ನ್ಯೂಜಿಲೆಂಡ್-ಎ ವಿರುದ್ಧದ ಮೂರನೇ ಅನಧಿಕೃತ ಟೆಸ್ಟ್ ನಿಂದ ರಿಷಭ್ ಪಂತ್ ಔಟ್
ನವೆಂಬರ್ 19 ರಿಂದ ವೆಲ್ಲಿಂಗ್ಟನ್ನಲ್ಲಿ ಪ್ರಾರಂಭವಾಗಲಿರುವ ಟೆಸ್ಟ್ ಪಂದ್ಯಕ್ಕಾಗಿ, ಭಾರತೀಯ ತಂಡದ ಆಡಳಿತ ಮಂಡಳಿಯು ಪಂತ್ ಅವರನ್ನು ನೇರವಾಗಿ ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳುತ್ತದೆಯೇ ಅಥವಾ ವಿಕೆಟ್ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಅವರನ್ನು ಕಣಕ್ಕಿಳಿಸುತ್ತದೆಯೇ ಎಂಬುದು ಕಾದು ನೋಡಬೇಕಿದೆ.
Rishabh Pant -
ಭಾರತ 'ಎ' ಮತ್ತು ನ್ಯೂಜಿಲೆಂಡ್ 'ಎ' ತಂಡಗಳ ನಡುವಿನ ಮೂರು ಪಂದ್ಯಗಳ ಸರಣಿಯ ಮೂರನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ, ಭಾರತದ ತಾರಾ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಆಡುವುದಿಲ್ಲ. 'ದೈನಿಕ್ ಜಾಗರಣ್' ಪತ್ರಿಕೆಯ ವರದಿಯ ಪ್ರಕಾರ, ಕಳೆದ ತಿಂಗಳು (ಅಕ್ಟೋಬರ್ನಲ್ಲಿ) ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಇರಾನಿ ಕಪ್ ಪಂದ್ಯದಲ್ಲಿ 'ರೆಸ್ಟ್ ಆಫ್ ಇಂಡಿಯಾ' ತಂಡಕ್ಕಾಗಿ ಆಡುವಾಗ ಗಾಯಗೊಂಡಿದ್ದ ಪಂತ್, ಮೊದಲ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಅವರು ಮೂರನೇ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ತರಬೇತಿಯನ್ನು ಪುನರಾರಂಭಿಸಿದ ಪಂತ್, ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಭಾರತ 'ಎ' ಮತ್ತು ನ್ಯೂಜಿಲೆಂಡ್ 'ಎ' ತಂಡಗಳ ನಡುವಿನ ಮೂರನೇ ಅನಧಿಕೃತ ಟೆಸ್ಟ್ ಪಂದ್ಯವು ನವೆಂಬರ್ 7 ರಿಂದ 10 ರವರೆಗೆ ಲಿಂಕನ್ನಲ್ಲಿ ನಡೆಯಲಿದೆ. ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯಗಳಿಗೆ ಮುನ್ನ, ಪಂತ್ಗೆ ಸ್ವಲ್ಪ ಆಟದ ಅಭ್ಯಾಸ ಸಿಗಲಿ ಎಂಬ ಉದ್ದೇಶದಿಂದ ಅವರು ಈ ಮೂರನೇ ಅನಧಿಕೃತ ಟೆಸ್ಟ್ನಲ್ಲಿ ಆಡಬಹುದು ಎಂದು ವರದಿಯಾಗಿತ್ತು. ಆದರೆ, ಅವರು ಈ ಪಂದ್ಯದಲ್ಲಿ ಆಡುವುದಿಲ್ಲ ಎಂಬುದು ಈಗ ಖಚಿತಗೊಂಡಿದೆ.
"ಗಾಯದಿಂದ ಚೇತರಿಸಿಕೊಂಡ ನಂತರ, ಪಂತ್ ತಮ್ಮ ಕೌಶಲ್ಯ ತರಬೇತಿಯನ್ನು ಪುನರಾರಂಭಿಸಿದ್ದಾರೆ. ಸದ್ಯಕ್ಕೆ ಅವರಿಗೆ ಯಾವುದೇ ನೋವು ಇಲ್ಲ ಮತ್ತು ಗಾಯಕ್ಕೆ ಸಂಬಂಧಿಸಿದ ಯಾವುದೇ ವೈದ್ಯಕೀಯ ಲಕ್ಷಣಗಳು ಕಂಡುಬರುತ್ತಿಲ್ಲ. ಆದಾಗ್ಯೂ, ಅವರು ಸ್ಪರ್ಧಾತ್ಮಕ ಕ್ರಿಕೆಟ್ಗೆ ಯಾವಾಗ ಮರಳುತ್ತಾರೆ ಎಂಬುದಕ್ಕೆ ಇನ್ನೂ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಿಲ್ಲ," ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆಸ್ಟ್ರೇಲಿಯಾದ ಪ್ರಾಬಲ್ಯಕ್ಕೆ ಅಂತ್ಯ ಹಾಡಿದ ದಕ್ಷಿಣ ಆಫ್ರಿಕಾ; ನಂ. 1 ಟೆಸ್ಟ್ ತಂಡ
ಬಿಸಿಸಿಐಯ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಮೂಲಗಳ ಪ್ರಕಾರ, ಕೌಶಲ್ಯ ತರಬೇತಿಯನ್ನು ಪುನರಾರಂಭಿಸಿದ ನಂತರ, ಪಂತ್ ತಮ್ಮ ದೈಹಿಕ ಸಾಮರ್ಥ್ಯ ಮತ್ತು ಪಂದ್ಯಕ್ಕೆ ಸಿದ್ಧರಾಗಿರುವ ಸ್ಥಿತಿಯನ್ನು ಮೌಲ್ಯಮಾಪನ ಮಾಡಲು ಮೂರರಿಂದ ನಾಲ್ಕು ಅಭ್ಯಾಸ ಅವಧಿಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಅವಧಿಗಳಲ್ಲಿ ಅವರ ದೈಹಿಕ ಸ್ಥಿತಿ, ಬ್ಯಾಟಿಂಗ್ ಮತ್ತು ವಿಕೆಟ್ಕೀಪಿಂಗ್ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ಈ ಮೂರರಿಂದ ನಾಲ್ಕು ಅಭ್ಯಾಸ ಅವಧಿಗಳ ಫಲಿತಾಂಶಗಳ ಆಧಾರದ ಮೇಲೆ ಪಂತ್ ಅವರ ಪುನರಾಗಮನದ ಯೋಜನೆಯನ್ನು ರೂಪಿಸಲಾಗುತ್ತದೆ ಎಂದು ವರದಿಯಾಗಿದೆ.
ನವೆಂಬರ್ 19 ರಿಂದ ವೆಲ್ಲಿಂಗ್ಟನ್ನಲ್ಲಿ ಪ್ರಾರಂಭವಾಗಲಿರುವ ಟೆಸ್ಟ್ ಪಂದ್ಯಕ್ಕಾಗಿ, ಭಾರತೀಯ ತಂಡದ ಆಡಳಿತ ಮಂಡಳಿಯು ಪಂತ್ ಅವರನ್ನು ನೇರವಾಗಿ ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳುತ್ತದೆಯೇ ಅಥವಾ ವಿಕೆಟ್ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಅವರನ್ನು ಕಣಕ್ಕಿಳಿಸುತ್ತದೆಯೇ ಎಂಬುದು ಕಾದು ನೋಡಬೇಕಿದೆ. ಧ್ರುವ್ ಜುರೆಲ್ ಪ್ರಸ್ತುತ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್ನಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ.