2036 Olympics : ಅತ್ಯಾಚಾರ ಅಪರಾಧಿ ಅಸಾರಾಂ ಬಾಪು ಆಶ್ರಮದ ಭೂಮಿ ಒಲಂಪಿಕ್ಸ್‌ಗೆ ಬಳಕೆ? ಗುಜರಾತ್ ಸರ್ಕಾರದ ಹೇಳಿದ್ದೇನು?
2036 ರ ಒಲಂಪಿಕ್ಸ್‌ನ ಆತಿಥ್ಯವನ್ನು ಭಾರತ ವಹಿಸಿಕೊಳ್ಳಲಿದೆ ಎಂಬ ಮಾತು ಕೇಳಿ ಬಂದಿದೆ. ಅತ್ಯಾಚಾರ ಆರೋಪಿ ಅಸಾರಾಂ ಬಾಪು ಒಡೆತನದ ಮೂರು ಆಶ್ರಮಗಳ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ಸರ್ಕಾರ ಯೋಚಿಸಿದೆ. ಅಸಾರಾಂ ಆಶ್ರಮ, ಭಾರತೀಯ ಸೇವಾ ಸಮಾಜ ಮತ್ತು ಸದಾಶಿವ ಪ್ರಜ್ಞಾ ಮಂಡಲ ಆಶ್ರಮಗಳನ್ನು ಬೇರೆಡೆ ಸ್ಥಳಾಂತರಿಸುವ ನಿರೀಕ್ಷೆಯಿದೆ.


ಗಾಂಧೀನಗರ: 2036 ರ ಒಲಂಪಿಕ್ಸ್‌ನ (2036 Olympics) ಆಥಿತ್ಯವನ್ನು ಭಾರತ ವಹಿಸಿಕೊಳ್ಳಲಿದೆ ಎಂಬ ಮಾತು ಕೇಳಿ ಬಂದಿದೆ. ಈ ಕುರಿತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಗೆ ಅಧಿಕೃತವಾಗಿ 'ಇಂಟೆಂಟ್ ಲೆಟರ್' ಅನ್ನು ಸಲ್ಲಿಸಿತ್ತು. ವರದಿಯ ಪ್ರಕಾರ, ಭೂಪೇಂದ್ರ ಪಟೇಲ್ ನೇತೃತ್ವದ ಗುಜರಾತ್ ಸರ್ಕಾರವು ಅಹಮದಾಬಾದ್‌ನಲ್ಲಿ 650 ಎಕರೆ ಭೂಮಿಯಲ್ಲಿ ಒಲಿಂಪಿಕ್ ಗ್ರಾಮ ಮತ್ತು ಇತರ ಸೌಲಭ್ಯಗಳನ್ನು ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅತ್ಯಾಚಾರ ಆರೋಪಿ ಅಸಾರಾಂ ಬಾಪು ಒಡೆತನದ ಮೂರು ಆಶ್ರಮಗಳನ್ನು ಹೊಂದಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಸಾರಾಂ ಆಶ್ರಮ, ಭಾರತೀಯ ಸೇವಾ ಸಮಾಜ ಮತ್ತು ಸದಾಶಿವ ಪ್ರಜ್ಞಾ ಮಂಡಲ ಆಶ್ರಮಗಳನ್ನು ಸ್ಥಳಾಂತರಿಸುವ ನಿರೀಕ್ಷೆಯಿದೆ. ಅಹಮದಾಬಾದ್ ಪುರಸಭೆ ಆಯುಕ್ತರ ನೇತೃತ್ವದ ಮೂವರು ಸದಸ್ಯರ ಸಮಿತಿಯು ಮಾಸ್ಟರ್ ಪ್ಲಾನ್‌ಗೆ ಅನುಗುಣವಾಗಿ ಆಡಳಿತ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ವರದಿ ತಿಳಿಸಿದೆ. ಪರ್ಯಾಯ ಭೂಮಿ ಅಥವಾ ನಿರ್ಮಾಣಗಳಿಗೆ ಪರಿಹಾರವನ್ನು ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಸಮಿತಿ ತಿಳಿಸಿದೆ. ಸರ್ದಾರ್ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಮತ್ತು ಒಲಿಂಪಿಕ್ ವಿಲೇಜ್‌ನ ಮಾಸ್ಟರ್ ಪ್ಲಾನ್ ಅನ್ನು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ (AUDA) ಸಹಾಯದಿಂದ ಅಂತರರಾಷ್ಟ್ರೀಯ ಸಲಹೆಗಾರರಾದ ಪಾಪ್ಯುಲಸ್ ಸಿದ್ಧಪಡಿಸುತ್ತಿದೆ. ಪ್ರಾಥಮಿಕ ವರದಿಯು 650 ಎಕರೆ ಭೂಮಿಯನ್ನು ಸೂಚಿಸಿದೆ, ಅದರಲ್ಲಿ 600 ಎಕರೆ ಭಟ್, ಮೋಟೆರಾ, ಕೋಟೇಶ್ವರ ಮತ್ತು ಸುಘಡ್‌ನಲ್ಲಿ ಮತ್ತು 50 ಎಕರೆ ಸಬರಮತಿ ನದಿ ದಂಡೆಯಲ್ಲಿದೆ.
