Ranji Trophy: ರೈಲ್ವೇಸ್ ವಿರುದ್ಧ ದಿಲ್ಲಿ ಗೆದ್ದರೂ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ನಿರಾಶೆ!
Delhi vs Railways Match Highlights: ವಿರಾಟ್ ಕೊಹ್ಲಿ ಪ್ರತಿನಿಧಿಸಿದ ದಿಲ್ಲಿ ತಂಡ, 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಇನಿಂಗ್ಸ್ ಹಾಗೂ 19 ರನ್‌ಗಳಿಂದ ಗೆಲುವು ಪಡೆದಿದೆ. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿ ಬೇಗ ವಿಕೆಟ್ ಒಪ್ಪಿಸಿದ್ದ ವಿರಾಟ್ ಕೊಹ್ಲಿ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ.
ನವದೆಹಲಿ: ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟ್ರೋಫಿ (Ranji Trophy 2024-25) ಟೂರ್ನಿಗೆ ಮರಳಿದ್ದ ವಿರಾಟ್ ಕೊಹ್ಲಿ (Virat Kohli) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದರೂ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದಿಲ್ಲಿ ತಂಡ ಇನಿಂಗ್ಸ್ ಹಾಗೂ 19 ರನ್‌ಗಳಿಂದ ಗೆಲುವು ಪಡೆಯಿತು. ಜನ ಸಾಗರ ಸೇರಿದ್ದ ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ತಮ್ಮ ಆಲ್‌ರೌಂಡರ್ ಪ್ರದರ್ಶನವನ್ನು ತೋರಿದ್ದ ಸುಮಿತ್ ಮಥುರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ವಿರಾಟ್ ಕೊಹ್ಲಿಯ ಸಹ ಆಟಗಾರ ಸುಮಿತ್ ಮಥುರ್ ದ್ವಿತೀಯ ಇನಿಂಗ್ಸ್‌ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದರೂ ಪ್ರಥಮ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡಯುವ ಜೊತೆಗೆ ಬ್ಯಾಟಿಂಗ್‌ನಲ್ಲಿ 86 ರನ್‌ಗಳನ್ನು ಕಲೆ ಹಾಕಿದ್ದರು. ಈ ಪಂದ್ಯದ ಕೇಂದ್ರ ಬಿಂದುವಾಗಿದ್ದ ವಿರಾಟ್ ಕೊಹ್ಲಿ ಪ್ರಥಮ ಇನಿಂಗ್ಸ್‌ನಲ್ಲಿ 15 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಹಿಮಾಂಶು ಸಂಗ್ವನ್ ಅವರ ಇನ್‌ಸ್ವಿಂಗ್ ಎಸೆತದಲ್ಲಿ ಕೊಹ್ಲಿ ಬೌಲ್ಡ್ ಆಗಿದ್ದರು.
Ranji Trophy: ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಹಿಮಾಂಶು ಸಂಗ್ವಾನ್ ಯಾರು?
ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ರೈಲ್ವೇಸ್ ತಂಡ 241 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಪ್ರಥಮ ಇನಿಂಗ್ಸ್ ಮಾಡಿದ್ದ ದಿಲ್ಲಿ ತಂಡ 374 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ದಿಲ್ಲಿ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 133 ರನ್‌ಗಳ ಹಿನ್ನಡೆಯನ್ನು ಅನುಭವಿಸಿತ್ತು. ಆಯುಷ್ ಬದೋನಿ (99) ಹಾಗೂ ಸುಮಿತ್ ಮಥುರ್ (86) ಅವರ 133 ರನ್‌ಗಳ ಜೊತೆಯಾಟದಿಂದ ದಿಲ್ಲಿ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿತ್ತು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ 114 ರನ್‌ಗಳಿಗೆ ಆಲ್‌ಔಟ್ ಆಯಿತು.
5 ವಿಕೆಟ್ ಸಾಧನೆ ಮಾಡಿದ ಶಿವಂ ಶರ್ಮಾ
ರೈಲ್ವೇಸ್ ತಂಡವನ್ನು ದ್ವಿತೀಯ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ದಿಲ್ಲಿಗೆ ನೆರವು ನೀಡಿದ್ದ ಶಿವಂ ಶರ್ಮಾ. ಅವರು ಬೌಲ್ ಮಾಡಿದ್ದ 11 ಓವರ್‌ಗಳಲ್ಲಿ ಕೇವಲ 33 ರನ್ ನೀಡಿ 5 ವಿಕೆಟ್ ಸಾಧನೆ ಮಾಡಿದ್ದರು. ಇವರು ಸೂರಜ್ ಅನುಜ್, ವಿವೇಕ್ ಸಿಂಗ್, ಮೊಹಮ್ಮದ್ ಸೈಫ್,ಕರಣ್ ಶರ್ಮಾ ಹಾಗೂ ರಾಹುಲ್ ಶರ್ಮಾ ಅವರನ್ನು ಔಟ್ ಮಾಡಿದ್ದರು. ರೈಲ್ವೇಸ್ ಪರ ಸೈಫ್ ಹಾಗೂ ಚೌಧರಿ ಕ್ರಮವಾಗಿ 31 ಮತ್ತು 30 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು.
Moments to cherish. Memories etched 👌😀#RanjiTrophy | @IDFCFIRSTBank | @imVkohli pic.twitter.com/N5GdKnxkAv
— BCCI Domestic (@BCCIdomestic) February 1, 2025
ನಾಲ್ಕನೇ ಸ್ಥಾನದಲ್ಲಿ ದಿಲ್ಲಿ ತಂಡ
ದಿಲ್ಲಿ ತಂಡ ಪ್ರಸಕ್ತ ಆವೃತ್ತಿಯಲ್ಲಿ ಆಡಿದ 7 ಪಂದ್ಯಗಳಿಂದ ಎರಡರಲ್ಲಿ ಗೆಲುವು ಪಡೆದಿತ್ತು. ಆ ಮೂಲಕ 20 ಅಂಕಗಳನ್ನು ಕಲೆ ಹಾಕುವ ಮೂಲಕ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಪಂದ್ಯದ ಎರಡನೇ ದಿನದ ಬಳಿಕ ದಿಲ್ಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ವಿರಾಟ್ ಕೊಹ್ಲಿಯನ್ನು ಗೌರವಿಸಿತ್ತು. ಈ ವೇಳೆ ಡಿಡಿಸಿಎ ಅಧ್ಯಕ್ಷ ರೋಹನ್ ಜೆಟ್ಲಿ ಅವರು ಸ್ಮರಣಿಕೆ ಹಾಗೂ ಶಾಲು ಹೊದಿಸಿ ಗೌರವ ನೀಡಿತ್ತು.