Year Ender 2025: ಈ ವರ್ಷ ಭಾರತೀಯ ಕ್ರೀಡಾಲೋಕದಲ್ಲಿ ಏನೇನು ನಡೆಯಿತು? ಇಲ್ಲಿದೆ ವರದಿ
year ender 2025 sports: ಭಾರತದ ಯುವ ಚೆಸ್ ತಾರೆ ದಿವ್ಯಾ ದೇಶ್‌ಮುಖ್ 3ನೇ ಆವೃತ್ತಿಯ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡು ಚೆಸ್‌ನ ಅತ್ಯುನ್ನತ ಪಟ್ಟ ಎನಿಸಿಕೊಂಡಿರುವ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ ವರ್ಷವಿದು.
India team lifts World Cup trophy -
ಬೆಂಗಳೂರು, ಡಿ.8: 2025- ಭಾರತೀಯ ಕ್ರೀಡಾ ಲೋಕದಲ್ಲಿ(Year Ender 2025) ಅತ್ಯಂತ ಪ್ರಮುಖ ವರ್ಷ. ಈ ವರ್ಷದಲ್ಲಿ ಕ್ರೀಡಾ ವಿಭಾಗದಲ್ಲಿ ಹಲವರು ತಾರೆಯರು ಮಿಂಚಿದ್ದಾರೆ. ಮಹಿಳಾ ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಕ್ರಿಕೆಟ್, ಹಾಕಿ ಏಷ್ಯಾಕಪ್, ಅಂಧ ಮಹಿಳೆಯರ ವಿಶ್ವಕಪ್, ಖೋ-ಖೋ ವಿಶ್ವಕಪ್, ಚೆಸ್ ಹೀಗೆ ಹಲವು ಘಟನೆಗಳಿಗೆ ಸಾಕ್ಷಿಯಾಯಿತು 2025.
ಖೋ-ಖೋ ವಿಶ್ವಕಪ್
ಈ ವರ್ಷದ ಆರಂಭದಲ್ಲಿ (ಜನವರಿ) ನಡೆದ ಖೋ- ಖೋ ವಿಶ್ವಕಪ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಚಾಂಪಿಯನ್ಸ್ ಆಗಿ ಹೊರಹೊಮ್ಮಿದವು. ವನಿತೆಯರ ತಂಡ ನೇಪಾಳ ಮಹಿಳಾ ಖೋ- ಖೋ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದರೆ, ಪುರುಷರ ತಂಡವೂ ನೇಪಾಳ ತಂಡದ ವಿರುದ್ಧ ಗೆದ್ದು ಟ್ರೋಫಿ ಜಯಿಸಿತ್ತು.
ಚಾಂಪಿಯನ್ಸ್ ಟ್ರೋಫಿ
ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ, ಟೂರ್ನಿಯಲ್ಲಿ ಒಂದು ಪಂದ್ಯವನ್ನು ಸೋಲದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತ್ತು.
ಐಪಿಎಲ್; ಆರ್‌ಸಿಬಿ ಚಾಂಪಿಯನ್ಸ್
ಈ ಸಲ ಕಪ್ ನಮ್ದೇ... ಕಳೆದ ಹದಿನೆಂಟು ವರ್ಷಗಳಿಂದ ಕೇಳಿ ಬರುತ್ತಿದ್ದ ಆರ್‌ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗು ಈ ವರ್ಷ ನನಸಾಗಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ ಅಂತರದ ಗೆಲುವು ಸಾಧಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಇದು ತಂಡದ ಕಪ್ ಗೆಲುವಿನ ಸಂತಸವನ್ನೇ ಮರೆಯುವಂತೆ ಮಾಡಿತು.
ಇದನ್ನೂ ಓದಿ Year Ender 2025: ಈ ವರ್ಷ ಚಲನಚಿತ್ರೋದ್ಯಮದ ಕೆಲವು ಭಾರೀ ದೊಡ್ಡ ವಿವಾದಗಳಿವು
ಪಾಕ್ ಮಣಿಸಿ ಏಷ್ಯಾಕಪ್ ಗೆದ್ದ ಭಾರತ
ಹಲವು ವಿವಾದಗಳಿಗೆ ಕಾರಣವಾದ ಪಾಕ್ ಆತಿಥ್ಯದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಬಗ್ಗುಬಡಿದು ಭಾರತ ಗೆಲುವು ಸಾಧಿಸಿತ್ತು. ಆದರೆ ಟ್ರೋಫಿ ಎತ್ತಿಹಿಡಿಯುವ ಭಾಗ್ಯ ಭಾರತಕ್ಕೆ ಲಭಿಸಲಿಲ್ಲ. ಭಾರತಕ್ಕೆ ಪಾಕಿಸ್ತಾನದ ಗೃಹ ಸಚಿವರೂ ಆದ ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಅನ್ಯಾಯವಾಯಿತು. ಭಾರತ ಕಷ್ಟಪಟ್ಟು ಒಲಿಸಿಕೊಂಡಿದ್ದ ಟ್ರೋಫಿಯನ್ನು ತಾನೇ ಕೊಡಬೇಕು, ಇನ್ಯಾರೂ ಮುಟ್ಟಬಾರದು ಎಂದು ಅವರು ಹಠ ಹಿಡಿದರು. ಭಾರತೀಯರು ಕಪ್ ಸ್ವೀಕರಿಸಲು ನಿರಾಕರಿಸಿದ ಬಳಿಕ ನಖ್ವಿ ಅವರು ಟ್ರೋಫಿಯನ್ನೇ ಹೊತ್ತೊಯ್ದ ಅಪರೂಪದ, ಉದ್ಧಟತನದಿಂದ ಕೂಡಿದ್ದ ಘಟನೆ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ವರೆಗೂ ಭಾರತಕ್ಕೆ ಟ್ರೋಫಿ ಸಿಕ್ಕಿಲ್ಲ.
