IPL 2025: 10 ವರ್ಷಗಳ ಬಳಿಕ ಪ್ಲೇ-ಆಫ್ ಸ್ಥಾನದ ಮೇಲೆ ಕಣ್ಣಿಟ್ಟ ಪಂಜಾಬ್; ಇಂದು ರಾಜಸ್ಥಾನ್ ಎದುರಾಳಿ
ಭಾರತ-ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ದಿಢೀರ್ ಪಂದ್ಯ ರದ್ದುಗೊಂಡಾಗ ಆತಂಕದಿಂದ ತವರಿಗೆ ತೆರಳಿದ್ದ ಆಸೀಸ್ ಆಟಗಾರರಾದ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಜೋಶ್ ಇಂಗ್ಲಿಸ್ ಇನ್ನೂ ಭಾರತಕ್ಕೆ ವಾಪಸ್ ಆಗಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಮಿಚ್ ಓವನ್ ಮತ್ತು ನ್ಯಾಂಡ್ರೆ ಬರ್ಗರ್ ಕಣಕ್ಕಿಳಿಯಬಹುದು.


ಜೈಪುರ: ಬರೋಬ್ಬರಿ 10 ವರ್ಷಗಳ ಬಳಿಕ ಪ್ಲೇ-ಆಫ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪಂಜಾಬ್ ಕಿಂಗ್ಸ್(RR vs PBKS) ತಂಡ ಭಾನುವಾರ ಮಧ್ಯಾಹ್ನ ನಡೆಯುವ ಐಪಿಎಲ್(IPL 2025) ಪಂದ್ಯದಲ್ಲಿ ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ರಾಜಸ್ಥಾನ ರಾಯಲ್ಸ್(Rajasthan Royals) ವಿರುದ್ಧ ಸೆಣಸಾಟ ನಡೆಸಲಿದೆ. ಪಂಜಾಬ್ ತಂಡ ಕೊನೆಯ ಬಾರಿ ಪ್ಲೇ ಆಫ್ ಪ್ರವೇಶಿಸಿದ್ದು 2014 ರಲ್ಲಿ. ಆ ಬಳಿಕ ಆಡಿದ ಎಲ್ಲ ಆವೃತ್ತಿಗಳಲ್ಲಿಯೂ ಲೀಗ್ ಹಂತದಲ್ಲೇ ಮುಗ್ಗರಿಸಿತ್ತು.
ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಪಂಜಾಬ್ 11 ಪಂದ್ಯಗಳಿಂದ 15 ಅಂಕ ಹೊಂದಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅಧಿಕೃತವಾಗಿ ನಾಕೌಟ್ ಹಂತಕ್ಕೆ ಪ್ರವೇಶಿಸಲಿದೆ. ಎರಡು ಪಂದ್ಯ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ಅವಕಾಶವೂ ಇದೆ. ಆದರೆ ಇತರ ಪಂದ್ಯಗಳ ಫಲಿತಾಂಶ ತನ್ನ ಪರವಾಗಿ ದಾಖಲಾಗಬೇಕಿದೆ.
ಭಾರತ-ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ದಿಢೀರ್ ಪಂದ್ಯ ರದ್ದುಗೊಂಡಾಗ ಆತಂಕದಿಂದ ತವರಿಗೆ ತೆರಳಿದ್ದ ಆಸೀಸ್ ಆಟಗಾರರಾದ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಜೋಶ್ ಇಂಗ್ಲಿಸ್ ಇನ್ನೂ ಭಾರತಕ್ಕೆ ವಾಪಸ್ ಆಗಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಮಿಚ್ ಓವನ್ ಮತ್ತು ನ್ಯಾಂಡ್ರೆ ಬರ್ಗರ್ ಕಣಕ್ಕಿಳಿಯಬಹುದು.
ಸಂಜು ಕಮ್‌ಬ್ಯಾಕ್
ಗಾಯದ ಕಾರಣದಿಂದ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದ ರಾಜಸ್ಥಾನ್ ತಂಡದ ಖಾಯಂ ನಾಯಕ ಸಂಜು ಸ್ಯಾಮ್ಸನ್ ಗಾಯದಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ಮರಳಿದ್ದಾರೆ. ಅವರೇ ಈ ಪಂದ್ಯದಲ್ಲಿ ತಂಡ ಮುನ್ನಡೆಸಲಿದ್ದಾರೆ. 12 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ರಾಜಸ್ಥಾನ್‌ಗೆ ಇದು ತವರಿನಲ್ಲಿ ಈ ವರ್ಷ ಕೊನೆಯ ಪಂದ್ಯ. ಹೀಗಾಗಿ ತವರಿನ ಅಭಿಮಾನಿಗಳ ಮುಂದೆ ಕೊನೆಯ ಪಂದ್ಯದಲ್ಲಾದರೂ ಗೆದ್ದು ತವರಿನ ಅಭಿಮಾನಿಗಳಿಗೆ ಖಷಿ ನೀಡಲು ತಂಡ ಎದುರು ನೋಡುತ್ತಿದೆ.
ಇದನ್ನೂ ಓದಿ IPL 2025: ʻಆರ್‌ಸಿಬಿ ಫೈನಲ್‌ಗೆ ಪ್ರವೇಶಿಸಿದರೆ ಸ್ಟೇಡಿಯಂಗೆ ಬರುತ್ತೇನೆʼ-ಫ್ಯಾನ್ಸ್‌ಗೆ ಎಬಿಡಿ ಭರವಸೆ!
ಸವಾಯಿ ಮಾನ್ಸಿಂಗ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಉತ್ತಮ ಸಮತೋಲನವನ್ನು ನೀಡುತ್ತದೆ. ಇಲ್ಲಿ ಕಳೆದ 10 ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 178 ರನ್‌ಗಳಷ್ಟಿದೆ. ಚೇಸಿಂಗ್ ನಡೆಸಿದ ತಂಡಗಳು ಸ್ವಲ್ಪ ಮುನ್ನಡೆ ಸಾಧಿಸಿವೆ.