IPL 2025: ನಾಳೆಯಿಂದ ಐಪಿಎಲ್ ಸಮರ ಆರಂಭ; ಈ ಸಲವಾದರೂ ಕಪ್ ನಮ್ಮದಾಗುತ್ತಾ?
ಬಹುತೇಕ ಎಂ.ಎಸ್ ಧೋನಿಗೆ ಇದು ವಿದಾಯದ ಕೂಟ ಎಂದೇ ಹೇಳಲಾಗಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಅವರು ಚೆನ್ನೈಗೆ ಆಗಮಿಸುವ ವೇಳೆ ಡಿ ಕೋಡ್ ಇರುವಂತಹ ಟಿ-ಶರ್ಟ್ ಒಂದನ್ನು ಧರಿಸಿ ಬಂದಿದ್ದರು. ಇದರಲ್ಲಿ 'ಒಂದು ಕೊನೆಯ ಅವಕಾಶ' ಎಂದು ಬರೆದಿತ್ತು. ಹೀಗಾಗಿ ಅವರು ಅಭಿಮಾನಿಗಳಿಗೆ ನಿವೃತ್ತಿಯ ಸುಳಿವನ್ನು ಮೊದಲೇ ನೀಡಿದಂತಿದೆ


ಕೋಲ್ಕತಾ: ನಾಳೆಯಿಂದ(ಶನಿವಾರ) ದೇಶಾದ್ಯಂತ ಐಪಿಎಲ್ 18ನೇ(IPL 2025) ಆವೃತ್ತಿಯ ಕ್ರಿಕೆಟ್ ಜ್ವರ ಕಾವೇರಲಿದೆ. ಜತೆಗೆ ವಾಣಿಜ್ಯ ಚಟುವಟಿಕೆಗಳೂ ಗರಿಗೆದರಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವಕಪ್‌ಗಿರುವಷ್ಟೇ ಪ್ರಾಮುಖ್ಯತೆ, ಲೀಗ್ ಮಾದರಿಯಲ್ಲಿ ಐಪಿಎಲ್‌ಗಿದೆ. ಹಣದ ಹೊಳೆಯನ್ನೇ ಹರಿಸುವ, ರೋಮಾಂಚಕತೆ, ತೀವ್ರ ಕೌತುಕತೆಗಳಿಗೆಲ್ಲ ಸಾಕ್ಷಿಯಾಗುವ ಐಪಿಎಲ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಶನಿವಾರ ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ(KKR vs RCB) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಬಾರಿಯೂ ಹಲವು ಹೊಸತನದೊಂದಿಗೆ ಐಪಿಎಲ್ ಪಂದ್ಯಾವಳಿ ಸಾಗಲಿದೆ.
74 ಪಂದ್ಯಗಳು
ಈ ಬಾರಿ 10 ತಂಡಗಳು ಪಾಲ್ಗೊಳ್ಳಲಿದ್ದು, 65 ದಿನಗಳ ಕಾಲ ಒಟ್ಟು 74 ಪಂದ್ಯಗಳು ನಡೆಯಲಿವೆ. ಮೇ 25ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಉದ್ಘಾಟನಾ ಪಂದ್ಯ ಹಾಗೂ ಫೈನಲ್‌ಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ದಿನ ಡಬಲ್ ಹೆಡರ್(ದಿನಕ್ಕೆ 2 ಪಂದ್ಯ) ಇರಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.
ಟೂರ್ನಿ ಮಾದರಿ ಹೇಗೆ?
ಟೂರ್ನಿಯಲ್ಲಿ 10 ತಂಡಗಳಿದ್ದು, ಪ್ರತಿ ತಂಡ ತಲಾ 14 ಪಂದ್ಯಗಳನ್ನಾಡಲಿವೆ. ನಿರ್ದಿಷ್ಟ 5 ತಂಡಗಳ ವಿರುದ್ಧ ತಲಾ 2 ಹಾಗೂ ಇತರ 4 ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈರ್-1 ಪ್ರವೇಶಿಸಲಿದ್ದು, 3 ಮತ್ತು 4ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಆಡಲಿವೆ. ಬಳಿಕ ಕ್ವಾಲಿಫೈರ್-1ರಲ್ಲಿ ಸೋತ ತಂಡ, ಎಲಿಮಿನೇಟರ್ ಗೆದ್ದ ತಂಡ ಕ್ವಾಲಿಫೈರ್-2 ಪ್ರವೇಶಿಲಿವೆ.
13 ಕ್ರೀಡಾಂಗಣ ಆತಿಥ್ಯ
ಈ ಬಾರಿ ಟೂರ್ನಿಗೆ ಒಟ್ಟು 13 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಎಲ್ಲಾ ತಂಡಗಳ ತವರು ಮೈದಾನದ ಜತೆಗೆ ಧರ್ಮಶಾಲಾ(3 ಪಂದ್ಯ), ಗುವಾಹಟಿ(2) ಹಾಗೂ ವಿಶಾಖಪಟ್ಟಣಂ(2)ನಲ್ಲೂ ಕೆಲ ಪಂದ್ಯಗಳು ಆಯೋಜನೆಗೊಳ್ಳಲಿವೆ. ಆರ್‌ಸಿಬಿ ತನ್ನ ತವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 7 ಪಂದ್ಯಗಳನ್ನಾಡಲಿವೆ.
