'ನರ್ವಸ್ 90'; ಶತಕ ವಂಚಿತರಾಗಿ ಸಚಿನ್, ಧೋನಿ ಜತೆ ಅನಗತ್ಯ ದಾಖಲೆ ಪಟ್ಟಿ ಸೇರಿದ ಶುಭಮನ್ ಗಿಲ್
Shubman Gill: ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ತಲಾ 10 ಬಾರಿ 90ರ ಗಡಿಯಲ್ಲಿ ಔಟಾಗುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಿಷಭ್ ಪಂತ್(ಏಳು ಬಾರಿ) ಮೂರನೇ ಸ್ಥಾನದಲ್ಲಿದ್ದರೆ, ಎಂ.ಎಸ್. ಧೋನಿ, ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ತಲಾ ಐದು ಬಾರಿ 90 ರನ್ಗಳ ಗಡಿಯಲ್ಲಿ ಔಟಾಗಿದ್ದಾರೆ.
Shubman Gill -
ವೆಲ್ಲಿಂಗ್ಟನ್, ನ.21: ಇಲ್ಲಿನ ಬೇಸಿನ್ ರಿಸರ್ವ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಂದು, ಶತಕ ಬಾರಿಸುವ ಅವಕಾಶದಿಂದ ಕೂದಲೆಳೆ ಅಂತರದಲ್ಲಿ ವಂಚಿತರಾದ ಶುಭಮನ್ ಗಿಲ್, ಭಾರತದ ಶ್ರೇಷ್ಠ ಬ್ಯಾಟರ್ಗಳ ಜತೆ ಅನಗತ್ಯ ದಾಖಲೆಯ ಪಟ್ಟಿಗೆ ಸೇರ್ಪಡೆಗೊಂಡರು.
ಮೂರನೇ ದಿನದಾಟದಲ್ಲಿ ಆಡಲಿಳಿದ ಶುಭಮನ್ ಗಿಲ್ 146 ಎಸೆತಗಳಲ್ಲಿ 98 ರನ್ ಗಳಿಸಿ ಔಟಾದರು. ಕೇವಲ ಎರಡು ರನ್ಗಳ ಅಂತರದಲ್ಲಿ ಶತಕ ವಂಚಿತರಾದರು. ಟೆಸ್ಟ್ ಕ್ರಿಕೆಟ್ನಲ್ಲಿ ಗಿಲ್ 90 ರನ್ಗಳ ಗಡಿಯಲ್ಲಿ ಔಟ್ ಆಗಿರುವುದು ಇದು ನಾಲ್ಕನೇ ಬಾರಿ. ಈ ಮೂಲಕ ಗೌತಮ್ ಗಂಭೀರ್, ಸೌರವ್ ಗಂಗೂಲಿ ಮತ್ತು ಶ್ರೇಷ್ಠ ಬ್ಯಾಟರ್ ವಿ.ವಿ.ಎಸ್. ಲಕ್ಷ್ಮಣ್ ಜತೆ ಟೆಸ್ಟ್ ಕ್ರಿಕೆಟ್ನಲ್ಲಿ 90 ರಿಂದ 99 ರನ್ಗಳ ನಡುವೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ಔಟಾದ ಅನಗತ್ಯ ದಾಖಲೆ ಪಟ್ಟಿಯಲ್ಲಿ ಸ್ಥಾನ ಪಡೆದರು.
ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ತಲಾ 10 ಬಾರಿ 90ರ ಗಡಿಯಲ್ಲಿ ಔಟಾಗುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಿಷಭ್ ಪಂತ್(ಏಳು ಬಾರಿ) ಮೂರನೇ ಸ್ಥಾನದಲ್ಲಿದ್ದರೆ, ಎಂ.ಎಸ್. ಧೋನಿ, ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ತಲಾ ಐದು ಬಾರಿ 90 ರನ್ಗಳ ಗಡಿಯಲ್ಲಿ ಔಟಾಗಿದ್ದಾರೆ.
