ಮಿಥುನ್ ಮನ್ಹಾಸ್ ಯಾರು?; ಕೊಹ್ಲಿಯ ಮೊದಲ ನಾಯಕ ಬಿಸಿಸಿಐ ಉನ್ನತ ಹುದ್ದೆಗೆ ಆಯ್ಕೆ!
Who is Mithun Manhas?: ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ, ಮನ್ಹಾಸ್ ಕೋಚಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 2017 ರಲ್ಲಿ ಪಂಜಾಬ್ ಕಿಂಗ್ಸ್‌ನ ಸಹಾಯಕ ಕೋಚ್ ಆಗಿ, ಆ ಬಳಿಕ ಬಾಂಗ್ಲಾದೇಶ U-19 ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿಯೂ ಎರಡು ವರ್ಷಗಳ ಕಾಲ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು.

-

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹೊಸ ಅಧ್ಯಕ್ಷರಾಗಲು ಮತ್ತು ರೋಜರ್ ಬಿನ್ನಿ ಅವರ ಸ್ಥಾನವನ್ನು ತುಂಬಲು ಮಿಥುನ್ ಮನ್ಹಾಸ್(Mithun Manhas) ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಭಾರತೀಯ ಕ್ರಿಕೆಟ್‌ನ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರ ನಡುವೆ ಶನಿವಾರ ನಡೆದ ಸಭೆಯ ನಂತರ ಮನ್ಹಾಸ್ ಈ ಹುದ್ದೆಗೆ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ, ಮನ್ಹಾಸ್ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಮಿಥುನ್ ಮನ್ಹಾಸ್(Who is Mithun Manhas) ಯಾರು?, ಅವರ ಹಿನ್ನಲೆ ಏನು? ಹೀಗೆ ಹಲವು ಸಂಗತಿಗಳ ವಿವರ ಇಲ್ಲಿದೆ.
ಮಿಥುನ್ ಮನ್ಹಾಸ್ ಯಾರು?
ಅಕ್ಟೋಬರ್ 12, 1979 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಮನ್ಹಾಸ್, ರಾಷ್ಟ್ರೀಯ ತಂಡಕ್ಕಾಗಿ ಒಂದೇ ಒಂದು ಪಂದ್ಯವನ್ನು ಆಡದಿದ್ದರೂ, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ದಿಗ್ಗಜ ಎಂದು ಹೆಸರುವಾಸಿಯಾಗಿದ್ದರು. ಅವರು ಬಲಗೈ ಬ್ಯಾಟಿಂಗ್, ಆಫ್-ಸ್ಪಿನ್ ಬೌಲಿಂಗ್ ಮತ್ತು ಅಗತ್ಯವಿದ್ದಾಗ ವಿಕೆಟ್ ಕೀಪಿಂಗ್ ಮಾಡುವ ಉಪಯುಕ್ತ ಆಟಗಾರ ಎಂದು ಹೆಸರುವಾಸಿಯಾಗಿದ್ದರು.
ಕೊಹ್ಲಿಯ ಮೊದಲ ನಾಯಕ
ದೆಹಲಿ ತಂಡದ ನಾಯಕರಾಗಿದ್ದ ಮನ್ಹಾಸ್ ಅವಧಿಯಲ್ಲೇ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು. ಮತ್ತು ಅಂದಿನಿಂದ ಇಂದಿನ ವರೆಗೂ ಕೊಹ್ಲಿ ಮನ್ಹಾಸ್ ಜತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಕೊಹ್ಲಿಯನ್ನು ಚೀಕೂ ಎನ್ನುವ ಅಡ್ಡ ಹೆಸರಿನ ಬದಲು ಅಪ್ಪು ಎಂದು ಕರೆಯುತ್ತಿದ್ದರು.