ಇದನ್ನೂ ಓದಿ IPL 2025 ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡ ಹ್ಯಾರಿ ಬ್ರೂಕ್ ವಿರುದ್ದ ಮೈಕಲ್ ಕ್ಲಾರ್ಕ್ ಕಿಡಿ!
ಧೋನಿಗೆ ವಿದಾಯದ ಕೂಟ ಸಾಧ್ಯತೆ
ಬಹುತೇಕ ಎಂ.ಎಸ್ ಧೋನಿಗೆ ಇದು ವಿದಾಯದ ಕೂಟ ಎಂದೇ ಹೇಳಲಾಗಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಅವರು ಚೆನ್ನೈಗೆ ಆಗಮಿಸುವ ವೇಳೆ ಡಿ ಕೋಡ್ ಇರುವಂತಹ ಟಿ-ಶರ್ಟ್ ಒಂದನ್ನು ಧರಿಸಿ ಬಂದಿದ್ದರು. ಇದರಲ್ಲಿ 'ಒಂದು ಕೊನೆಯ ಅವಕಾಶ' ಎಂದು ಬರೆದಿತ್ತು. ಹೀಗಾಗಿ ಅವರು ಅಭಿಮಾನಿಗಳಿಗೆ ನಿವೃತ್ತಿಯ ಸುಳಿವನ್ನು ಮೊದಲೇ ನೀಡಿದಂತಿದೆ. ಮುಂಬರುವ ಜುಲೈಗೆ 43 ವರ್ಷ ಪೂರೈಸಲಿರುವ ಧೋನಿ, ಮುಂಬರುವ ಆವೃತ್ತಿಯಲ್ಲಿ ಚೆನ್ನೈ ತಂಡದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳಲಿದ್ದಾರೆ. ಸಿಎಸ್‌ಕೆ ತಂಡದೊಂದಿಗಿನ ಅವರ ಒಡನಾಟ ಮುಂದುವರಿಯಲಿದೆ ಎನ್ನಲಾಗಿದೆ. ಧೋನಿ ಜತೆೆಗೆ ಇಶಾಂತ್ ಶರ್ಮ, ಫಾಫ್ ಡು ಪ್ಲೆಸಿಸ್, ಮೊಯಿನ್ ಅಲಿ, ಕರ್ಣ್ ಶರ್ಮಗೂ ಕೊನೆ ಐಪಿಎಲ್ ಸಾಧ್ಯತೆಯಿದೆ.
ಹೊಸ ನಿಯಮಗಳೇನು?
- ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿಯ (ಡಿಆರ್ಎಸ್) ಬಳಕೆಯನ್ನು ಈ ಬಾರಿ ಎತ್ತರ ಮತ್ತು ಆಫ್‌ಸ್ಟಂಪ್ ಹೊರಗಿನ ವೈಡ್ ಎಸೆತಗಳಿಗೂ ಬಳಸಬಹುದು.
- ರಾತ್ರಿ ಪಂದ್ಯದ ವೇಳೆ ಇಬ್ಬನಿ ಕಾಟ ತಪ್ಪಿಸುವ ಸಲುವಾಗಿ ಪಂದ್ಯಗಳ 2ನೇ ಇನಿಂಗ್ಸ್ ವೇಳೆ 11ನೇ ಓವರ್ ನಂತರ 2ನೇ ಹೊಸ ಚೆಂಡು ಬಳಸುವ ಅವಕಾಶ. 2ನೇ ಹೊಸ ಚೆಂಡಿನ ಬಳಕೆಯ ಬಗ್ಗೆ ಮೈದಾನದ ಅಂಪೈರ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. 2ನೇ ಹೊಸಚೆಂಡು ಬಳಕೆ ಕಡ್ಡಾಯವಲ್ಲ. ಇಬ್ಬನಿಯಿಂದ ಚೆಂಡಿನ ಸ್ಥಿತಿ ತೀರಾ ಹದಗೆಟ್ಟಾಗ ಮಾತ್ರ 2ನೇ ಹೊಸಚೆಂಡು ಬಳಕೆಯಾಗಲಿದೆ.
- 3 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದರೆ ನಾಯಕರಿಗೆ ಒಂದು ಪಂದ್ಯದ ನಿಷೇದವನ್ನು ಈ ಬಾರಿ ಕೈ ಬಿಡಲಾಗಿದೆ. ನಿಷೇದದ ಬದಲಾಗಿ ನಾಯಕರಿಗೆ ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ಈ ಡಿಮೆರಿಟ್ ಅಂಕಗಳು 3 ವರ್ಷಗಳ ಕಾಲ ಇರುತ್ತವೆ. ಸತತವಾಗಿ ಇಂಥ ತಪುಗಳು ಪುನರಾವರ್ತನೆಯಾದಾಗ ಮಾತ್ರ ನಿಷೇಧ ಹೇರಲಾಗುತ್ತದೆ.
- ನಿಧಾನಗತಿ ಓವರ್ಗಾಗಿ ಪಂದ್ಯ ಸಂಭಾವನೆಯ ಶೇ. 25ರಿಂದ 75ರಷ್ಟು ದಂಡ ವಿಧಿಸುವುದನ್ನು ಈ ಸಲವೂ ಮುಂದುವರಿಸಲಾಗುತ್ತದೆ. ಡಿಮೆರಿಟ್ ಅಂಕ 4ಕ್ಕೇರಿದಾಗ ಮ್ಯಾಚ್ ರೆಫ್ರಿ ಶೇ. 100 ದಂಡ ವಿಧಿಸಬಹುದಾಗಿರುತ್ತದೆ.