು ಅದ್ಭುತವಾಗಿ ಆರಂಭಿಸಿ ಮೊದಲ ಗೇಮ್‌ನ್ನು 21-11ರಿಂದ ಗೆದ್ದರು. ಆದರೆ ಎರಡನೇ ಗೇಮ್‌ನಲ್ಲಿ ಮಿಶೆಲ್ ಲೀ ಬಲಿಷ್ಠವಾಗಿ ಕಂಬ್ಯಾಕ್ ಮಾಡಿ 21-9ರಿಂದ ಗೆದ್ದು ಪಂದ್ಯವನ್ನು ನಿರ್ಣಾಯಕ ಮೂರನೇ ಗೇಮ್‌ಗೆ ಕೊಂಡೊಯ್ದರು. ಮೂರನೇ ಗೇಮ್‌ನಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆಯಿತು. ಯಾವುದೇ ಆಟಗಾರ್ತಿಗೂ ಸ್ಪಷ್ಟ ಮುನ್ನಡೆ ಪಡೆಯಲು ಸಾಧ್ಯವಾಗಲಿಲ್ಲ. ಉನ್ನತಿ ಕೊನೆಯವರೆಗೂ ಹೋರಾಟ ಮುಂದುವರಿಸಿದರೂ, ನಿರ್ಣಾಯಕ ಕ್ಷಣಗಳಲ್ಲಿ ಮಿಶೆಲ್ ಲೀ ಆಕ್ರಮಣಕಾರಿಯಾಗಿ ಆಡಿ 23-21ರಿಂದ ಗೇಮ್ ಹಾಗೂ ಪಂದ್ಯವನ್ನು ತನ್ನ ಕಿಸಿಗೆ ಹಾಕಿಕೊಂಡರು.
World Championships: ಸೋಫಿಯಾ ನೋಬೆಲ್ ವಿರುದ್ಧ ಗೆದ್ದ ಪಿವಿ ಸಿಂಧೂಗೆ ಶುಭಾರಂಭ!
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಗೆಲುವು
ಉನ್ನತಿ ತಮ್ಮ ಆರಂಭಿಕ ಪಂದ್ಯದಲ್ಲಿ ಮ್ಯಾನ್ಮಾರ್‌ನ ಥೆಟ್ ಹ್ಟಾರ್ ತುಜಾರ್ ಅವರನ್ನು 22-20, 21-16ರಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದರು. ಇದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ರೋಹ್ಟಕ್ ಮೂಲದ ಶಟ್ಲರ್‌ಗೆ ಮೊದಲ ಗೆಲುವು ಆಗಿತ್ತು.ಕಳೆದ ಕೆಲವು ವರ್ಷಗಳಲ್ಲಿ ಉನ್ನತಿ ವೇಗವಾಗಿ ಬೆಳೆಯುತ್ತಿದ್ದಾರೆ. ಕೇವಲ 14ನೇ ವಯಸ್ಸಿನಲ್ಲೇ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದರು.
ಇದಲ್ಲದೆ, 2025ರ ಚೀನಾ ಓಪನ್ ಟೂರ್ನಿಯಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರನ್ನು ಸೋಲಿಸಿ ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಗೆಲುವುಗಳಲ್ಲಿ ಒಂದನ್ನೂ ದಾಖಲಿಸಿದ್ದರು.