ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SRH vs KKR: ಹೈದರಾಬಾದ್‌ನಲ್ಲಿ ಮುಳುಗಿದ 'ಸನ್‌'; ಕೆಕೆಆರ್‌ಗೆ ಹ್ಯಾಟ್ರಿಕ್‌ ಗೆಲುವು

Sunrisers Hyderabad vs Kolkata Knight Riders: ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡಿದ ಕನ್ನಡಿಗ ಮನೀಷ್ ಪಾಂಡೆ ಇದುವರೆಗಿನ ಐಪಿಎಲ್‌ ಋತುಗಳಲ್ಲಿ ಕನಿಷ್ಠ ಒಂದು ಪಂದ್ಯವಾಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಮೊದಲಿಗರು.

ಬಲಿಷ್ಠ ಸನ್‌ರೈಸರ್ಸ್‌ಗೆ‌ 7 ವಿಕೆಟ್‌ ಅಂತರದ ಸೋಲುಣಿಸಿದ ಕೆಕೆಆರ್

Kolkata Knight Riders -

Abhilash BC
Abhilash BC May 3, 2026 7:07 PM

ಹೈದರಾಬಾದ್‌, ಮೇ 3: ಆರಂಭಿಕ ಹಂತದಲ್ಲಿ ಸತತ 6 ಸೋಲು ಕಂಡಿದ್ದ ಕೋಲ್ಕತಾ ನೈಟ್‌ ರೈಡರ್ಸ್‌(SRH vs KKR) ತಂಡ ಇದೀಗ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಭಾನುವಾರ ನಡೆದ ಐಪಿಎಲ್‌(IPL 2026)ನ ಡಬಲ್‌ ಹೆಡರ್‌ನ ಮೊದಲ ಪಂದ್ಯದಲ್ಲಿ ಬಲಿಷ್ಠ ಸನ್‌ರೈಸರ್ಸ್‌ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಜತೆಗೆ ಪ್ಲೇ-ಆಫ್‌ ರೇಸ್‌ನಲ್ಲಿ ತನ್ನ ಹೋರಾಟವನ್ನು ಜಾರಿಯಲ್ಲಿರಿಸಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್‌ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಬ್ಯಾಟರ್‌ಗಳು ವಿಫಲರಾದರು. 19 ಓವರ್‌ಗಳಲ್ಲಿ 165 ರನ್‌ಗೆ ಸರ್ವಪತನ ಕಂಡಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 18.2 ಓವರ್‌ಗಳಲ್ಲಿ 3 ವಿಕೆಟ್‌ಗೆ 169 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್‌ ವೇಳೆ ಕೆಕೆಆರ್‌ಗೆ ನಾಯಕ ಅಜಿಂಕ್ಯ ರಹಾನೆ ಮತ್ತು ಫಿನ್‌ ಅಲೆನ್‌ ಉತ್ತಮ ಆರಂಭ ಒದಗಿಸಿದರು. ಅಲೆನ್‌ 13 ಎಸೆತಗಳಲ್ಲಿ 29 ರನ್‌ ಬಾರಿಸಿದರು. ಎರಡನೇ ವಿಕೆಟ್‌ಗೆ ಆಡಲಿಳಿದ ಯುವ ಬ್ಯಾಟರ್‌ ಅಂಗ್‌ಕ್ರಿಶ್ ರಘುವಂಶಿ ಎಂದಿನಂತೆ ಬಿರುಸಿನ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಬಾರಿಸಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ರಹಾನೆ 43(4 ಬೌಂಡರಿ, 1 ಸಿಕ್ಸರ್‌) ರನ್‌ ಗಳಿಸಿದರು. ಈ ವೇಳೆ ರಹಾನೆ ಆರಂಭಿಕನಾಗಿ ಟಿ20 ಕ್ರಿಕೆಟ್‌ನಲ್ಲಿ 6 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆಗೈದರು. ಗೆಲುವಿಗೆ 15 ರನ್‌ ಬೇಕಿದ್ದಾಗ ಸಿಕ್ಸರ್‌ ಬಾರಿಸುವ ಪ್ರಯತ್ನದಲ್ಲಿ ರಘುವಂಶಿ ಲಾಂಗ್‌ ಆನ್‌ನಲ್ಲಿ ಇಶಾನ್‌ ಮಾಲಿಂಗಗೆ ಕ್ಯಾಚಿತ್ತರು. 2 ಸಿಕ್ಸರ್‌ ಮತ್ತು 5 ಬೌಂಡರಿ ನೆರವಿನಿಂದ 59 ರನ್‌ ಬಾರಿಸಿದರು. ಅಂತಿಮವಾಗಿ ರಿಂಕು(22) ಮತ್ತು ಕ್ಯಾಮೆರಾನ್ ಗ್ರೀನ್(3) ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಹಠಾತ್‌ ಕುಸಿತ ಕಂಡ ಹೈದರಾಬಾದ್‌

ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ ತಂಡ ಉತ್ತಮ ಆರಂಭ ಪಡೆಯಿತು. ಅಭಿಷೇಕ್‌ ಮತ್ತು ಟ್ರಾವಿಸ್‌ ಹೆಡ್‌ ಮೊದಲ ವಿಕೆಟ್‌ಗೆ 44 ರನ್‌ ಒಟ್ಟುಗೂಡಿಸಿದರೆ, ಆ ಬಳಿಕ ಬಂದ ಇಶಾನ್‌ ಕಿಶನ್‌ ಕೂಡ ಹೆಡ್‌ ಜತೆಗೂಡಿ 2ನೇ ವಿಕೆಟ್‌ಗೆ 61 ರನ್‌ ಕಲೆಹಾಕಿದರು. ಆದರೆ ಆ ಬಳಿಕ ತಂಡ ಹಠಾತ್‌ ಕುಸಿತ ಕಂಡಿತು. ಯಾವುದೇ ಹಂತದಲ್ಲಿಯೂ ಚೇತರಿಕೆ ಕಾಣಲಿಲ್ಲ. ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಹೆಡ್‌, ಒಟ್ಟಾರೆ 61 ರನ್‌ ಗಳಿಸಿದರು. ಇಶಾನ್ ಕಿಶನ್ 41 ರನ್‌ ಬಾರಿಸಿದರು. ಅಪಾಯಕಾರಿ ಕ್ಲಾಸೆನ್‌(11) ಅವರು ರೋವ್ಮನ್ ಪೊವೆಲ್ ಹಿಡಿದ ಒನ್‌ ಹ್ಯಾಂಡೆಡ್‌ ಕ್ಯಾಚ್‌ಗೆ ವಿಕೆಟ್‌ ಕಳೆದುಕೊಂಡರು.

SRH vs KKR: ಚಿರತೆ ವೇಗ, ರೋವ್ಮನ್ ಪೊವೆಲ್ ಒನ್‌ ಹ್ಯಾಂಡೆಡ್‌ ಕ್ಯಾಚ್‌ಗೆ ನೆಟ್ಟಿಗರು ಫಿದಾ

ಕಳೆದ ಪಂದ್ಯಗಳಲ್ಲಿ ಸತತ ಬೌಲಿಂಗ್‌ ವೈಫಲ್ಯ ಕಂಡಿದ್ದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಈ ಪಂದ್ಯದಲ್ಲಿ ತಮ್ಮ ಕೈಚಳಕ ತೋರುವ ಮೂಲಕ ಪ್ರಮುಖ 3 ವಿಕೆಟ್‌ ಕಿತ್ತರು. 2 ವಿಕೆಟ್‌ ಕಿತ್ತ ಸುನಿಲ್‌ ನರೈನ್‌ ಐಪಿಎಲ್‌ನಲ್ಲಿ 200 ವಿಕೆಟ್‌ ಪೂರ್ತಿಗೊಳಿಸಿದ ಸಾಧನೆಗೈದರು. ಕಾರ್ತಿಕ್‌ ತ್ಯಾಗಿ 2 ವಿಕೆಟ್‌ ಪಡೆದರು. ಆಲ್‌ರೌಂಡರ್ ನಿತೀಶ್ ಕುಮಾರ್ ಅನಾರೋಗ್ಯದ ಕಾರಣ ಈ ಪಂದ್ಯದಿಂದ ವಿಶ್ರಾಂತಿ ಪಡೆದರು. ಅವರ ಬದಲು ಹರ್ಷಲ್ ಪಟೇಲ್ ಅವಕಾಶ ಪಡೆದರು.



ಎಲೈಟ್‌ ಪಟ್ಟಿ ಸೇರಿದ ಪಾಂಡೆ

ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡಿದ ಕನ್ನಡಿಗ ಮನೀಷ್ ಪಾಂಡೆ ಇದುವರೆಗಿನ ಐಪಿಎಲ್‌ ಋತುಗಳಲ್ಲಿ ಕನಿಷ್ಠ ಒಂದು ಪಂದ್ಯವಾಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಮೊದಲಿಗರು.

ಸಂಕ್ಷಿಪ್ತ ಸ್ಕೋರ್‌: ಸನ್‌ರೈಸರ್ಸ್‌-165ಕ್ಕೆ ಆಲೌಟ್(‌ ಟ್ರಾವಿಸ್‌ ಹೆಡ್‌ 61, ಇಶಾನ್‌ ಕಿಶನ್‌ 42, ವರುಣ್‌ ಚಕ್ರವರ್ತಿ 36ಕ್ಕೆ 3, ಸುನೀಲ್‌ ನರೈನ್‌ 31ಕ್ಕೆ 2, ಕಾರ್ತಿಕ್‌ ತ್ಯಾಗಿ 30ಕ್ಕೆ 2). ಕೆಕೆಆರ್‌-18.2 ಓವರ್‌ಗಳಲ್ಲಿ 3 ವಿಕೆಟ್‌ಗೆ 169(ಅಂಗ್‌ಕ್ರಿಶ್ ರಘುವಂಶಿ 59, ಅಜಿಂಕ್ಯ ರಹಾನೆ 43, ಫಿನ್‌ ಅಲೆನ್‌ 29, ರಿಂಕು ಸಿಂಗ್‌ ಔಟಾಗದೆ 22, ಸಕೀಬ್ ಹುಸೇನ್ 17 ಕ್ಕೆ 1).