18 ವರ್ಷಗಳ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ, ಮನ್ಹಾಸ್ ಒಟ್ಟು 157 ಪಂದ್ಯಗಳನ್ನು ಆಡಿದ್ದಾರೆ. ಮತ್ತು 46 ಕ್ಕಿಂತ ಕಡಿಮೆ ಸರಾಸರಿಯಲ್ಲಿ 9,714 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರು 27 ಶತಕಗಳು ಮತ್ತು 49 ಅರ್ಧಶತಕಗಳನ್ನು ಗಳಿಸಿದ್ದಾರೆ. 2007-08ರಲ್ಲಿ ದೆಹಲಿ ತಂಡವನ್ನು ರಣಜಿ ಟ್ರೋಫಿ ಪ್ರಶಸ್ತಿಗೆ ಮುನ್ನಡೆಸಿದಾಗ ಮತ್ತು ಅವರ ತಂಡಕ್ಕೆ ದೀರ್ಘ ಚಾಂಪಿಯನ್‌ಶಿಪ್ ಬರಗಾಲವನ್ನು ಕೊನೆಗೊಳಿಸಿದಾಗ ಮನ್ಹಾಸ್ ಅವರ ಅತ್ಯುತ್ತಮ ಋತುವಾಗಿತ್ತು. ಆ ಋತುವಿನಲ್ಲಿ, ಮಾಜಿ ಕ್ರಿಕೆಟಿಗ 57.56 ಸರಾಸರಿಯಲ್ಲಿ 921 ರನ್ ಗಳಿಸಿದ್ದರು.
ಐಪಿಎಲ್‌ನಲ್ಲೂ ಆಡಿದ್ದ ಮನ್ಹಾಸ್
ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ, ಮನ್ಹಾಸ್ ತಮ್ಮ ವೃತ್ತಿಜೀವನದಲ್ಲಿ ಐಪಿಎಲ್‌ನಲ್ಲಿ ಮೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರು ತಮ್ಮ ಐಪಿಎಲ್ ವೃತ್ತಿಜೀವನವನ್ನು ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ಪ್ರಾರಂಭಿಸಿದರು. ಮತ್ತು 2008 ರಿಂದ 2010 ರವರೆಗೆ ಫ್ರಾಂಚೈಸಿಯ ಭಾಗವಾಗಿದ್ದರು. ನಂತರ ಅವರು ಪುಣೆ ವಾರಿಯರ್ಸ್‌ಗೆ ತೆರಳಿ 2011 ರಿಂದ 2013 ರವರೆಗೆ ತಂಡದ ಪರ ಆಡಿದ್ದರು. 2014 ರಲ್ಲಿ, ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ ನಿವೃತ್ತಿಯಾಗಿದ್ದರು.
ಇದನ್ನೂ ಓದಿ BCCI elections: ಚೆನ್ನೈ ಸೂಪರ್‌ಕಿಂಗ್ಸ್ ಮಾಜಿ ಆಟಗಾರನಿಗೆ ಒಲಿಯಲಿದೆ ಬಿಸಿಸಿಐ ಅಧ್ಯಕ್ಷ ಸ್ಥಾನ?
ಕೋಚಿಂಗ್‌ಗೂ ಸೈ
ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ, ಮನ್ಹಾಸ್ ಕೋಚಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 2017 ರಲ್ಲಿ ಪಂಜಾಬ್ ಕಿಂಗ್ಸ್‌ನ ಸಹಾಯಕ ಕೋಚ್ ಆಗಿ, ಆ ಬಳಿಕ ಬಾಂಗ್ಲಾದೇಶ U-19 ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿಯೂ ಎರಡು ವರ್ಷಗಳ ಕಾಲ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಮಾತ್ರವಲ್ಲದೆ ಆರ್‌ಸಿಬಿಯ ಸಹಾಯಕ ಬ್ಯಾಟಿಂಗ್ ಕೋಚ್ ಕೂಡ ಆಗಿದ್ದರು. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ (ಜೆಕೆಸಿಎ) ನೊಂದಿಗೆ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಕೆಲಸ ಮಾಡಿರುವುದರಿಂದ ಮನ್ಹಾಸ್ ಕ್ರಿಕೆಟ್ ಆಡಳಿತದಲ್ಲಿ ಅನುಭವ ಹೊಂದಿದ್ದಾರೆ.