ಹಾಕಿ ಏಷ್ಯಾಕಪ್-2025
ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ 2025ರ ಹಾಕಿ ಏಷ್ಯಾಕಪ್‌ನಲ್ಲಿ ಭಾರತ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡ ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳ ಅಂತರದಲ್ಲಿ ಮಣಿಸಿತು. ಈ ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್ ತಲುಪಿದ್ದ ಭಾರತ ನಾಲ್ಕನೇ ಬಾರಿಗೆ ಏಷ್ಯಾಕಪ್ ಗೆದ್ದುಕೊಂಡಿತು. ಈ ಮೂಲಕ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಆತಿಥ್ಯದಲ್ಲಿ ನಡೆಯಲಿರುವ 2026ರ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ನ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿತು.
ಇದನ್ನೂ ಓದಿ Year Ender 2025: ಈ ವರ್ಷದಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದ ಹೊಸಬರು
ಚೊಚ್ಚಲ ವಿಶ್ವಕಪ್ ಗೆದ್ದ ಮಹಿಳಾ ತಂಡ
ಭಾರತ ಮಹಿಳೆಯರ ಐದು ದಶಕಗಳ ತಪಸ್ಸು, ಕೋಟ್ಯಂತರ ಅಭಿಮಾನಿಗಳ ಹಾರೈಕೆಗೆ ಈ ವರ್ಷ ಫಲ ಸಿಕ್ಕಿತು. ಮಹಿಳಾ ಟೀಂ ಇಂಡಿಯಾ ತನ್ನ ಐಸಿಸಿ ಟ್ರೋಫಿ ಬರ ನೀಗಿಸಿತ್ತು. 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ನವಿ ಮುಂಬೈನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ 52 ರನ್ ಭರ್ಜರಿ ಗೆಲುವು ಸಾಧಿಸಿ ಬರೋಬ್ಬರಿ 47 ವರ್ಷಗಳ ಬಳಿಕ ತನ್ನ ಚೊಚ್ಚಲ ಕಿರೀಟ ಗೆದ್ದುಕೊಂಡಿತ್ತು.
ಕೊಹ್ಲಿ-ರೋಹಿತ್ ಟೆಸ್ಟ್ ನಿವೃತ್ತಿ
ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದದ್ದೂ ಇದೇ ವರ್ಷ. ಸದ್ಯ 38 ವರ್ಷದ ರೋಹಿತ್, 36 ವರ್ಷದ ಕೊಹ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಏಕದಿನ ಮಾದರಿಯಲ್ಲಿ ಮುಂದುವರಿಯುತ್ತಿದ್ದಾರೆ.
ಅಂಧ ಮಹಿಳೆಯರ ವಿಶ್ವಕಪ್
ಕೊಲಂಬೊದಲ್ಲಿ ನಡೆದ ಚೊಚ್ಚಲ ಅಂಧರ ಟಿ20 ವಿಶ್ವಕಪ್‌ನಲ್ಲಿ ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಫೈನಲ್‌ನಲ್ಲಿ ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು. ತಂಡದಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದರು. ತುಮಕೂರಿನ ದೀಪಿಕಾ ಟಿ.ಸಿ. (ನಾಯಕಿ), ಕಾವ್ಯ ಎನ್.ಆರ್, ಶಿವಮೊಗ್ಗದ ರಿಪ್ಪನ್‌ಪೇಟೆಯ ಕಾವ್ಯ ವಿ. ಅವರು ತಂಡದಲ್ಲಿದ್ದರು.
ಈ ವರ್ಷ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಿವು! ಯಾವುದು ನಂ 1?
ಫಿಡೆ ಮಹಿಳಾ ಚೆಸ್ ವಿಶ್ವಕಪ್ ಗೆದ್ದ 19 ವರ್ಷದ ದಿವ್ಯಾ
ಭಾರತದ ಯುವ ಚೆಸ್ ತಾರೆ ದಿವ್ಯಾ ದೇಶ್‌ಮುಖ್ 3ನೇ ಆವೃತ್ತಿಯ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡು ಚೆಸ್‌ನ ಅತ್ಯುನ್ನತ ಪಟ್ಟ ಎನಿಸಿಕೊಂಡಿರುವ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ ವರ್ಷವಿದು.19 ವರ್ಷದ ದಿವ್ಯಾ ಫೈನಲ್‌ನಲ್ಲಿ ತಮ್ಮ ದೇಶದ ಹಿರಿಯ ಆಟಗಾರ್ತಿ, 38 ವರ್ಷದ ಕೊನೆರು ಹಂಪಿ ಅವರನ್ನು ಟೈ ಬ್ರೇಕರ್‌ನಲ್ಲಿ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. ಇದರೊಂದಿಗೆ ದೇಶದ ಮೊದಲ ವಿಶ್ವಕಪ್ ವಿಜೇತೆ ಪಟ್ಟ ತಮ್ಮದಾಗಿಸಿಕೊಂಡರು. ಜತೆಗೆ 19 ವರ್ಷದ ದಿವ್ಯಾ ಮಹಿಳಾ ವಿಶ್ವಕಪ್ ಗೆದ್ದ ವಿಶ್ವದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡರು.