ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

World Championships: ಕ್ವಾರ್ಟರ್‌ಫೈನಲ್ಸ್‌ಗೇರಿದ ಟ್ರೀಸಾ ಜಾಲಿ, ಗಾಯತ್ರಿ ಗೋಪಿಚಂದ್‌!

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲಿ ಭಾರತೀಯ ಜೋಡಿ ಭರ್ಜರಿ ಗೆಲುವು ಸಾಧಿಸಿದೆ. ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ವಿಶ್ವದ 7ನೇ ಶ್ರೇಯಾಂಕದ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ಜೋಡಿಯನ್ನು ಮಣಿಸಿತು.

ಕ್ವಾರ್ಟರ್‌ಫೈನಲ್ಸ್‌ಗೇರಿದ ಟ್ರೀಸಾ ಜಾಲಿ, ಗಾಯತ್ರಿ ಗೋಪಿಚಂದ್‌!

ಕ್ವಾರ್ಟರ್‌ಫೈನಲ್ಸ್‌ಗೇರಿದ ಟ್ರೀಸಾ ಜಾಲಿ, ಗಾಯತ್ರಿ ಗೋಪಿಚಂದ್‌! -

Profile
Ramesh Kote Aug 20, 2026 4:55 PM

ನವದೆಹಲಿ: ಟ್ರೀಸಾ ಜಾಲಿ (Treesa Jolly) ಮತ್ತು ಗಾಯತ್ರಿ ಗೋಪಿಚಂದ್ (Gayatri Gopichand) ಜೋಡಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ (BWF World Championship) ಮಹಿಳಾ ಡಬಲ್ಸ್ ಕ್ವಾರ್ಟರ್ ಫೈನಲ್‌ಗೆ ತಲುಪಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿ ಜಪಾನ್‌ನ ಏಳನೇ ಶ್ರೇಯಾಂಕಿತ ಜೋಡಿ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದೆ. ಏಕಪಕ್ಷೀಯ ಸ್ಪರ್ಧೆಯಲ್ಲಿ ಶ್ರೇಯಾಂಕವಿಲ್ಲದ ಭಾರತೀಯ ಜೋಡಿ ವಿಶ್ವದ ಏಳನೇ ಶ್ರೇಯಾಂಕಿತ ಜಪಾನಿನ ಜೋಡಿಯನ್ನು 21-16, 21-12 ಸೆಟ್‌ಗಳಿಂದ ಮಣಿಸಿತು.

ಇತ್ತೀಚೆಗೆ ಅರ್ಜುನ ಪ್ರಶಸ್ತಿ ಪಡೆದ ಟ್ರೀಸಾ ಮತ್ತು ಗಾಯತ್ರಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದರು ಮತ್ತು ತಮ್ಮ ಎದುರಾಳಿಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಪಂದ್ಯ 44 ನಿಮಿಷಗಳ ಕಾಲ ನಡೆಯಿತು. ಭಾರತೀಯ ಜೋಡಿ ಈ ಹಿಂದೆ 2022 ಮತ್ತು 2023 ರಲ್ಲಿ ಸತತ ಎರಡು ವರ್ಷಗಳಲ್ಲಿ ಆಲ್ ಇಂಗ್ಲೆಂಡ್ ಓಪನ್‌ನ ಸೆಮಿಫೈನಲ್ ತಲುಪಿತ್ತು. ಕಳೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಜಪಾನಿನ ಜೋಡಿ ಮೂರನೇ ಸ್ಥಾನವನ್ನು ಪಡೆದುಕೊಂಡು ಕಂಚಿನ ಪದಕವನ್ನು ಗೆದ್ದಿತ್ತು.

World Championship: 18ರ ವಯಸ್ಸಿನ ಆಟಗಾರನ ಎದುರು ಸೋತು ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್‌!

ಟ್ರೀಸಾ ಅವರ ಪಾದದ ಗಾಯದಿಂದಾಗಿ ಈ ವರ್ಷದ ಆರಂಭದಲ್ಲಿ ಕೆಲವು ಟೂರ್ನಿಗಳಿಂದ ಈ ಜೋಡಿ ಹೊರಗುಳಿದಿತ್ತು. ಅವರು ಇಂಡೋನೇಷ್ಯಾ ಓಪನ್‌ನಲ್ಲಿ ಮತ್ತೆ ಕಣಕ್ಕೆ ಇಳಿದಿದ್ದರು ಮತ್ತು ಈ ತಿಂಗಳ ಆರಂಭದಲ್ಲಿ ಫಿಲಿಪೈನ್ ಇಂಟರ್ನ್ಯಾಷನಲ್ ಚಾಲೆಂಜ್ ಅನ್ನು ಗೆದ್ದಿದ್ದರು.



