Champions Trophyಯಲ್ಲಿ ಮಿಂಚಬಲ್ಲ ಇಬ್ಬರು ಆಟಗಾರರನ್ನು ಹೆಸರಿಸಿದ ಸೌರವ್ ಗಂಗೂಲಿ!
Sourav Ganguly Faith on Virat and Rohit: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟೂರ್ನಿಯಲ್ಲಿ ಭಾರತ ತಂಡವು ಟ್ರೋಫಿ ಜಯಿಸುವ ನೆಚ್ಚಿನ ತಂಡವಾಗಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಔಟ್ ಆಫ್ ಫಾರ್ಮ್ ನಲ್ಲಿರುವ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ ಬ್ಯಾಟಿಂಗ್ ವೈಭವ ಮೆರೆಯುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಹಾಗೂ ರಣಜಿ ಟೂರ್ನಿಯಲ್ಲಿ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ರನ್ ಬರ ಎದುರಿಸಿದ್ದರು. ಆದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈ ದಿಗ್ಗಜರ ಬ್ಯಾಟ್ ಘರ್ಜಿಸಲಿದೆ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ವೈಫಲ್ಯದಿಂದ ಹೊರಬರಲು ರಣಜಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ಆದರೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಸಿದ್ಧಗೊಳ್ಳದ ಪಾಕ್ ಕ್ರೀಡಾಂಗಣ; ಜ.30 ಅಂತಿಮ ಗಡುವು
ರೋಹಿತ್ - ಕೊಹ್ಲಿ ಅದ್ಭುತ ಆಟಗಾರರು: ಗಂಗೂಲಿ
ಇಂಡಿಯಾ ಟುಡೇ ಜೊತೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆರಂಭಿಕ ಸೌರವ್ ಗಂಗೂಲಿ ಅವರು, ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.
"ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅದ್ಭುತ ಆಟಗಾರರಾಗಿದ್ದಾರೆ. ದುಬೈನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯಗಳಲ್ಲಿ ಈ ಇಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ. ಈ ಹಿಂದೆ ನಡೆದಿದ್ದ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿಯೂ ಇವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು," ಎಂದು ಹೇಳಿದ್ದರೆ.
ಫಾರ್ಮ್‌ಗೆ ಮರಳಲಿದ್ದಾರೆ
"ಆಸ್ಟ್ರೇಲಿಯಾದಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಎಡವಿದ್ದರು. ಆದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈ ದಿಗ್ಗಜರು ತಮ್ಮ ಹಿಂದಿನ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ" ಎಂದು ಭವಿಷ್ಯ ನುಡಿದಿದ್ದಾರೆ.
Champions Trophy schedule: ಫೆ 23ಕ್ಕೆ ಭಾರತ-ಪಾಕ್ ಪಂದ್ಯ, ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿ!
ಟೀಮ್ ಇಂಡಿಯಾಗೆ ಟ್ರೋಫಿ ಗೆಲ್ಲುವ ಅವಕಾಶ
ಐಸಿಸಿ ಆಯೋಜನೆಯ 50 ಓವರ್‌ಗಳ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಉತ್ತಮ ಸಾಧನೆ ತೋರಿದೆ. 2011ರ ವಿಶ್ವಕಪ್ ಗೆದ್ದಿದ್ದ ಭಾರತ ತಂಡವು, ತವರು ಅಂಗಣದಲ್ಲಿ ನಡೆದಿದ್ದ 2023ರ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಜಯಿಸಿತ್ತು. ರೋಹಿತ್ ಶರ್ಮಾ ಸಾರಥ್ಯದಲ್ಲಿ ಟಿ20ಐ ವಿಶ್ವಕಪ್ ಟ್ರೋಫಿ ಗೆದ್ದಿರುವ ಭಾರತ ತಂಡ, ವರ್ಷದ ಅಂತರದಲ್ಲಿ ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
"ಟೀಮ್ ಇಂಡಿಯಾ ಟಿ20 ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಲ್ಲದೆ 2023ರ 50 ಓವರ್‌ಗಳ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಆಟಗಾರರು ಯಾವ ರೀತಿ ಪ್ರದರ್ಶನ ನೀಡುತ್ತಾರೋ ಎಂಬುದರ ಮೇಲೆ ಅವಲಂಬಿತವಾಗಿದೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಸಾಕಷ್ಟು ಬಲಿಷ್ಠವಾಗಿದೆ," ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
Champions Trophy: ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅನುಮಾನ!
ಪ್ರತಿ ತಂಡವೂ ಬಲಿಷ್ಠವಾಗಿದೆ
"ಚಾಂಪಿಯನ್ಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿ ತಂಡವೂ ಬಲಿಷ್ಠವಾಗಿದೆ. ಆದ್ದರಿಂದ ಟ್ರೋಫಿ ಗೆಲ್ಲುವ ತಂಡ ಹೆಸರಿಸುವುದು ಕಠಿಣವಾಗಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಅಲ್ಲದೆ ಕೆಲವು ತಂಡಗಳು ಬಲಿಷ್ಠವಾಗಿದೆ. ಆತಿಥೇಯ ಪಾಕಿಸ್ತಾನ ತಂಡವೂ ಅಲ್ಲಿದೆ. ಚಾಂಪಿಯನ್ಸ್ ಟ್ರೋಫಿ ಉಪಖಂಡದಲ್ಲಿ ನಡೆಯುತ್ತಿದ್ದು, ಯಾವ ತಂಡವು ಅಂದಿನ ದಿನ ಉತ್ತಮ ಪ್ರದರ್ಶನ ತೋರುತ್ತದೋ ಆ ತಂಡ ಟ್ರೋಫಿ ಜಯಿಸುತ್ತದೆ," ಎಂದು ಗಂಗೂಲಿ ಹೇಳಿದ್ದಾರೆ.
ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭಗೊಳ್ಳಲಿದ್ದು, ಫೆ.23 ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.