ಕರೈ ಪೊಲೀಸ್ ಅಕಾಡೆಮಿಗೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದ್ದು, ಅದರಲ್ಲಿ ಕ್ರೀಡಾ ಸೌಲಭ್ಯಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದ ಸುತ್ತಲೂ 280 ಎಕರೆ ಮತ್ತು ನದಿ ದಂಡೆಯ ಉದ್ದಕ್ಕೂ 50 ಎಕರೆ ಪ್ರದೇಶದಲ್ಲಿ ಸರ್ದಾರ್ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಸ್ಥಾಪನೆಯಾಗಲಿದ್ದು, ಭಟ್ ಮತ್ತು ಸುಘಾಡ್‌ನಲ್ಲಿ 240 ಎಕರೆ ಪ್ರದೇಶದಲ್ಲಿ ಒಲಿಂಪಿಕ್ ಗ್ರಾಮ ಸ್ಥಾಪನೆಯಾಗಲಿದೆ. ಮಾಸ್ಟರ್ ಪ್ಲಾನ್‌ಗೆ ಅನುಗುಣವಾಗಿ ಮೀಸಲಾದ ಪ್ರದೇಶಗಳ ಸುತ್ತ ಲ್ಯಾಂಡ್‌ಮಾರ್ಕ್ ಮಾಡುವ ಕೆಲಸ ಪೂರ್ಣಗೊಂಡಿದ್ದು, ಭೂಮಿ ಸ್ವಾಧೀನಕ್ಕೆ ಸಿದ್ಧವಾಗಿದೆ ಎಂದು AUDA ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: USA Horror: ಅಮೆರಿಕದಲ್ಲಿ ಭಾರತೀಯರ ಹತ್ಯೆ; ಮದ್ಯದಂಗಡಿ ತೆರೆದಿಲ್ಲವೆಂದು ಗುಜರಾತ್ ಮೂಲದ ತಂದೆ- ಮಗಳ ಕೊಲೆ
ಒಲಂಪಿಕ್ಸ್ ಆಯೋಜಿಸುವುದರಿಂದ ಭಾರತಕ್ಕೆ 34,700 ಕೋಟಿ ರೂ.ಗಳಿಂದ 64,000 ಕೋಟಿ ರೂ.ಗಳವರೆಗೆ ವೆಚ್ಚವಾಗಬಹುದು ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಅಂದಾಜು ಖರ್ಚು ಕಳೆದ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ (ರೂ. 32,765 ಕೋಟಿ) ಗಿಂತ ಹೆಚ್ಚಾಗಿರುತ್ತದೆ ಎಂದು ತಿಳಿದುಬಂದಿದೆ. ಒಲಂಪಿಕ್ಸ್‌ನ ಆತಿಥ್ಯಕ್ಕೆ ಭಾರತ ಮಾತ್ರವಲ್ಲದೆ ಕತಾರ್ ಮತ್ತು ಸೌದಿ ಅರೇಬಿಯಾ ಸೇರಿದಂತೆ 10 ಕ್ಕೂ ಹೆಚ್ಚು ದೇಶಗಳು ಆಸಕ್ತಿ ವಹಿಸಿದೆ. ಆದರೆ ಇದು ವರೆಗೂ ಯಾವುದೂ ಅಧಿಕೃತವಾಗಿಲ್ಲ.