ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Women's Team India: ವಿಶ್ವಕಪ್‌ ವಿನ್ನರ್‌ ಮಹಿಳಾ ತಂಡಕ್ಕೆ ರಾಷ್ಟ್ರಪತಿ ಪ್ರಶಂಸೆ; ದ್ರೌಪದಿ ಮುರ್ಮುಗೆ ಜೆರ್ಸಿ ಉಡುಗೊರೆ

ಮಹಿಳಾ ವಿಶ್ವಕಪ್​ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಮಹಾರಾಷ್ಟ್ರದ 8 ಮಂದಿಯನ್ನು ಮುಖ್ಯಮಂತ್ರಿ ದೇವೇಂದ್ರ ಡ್ನಾವಿಸ್​ ನವೆಂಬರ್​ 7ರಂದು ಮುಂಬೈನಲ್ಲಿ ಸನ್ಮಾನಿಸಲಿದ್ದಾರೆ. ಉಪನಾಯಕಿ ಸ್ಮೃತಿ ಮಂದನಾ, ಜೆಮೀಮಾ ರೋಡ್ರಿಗಸ್​ ಮತ್ತು ಸ್ಪಿನ್ನರ್​ ರಾಧಾ ಯಾದವ್​ ತಂಡದಲ್ಲಿದ್ದ ಮೂವರು ಮಹಾರಾಷ್ಟ್ರ ಆಟಗಾರ್ತಿಯರಾಗಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಜೆರ್ಸಿ ಉಡುಗೊರೆ ನೀಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌

ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್(Women's World Cup)​ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ಚಾಂಪಿಯನ್​ ಪಟ್ಟಕ್ಕೇರಿದ ಭಾರತ ತಂಡದ(Women's Team India) ಆಟಗಾರ್ತಿಯರು ಗುರುವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu) ಅವರನ್ನು ಭೇಟಿಯಾದರು. ಈ ವೇಳೆ ಎಲ್ಲ ಆಟಗಾರ್ತಿಯರ ಸಹಿಯನ್ನು ಒಳಗೊಂಡ ತಂಡದ ನೀಲಿ ಜೆರ್ಸಿಯನ್ನೂ ಮುರ್ಮು ಅವರಿಗೆ ಉಡುಗೊರೆ ನೀಡಲಾಯಿತು.

ರಾಷ್ಟ್ರಪತಿ ಅವರ ಜತೆಗೆ ಎಲ್ಲ 16 ಆಟಗಾರ್ತಿಯರು ಮತ್ತು ಮುಖ್ಯ ಕೋಚ್​ ಅಮೋಲ್​ ಮುಜುಮ್ದಾರ್​, ಬಿಸಿಸಿಐ ಅಧ್ಯಕ್ಷ ಮಿಥುನ್​ ಮನ್ಹಾಸ್​ ಟ್ರೋಫಿಯೊಂದಿಗೆ ಪೋಸ್​ ನೀಡಿದರು. ಮುರ್ಮು ತಂಡದ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದರು ಮತ್ತು ಯುವಜನರನ್ನು ಪ್ರೇರೇಪಿಸುವಲ್ಲಿ ಅವರ ಪಾತ್ರವನ್ನು ಎತ್ತಿ ತೋರಿಸಿದರು. ಬುಧವಾರ ಪ್ರಧಾನಿ ನರೇಂದ್ರ ಮೊದಿ ಅವರನ್ನು ಲೋಕಕಲ್ಯಾಣ ಮಾರ್ಗದ ಅಧಿಕೃತ ನಿವಾಸದಲ್ಲಿ ಮಹಿಳಾ ತಂಡ ಭೇಟಿ ಮಾಡಿತ್ತು.



"ಮಹಿಳಾ ತಂಡ ಇತಿಹಾಸ ಸೃಷ್ಟಿಸಿದ್ದಾರೆ ಮತ್ತು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಈ ತಂಡವು ಭಾರತವನ್ನು ಪ್ರತಿಬಿಂಬಿಸುತ್ತದೆ. ವಿಭಿನ್ನ ಪ್ರದೇಶಗಳು, ವಿಭಿನ್ನ ಸಾಮಾಜಿಕ ಹಿನ್ನೆಲೆಗಳು, ವಿಭಿನ್ನ ಸನ್ನಿವೇಶಗಳನ್ನು ಪ್ರತಿನಿಧಿಸುತ್ತಾರೆ ಆದರೆ ಅವರು ಒಂದೇ ತಂಡ ಭಾರತ" ಎಂದು ಮುರ್ಮು ಎಕ್ಸ್‌ನಲ್ಲಿ ಬರೆದಿದ್ದಾರೆ.