ಸೆಮಿಫೈನಲ್‌ನಲ್ಲಿ ಅವರು ಜಾಂಗ್ ಶುಕ್ಸಿಯಾನ್ ಮತ್ತು ಜಿಯಾ ಯಿಫಾನ್ ವಿರುದ್ಧ ಚೀನಾದ ಸವಾಲನ್ನು ಎದುರಿಸಲಿದ್ದಾರೆ. 29 ವರ್ಷದ ಜಿಯಾ ಯಿಫಾನ್ ನಾಲ್ಕು ವಿಶ್ವ ಚಾಂಪಿಯನ್‌ಶಿಪ್ ಚಿನ್ನದ ಪದಕಗಳನ್ನು ಹೊಂದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರು ಚಿನ್ನ ಗೆದ್ದರು, ಆದರೆ ಆ ಸಮಯದಲ್ಲಿ ಅವರ ಜೊತೆಗಾರ್ತಿ ಚೆನ್ ಕ್ವಿಂಗ್ಚೆನ್ ಆಗಿದ್ದರು. ಕಳೆದ ವರ್ಷದ ಕೊನೆಯಲ್ಲಿ ಚೆನ್ ನಿವೃತ್ತರಾದರು, ಮತ್ತು ಜಿಯಾ ಯಿಫಾನ್ ನಂತರ ಜಾಂಗ್ ಶುಕ್ಸಿಯಾನ್ ಜೊತೆ ಕೈಜೋಡಿಸಿದ್ದಾರೆ. ನಾಲ್ಕನೇ ಶ್ರೇಯಾಂಕದ ಚೀನೀ ಜೋಡಿ ತೈವಾನ್‌ನ ಹ್ಸಿಹ್ ಪೀ-ಶಾನ್ ಮತ್ತು ಹಂಗ್ ಎನ್-ಟ್ಜು ಅವರನ್ನು ಮೂರನೇ ಸುತ್ತಿನಲ್ಲಿ ಸೋಲಿಸಿತು.

ಗೆಲುವಿನ ಬಳಿಕ ಗಾಯತ್ರಿ ಗೋಪಿಚಂದ್‌ ಹೇಳಿದ್ದೇನು?

ಗೆಲುವಿನ ಬಳಿಕ ಮಾತನಾಡಿದ ಗಾಯತ್ರಿ ಗೋಪಿಚಂದ್‌ “ಕೋರ್ಟ್‌ಗೆ ಇಳಿದಾಗ ಖಂಡಿತವಾಗಿಯೂ ಸ್ವಲ್ಪ ಒತ್ತಡ ಇರುತ್ತದೆ. ಆದರೆ ದೆಹಲಿಯಲ್ಲಿ ಆಡುತ್ತಿರುವುದರಿಂದ ಎದುರಾಗುವ ಈ ರೀತಿಯ ಒತ್ತಡವನ್ನು ನೀವು ಆನಂದಿಸುತ್ತೀರಿ. ಮೊದಲ ಸೆಟ್‌ನಲ್ಲಿ ನಾವು 13-16ರಿಂದ ಹಿನ್ನಡೆಯಲ್ಲಿದ್ದೆವು. ಆದರೆ ಬಳಿಕ ಕೋಚ್‌ಗಳಿಂದ ಕೆಲವು ಸಲಹೆಗಳನ್ನು ಪಡೆದೆವು. ಆ ನಂತರ ಅವುಗಳನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತಂದೆವು. ಹೀಗಾಗಿ ಗೆಲುವು ಸಾಧಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ,” ಎಂದು ಗೋಪಿಚಂದ್ ಹೇಳಿದರು.



“ಎರಡನೇ ಗೇಮ್‌ನಲ್ಲೂ ಕೆಲವು ಹಂತಗಳಲ್ಲಿ ಪಂದ್ಯ ತುಂಬಾ ಕಠಿಣವಾಗಿತ್ತು. ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಆದರೆ ನಾವು ಶಾಂತವಾಗಿದ್ದು, ಪಂದ್ಯವನ್ನು ನಮ್ಮ ಪರವಾಗಿ ಮುಗಿಸಲು ಸಾಧ್ಯವಾಯಿತು ಎಂಬುದಕ್ಕೆ ಸಂತೋಷವಿದೆ," ಎಂದು ಹೇಳಿದ ಅವರು, “ಒಂದು ಹಂತದಲ್ಲಿ ನಾವು ಒತ್ತಡದಲ್ಲಿದ್ದೆವು. ಆಗ ಪ್ರೇಕ್ಷಕರೇ ನಮ್ಮನ್ನು ಮುನ್ನಡೆಸಿದರು. ಅವರ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನಮ್ಮ ಮೇಲೆ ಇದೇ ರೀತಿ ನಂಬಿಕೆ ಇಟ್ಟುಕೊಂಡಿರಬೇಕು. ಮುಂದೆಯೂ ಅವರು ಸಂಭ್ರಮಿಸಲು ಇನ್ನಷ್ಟು ಕಾರಣಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಆಶಿಸುತ್ತೇನೆ,” ಎಂದರು.