'ಡ್ರಿಂಕ್ಸ್' ನನ್ನ ಕಡೆಯಿಂದ; ಡಿಆರ್ಎಸ್ ಎಡವಟ್ಟು ಮಾಡಿದ ಗ್ಲೆನ್ ಫಿಲಿಪ್ಸ್ಗೆ ರಾಹುಲ್ ಭರವಸೆ
ತಮ್ಮ 12ನೇ ಟೆಸ್ಟ್ ಶತಕವನ್ನು ಗಳಿಸುವ ಅವಕಾಶವನ್ನು ಕಳೆದುಕೊಂಡರೂ, ನ್ಯೂಜಿಲೆಂಡ್ ವಿರುದ್ಧ ಭಾರತವನ್ನು ಬಲವಾದ ಸ್ಥಿತಿಗೆ ಕೊಂಡೊಯ್ಯುವಲ್ಲಿ ಗಿಲ್ ನಿರ್ಣಾಯಕ ಪಾತ್ರ ವಹಿಸಿದರು. ಕೆ.ಎಲ್. ರಾಹುಲ್(136) ಅವರ ಸಂಯಮದ ಶತಕ ಮತ್ತು ದೇವದತ್ತ ಪಡಿಕ್ಕಲ್(80) ಅರ್ಧಶಕದಿಂದ ಭದ್ರ ಬುನಾದಿ ಹಾಕಿಕೊಟ್ಟ ನಂತರ, ಗಿಲ್ ನ್ಯೂಜಿಲೆಂಡ್ ಬೌಲರ್ಗಳ ಮೇಲೆ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಅವರು ಮೈದಾನದ ಎಲ್ಲೆಡೆ ಬೌಂಡರಿಗಳನ್ನು ಬಾರಿಸಿದರು. ತಮ್ಮ 'ಕಟ್' ಮತ್ತು 'ಪುಲ್' ಹೊಡೆತಗಳ ಮೂಲಕ ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು.
💔SHUBMAN GILL DISMISSED FOR 98 💔 - He missed a well deserving Hundred by just 2 runs, deserves that Hundred but got out in the final over of the day, a sad end for Indian Captain. https://t.co/tJBGOcjlCg
— Footvoski (@CRICBALLY) November 21, 2026
3 ಸಾವಿರ ರನ್
ಗ್ಲೆನ್ ಫಿಲಿಪ್ಸ್ ಅವರ ಬೌಲಿಂಗ್ನಲ್ಲಿ ಗಿಲ್ ಸಿಕ್ಸರ್ ಬಾರಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ 3,000 ರನ್ಗಳ ಮೈಲಿಗಲ್ಲನ್ನು ತಲುಪಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಆದಾಗ್ಯೂ, ದಿನದ ಅಂತಿಮ ಓವರ್ನಲ್ಲಿ ಜೇಕಬ್ ಡಫಿ ಅವರ ವಿಕೆಟ್ ಪಡೆಯುವ ಮೂಲಕ, 98 ರನ್ಗಳಿಸಿದ್ದ ಅವರ ಮನರಂಜಕ ಇನ್ನಿಂಗ್ಸ್ಗೆ ತೆರೆ ಎಳೆದರು.
ರಿಷಭ್ ಪಂತ್ 62 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿ ತಂಡದ ರನ್ ವೇಗವನ್ನು ಹೆಚ್ಚಿಸಿದರು. ಅವರು ಗಿಲ್ ಅವರೊಂದಿಗೆ ನಾಲ್ಕನೇ ವಿಕೆಟ್ಗೆ 100 ರನ್ಗಳ ಜೊತೆಯಾಟವನ್ನು ನೀಡಿದರು. ದಿನದ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 486 ರನ್ ಗಳಿಸಿದೆ. ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 368 ರನ್ ಗಳಿಸಿದ ನಂತರ, ಭಾರತವು 118 ರನ್ಗಳ ಮುನ್ನಡೆಯೊಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.