ಮಹಿಳಾ ವಿಶ್ವಕಪ್​ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಮಹಾರಾಷ್ಟ್ರದ 8 ಮಂದಿಯನ್ನು ಮುಖ್ಯಮಂತ್ರಿ ದೇವೇಂದ್ರ ಡ್ನಾವಿಸ್​ ನವೆಂಬರ್​ 7ರಂದು ಮುಂಬೈನಲ್ಲಿ ಸನ್ಮಾನಿಸಲಿದ್ದಾರೆ. ಉಪನಾಯಕಿ ಸ್ಮೃತಿ ಮಂದನಾ, ಜೆಮೀಮಾ ರೋಡ್ರಿಗಸ್​ ಮತ್ತು ಸ್ಪಿನ್ನರ್​ ರಾಧಾ ಯಾದವ್​ ತಂಡದಲ್ಲಿದ್ದ ಮೂವರು ಮಹಾರಾಷ್ಟ್ರ ಆಟಗಾರ್ತಿಯರಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ಈ ಮೂವರಿಗೆ ತಲಾ 2.25 ಕೋಟಿ ರೂ. ನೀಡಿ ಸನ್ಮಾನಿಸಲಿದೆ. ತಂಡದ ಕೋಚ್​ ಅಮೋಲ್​ ಮುಜುಮ್ದಾರ್​ ಕೂಡ ಮಹಾರಾಷ್ಟ್ರದವರಾಗಿದ್ದು, 22.5 ಲಕ್ಷ ರೂ. ಬಹುಮಾನ ಪಡೆಯಲಿದ್ದಾರೆ.

ಕಳೆದ ಭಾನುವಾರ ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ 52 ರನ್‌ ಭರ್ಜರಿ ಗೆಲುವು ಸಾಧಿಸಿತ್ತು. 3 ಬಾರಿ ಏಕದಿನ ವಿಶ್ವಕಪ್‌ ಫೈನಲ್‌ಗೇರಿದ್ದ ಭಾರತ ಚೊಚ್ಚಲ ಕಿರೀಟ ತನ್ನದಾಗಿಸಿಕೊಂಡರೆ, ದಕ್ಷಿಣ ಆಫ್ರಿಕಾದ ಚೊಚ್ಚಲ ಕಪ್‌ ಗೆಲ್ಲುವ ಕನಸು ಭಗ್ನಗೊಂಡಿತ್ತು.

ಇದನ್ನೂ ಓದಿ Women's World Cup final: ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ನೀತಾ ಅಂಬಾನಿ ಅಭಿನಂದನೆ

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ 7 ವಿಕೆಟ್‌ ನಷ್ಟದಲ್ಲಿ 298 ರನ್‌ ಕಲೆಹಾಕಿತು. ನಾಯಕಿ ಲಾರಾ ವೊಲ್ವಾರ್ಟ್‌ ಅಮೋಘ ಆಟದ ಹೊರತಾಗಿಯೂ ದ.ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತ್ತು.

ಭರ್ಜರಿ ಗಿಫ್ಟ್ ಘೋಷಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ವಿಶ್ವಕಪ್ ವಿಜೇತ ತಂಡಕ್ಕೆ ವಿಶೇಷ ಬಹುಮಾನವನ್ನು ಘೋಷಿಸಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಸಿಯೆರಾ ಕಾರನ್ನು ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ನೀಡಲಾಗುವುದು ಎಂದು ಟಾಟಾ ಮೋಟಾರ್ಸ್ ಗುರುವಾರ ಪ್ರಕಟನೆಯಲ್ಲಿ ತಿಳಿಸಿದೆ.

"ವಿಶ್ವ ವಿಜೇತ ಮಹಿಳಾ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಕಂಪನಿಯು ಸಿಯೆರಾದ ಉನ್ನತ ಮಾದರಿಯನ್ನು ಪ್ರಸ್ತುತಪಡಿಸಲಿದೆ, ಅವರ ಅದಮ್ಯ ಮನೋಭಾವವನ್ನು ಶ್ಲಾಘಿಸಲಿದೆ ಮತ್ತು ದೇಶಕ್ಕೆ ಕೀರ್ತಿ ತರುವಲ್ಲಿ ಅವರ ಅಪಾರ ಕೊಡುಗೆ ಮತ್ತು ತ್ಯಾಗವನ್ನು ಗುರುತಿಸಲಿದೆ" ಎಂದು ಟಾಟಾ ಮೋಟಾರ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.