ರಣಜಿ ಟ್ರೋಫಿ; ಕರ್ನಾಟಕ ತಂಡಕ್ಕೆ ಮನ್ವಂತ್ ಕುಮಾರ್ ಆಸರೆ
Ranji Trophy: 9ನೇ ಕ್ರಮಾಂಕದಲ್ಲಿ ಆಡಲಿಳಿದ ಮನ್ವಂತ್ ಕುಮಾರ್ ಸ್ಮರಣೀಯ ಅರ್ಧಶತಕ ಬಾರಿಸಿ ತಂಡವನ್ನು ಮತ್ತೆ ಮೇಲೆತ್ತಿದರು. ತಾಳ್ಮೆಯುತವಾಗಿ ಬ್ಯಾಟಿಂಗ್ ನಡೆಸಿದ ಅವರು ವೈಯಕ್ತಿಕ ಮತ್ತು ತಂಡದ ಮೊತ್ತವನ್ನು ಹೆಚ್ಚಿಸಿದರು. 124 ಎಸೆತ ಎದುರಿಸಿ 5 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ ಅಜೇಯ 86 ರನ್ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ
Manwant Kumar -
ಆಲೂರು, ಅ.18: ತಂಡದ ಪಾಲಿನ ಆಪತ್ಭಾಂದವ ಎಡಗೈ ಬ್ಯಾಟರ್ ಮನ್ವಂತ್ ಕುಮಾರ್(86*) ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ಭಾನುವಾರ ಆರಂಭಗೊಂಡ ರಣಜಿ ಟ್ರೋಫಿಯ ಸೌರಾಷ್ಟ್ರ ವಿರುದ್ಧ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ 8 ವಿಕೆಟ್ಗೆ 281 ರನ್ಗಳ ಗೌರವಯುತ ಮೊತ್ತ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಕರ್ನಾಟಕ ಮೊದಲ ಪಂದ್ಯದಂತೆ ಈ ಪಂದ್ಯದಲ್ಲಿಯೂ ಆರಂಭಿಕ ಆಘಾತ ಎದುರಿಸಿತು. ಕೆ.ಎಲ್ ರಾಹುಲ್ ಅಲಭ್ಯತೆಯಲ್ಲಿ ಆಡಲಿಳಿದ ರೋಹನ್ ಪಾಟೀಲ್ ಕ್ರೀಸ್ನಲ್ಲಿ ಉಳಿಯುವ ಪ್ರಯತ್ನ ಮಾಡಿದರೂ ಅವರ ಆಟ 6 ರನ್ಗೆ ಕೊನೆಗೊಂಡಿತು. ಮೊದಲ ವಿಕೆಟ್ ಪತನದ ಬೆನ್ನಲ್ಲೇ ನೈಟ್ವಾಚ್ಮ್ಯಾನ್ ಆಗಿ ವಿಜಯ್ಕುಮಾರ್ ವೈಶಾಕ್ ಅವರನ್ನು ಕಣಕ್ಕಿಳಿಸಲಾಯಿತು. ಆದರೆ ಈ ಪ್ರಯೋಗವೂ ಕೈಹಿಡಿಯಲ್ಲಿ. ಅವರು ಕೇವಲ ಒಂದು ರನ್ಗೆ ವಿಕೆಟ್ ಕಳೆದುಕೊಂಡರು.
ಆದರೆ, ಮೂರನೇ ವಿಕೆಟ್ಗೆ ಮಯಾಂಕ್ ಅಗರ್ವಾಲ್ ಮತ್ತು ಅನೀಶ್ ಕೆ.ವಿ. ಕೆಲ ಕಾಲ ಕ್ರೀಸ್ನಲ್ಲಿ ಬೇರೂರಿ ನಿಂತರು. ಈ ಜೋಡಿಯು 98 ರನ್ಗಳ ಜತೆಯಾಟ ನಡೆಸಿ ತಂಡದ ಚೇತರಿಕೆಗೆ ನೆರವಾದರು. ಅಗರ್ವಾಲ್ 42 ರನ್ ಗಳಿಸಿದರು.
ರಣಜಿ ಟ್ರೋಫಿಗೆ ಮರಳಿದ ಶುಭಮನ್ ಗಿಲ್ ಕೇವಲ 1 ರನ್ಗೆ ಔಟ್
ಅಗರ್ವಾಲ್ ವಿಕೆಟ್ ಪತನದ ಬಳಿಕ ಕರುಣ್ ನಾಯರ್ ಜತೆ ಅನೀಶ್ ಮತ್ತೊಂದು ದೊಡ್ಡ ಜತೆಯಾಟವಾಡಿದರು. ಅರ್ಧಶತಕ ಬಾರಿಸಿದ ಅನೀಶ್ ಅಂತಿಮವಾಗಿ 59 ರನ್ ಗಳಿಸಿ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ 46 ಕೊಡುಗೆ ನೀಡಿದರು.
ಆಪತ್ಭಾಂದವ ಮನ್ವಂತ್
ಕರುಣ್ ಮತ್ತು ಅನೀಶ್ ವಿಕೆಟ್ ಕಳೆದುಕೊಂಡ ಬಳಿಕ ಮತ್ತೆ ದಿಢೀರ್ ಕುಸಿತ ಕಂಡ ತಂಡಕ್ಕೆ 9ನೇ ಕ್ರಮಾಂಕದಲ್ಲಿ ಆಡಲಿಳಿದ ಮನ್ವಂತ್ ಕುಮಾರ್ ಸ್ಮರಣೀಯ ಅರ್ಧಶತಕ ಬಾರಿಸಿ ತಂಡವನ್ನು ಮತ್ತೆ ಮೇಲೆತ್ತಿದರು. ತಾಳ್ಮೆಯುತವಾಗಿ ಬ್ಯಾಟಿಂಗ್ ನಡೆಸಿದ ಅವರು ವೈಯಕ್ತಿಕ ಮತ್ತು ತಂಡದ ಮೊತ್ತವನ್ನು ಹೆಚ್ಚಿಸಿದರು. 124 ಎಸೆತ ಎದುರಿಸಿ 5 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ ಅಜೇಯ 86 ರನ್ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡುತ್ತಿರುವ ಅಭಿಲಾಷ್ ಶೆಟ್ಟಿ 85 ಎಸೆತ ಎದುರಿಸಿ ನಿಂತು ಅಜೇಯ 5 ರನ್ ಗಳಿಸಿದ್ದಾರೆ. ನಾಯಕ ಶ್ರೇಯಸ್ ಗೋಪಾಲ್ 3 ರನ್ ಗಳಿಸಿ ವಿಫಲರಾದರು.
ಸೌರಾಷ್ಟ ಪರ ನಾಯಕ ಜೈದೇವ್ ಉನಾದ್ಕತ್ 51ಕ್ಕೆ 3 ವಿಕೆಟ್ ಕಿತ್ತರು. ಪಾರ್ಥ ಭುಟ್ ಕೂಡ ಮೂರು ವಿಕೆಟ್ ಪಡೆದರು. ಉಳಿದಂತೆ ಚೇತನ್ ಸಕಾರಿಯಾ 2 ವಿಕೆಟ್ ಕಲೆಹಾಕಿದರು.