ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu tips: ಸಮೃದ್ಧಿ, ಸಂತೋಷವನ್ನು ಆಹ್ವಾನಿಸುತ್ತದೆ ಈ ಗಡಿಯಾರ

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ, ಸಂತೋಷ ಸದಾ ಕಾಲ ನೆಲೆಸಿರಬೇಕು ಎಂದು ಎಲ್ಲರೂ ಬಯಸುತ್ತೇವೆ. ಆದರೆ ಇದರಲ್ಲಿ ಏನಾದರೂ ಒಂದು ಅಡಚಣೆಗಳು ನಿರಂತರ ಎದುರಾಗುತ್ತಲೇ ಇರುತ್ತವೆ. ಇದಕ್ಕೆ ವಾಸ್ತು ದೋಷವೂ ಕಾರಣ ಎನ್ನುತ್ತಾರೆ ವಾಸ್ತು ತಜ್ಞರು. ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇರಿಸುವುದರಿಂದ ಸಕಾರಾತ್ಮಕ ಶಕ್ತಿಯನ್ನು ಮನೆಗೆ ಆಹ್ವಾನಿಸಿಕೊಳ್ಳಬಹುದಾಗಿದೆ. ಆದರೆ ಇವುಗಳನ್ನು ಸರಿಯಾದ ಸ್ಥಳದಲ್ಲಿ ಇರಿಸುವುದು ಎಷ್ಟು ಮುಖ್ಯವೋ ಅಷ್ಟೇ ನಿಯಮ ಬದ್ಧವಾಗಿ ಇರಿಸಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ಮನೆಯಲ್ಲಿ ಸಕಾರಾತ್ಮಕತೆಯನ್ನು ಆಹ್ವಾನಿಸುವುದರಲ್ಲಿ ಗಡಿಯಾರದ ಪಾತ್ರವೂ ಇದೆ. ಆದರೆ ಅದಕ್ಕೆ ನಿಯಮವಿದೆ. ಅದು ಏನು, ಹೇಗೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಬೆಂಗಳೂರು: ಮನೆಯಲ್ಲಿರುವ ಕೆಲವೊಂದು ವಸ್ತುಗಳು (Vastu tips) ಸಕಾರಾತ್ಮಕ ಶಕ್ತಿಗಳಿಗೆ ಅಹ್ವಾನ ಕೊಡುತ್ತದೆ. ಅಂತಹ ವಸ್ತುಗಳಲ್ಲಿ ಗಡಿಯಾರವೂ (Vastu about clock) ಸೇರಿದೆ. ಪ್ರತಿಯೊಂದು ಮನೆಯಲ್ಲೂ (vastu for home) ಗಡಿಯಾರ ಇದ್ದೇ ಇರುತ್ತದೆ. ಇದನ್ನು ನಾವು ಗಂಟೆ ನೋಡುವ ಸಲುವಾಗಿ ಅಥವಾ ಮನೆಯ ಅಲಂಕಾರಕ್ಕಾಗಿ ಇಟ್ಟುಕೊಂಡಿರುತ್ತೇವೆ. ಆದರೆ ಗಡಿಯಾರದ ವಿಚಾರದಲ್ಲಿ ನಾವು ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾಕೆಂದರೆ ಗಡಿಯಾರವನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೋ ಅದನ್ನು ಹಾಗೆಯೇ ಸರಿಯಾದ ದಿಕ್ಕಿನಲ್ಲಿ ಸರಿಯಾದ ರೀತಿಯಲ್ಲಿ ಇಡುವುದು ಕೂಡ ಮುಖ್ಯವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ಮನೆಗೆ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ಆಕರ್ಷಿಸುವಲ್ಲಿ ಗಡಿಯಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಲೋಲಕ ಗಡಿಯಾರ ಮನೆಗೆ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ಇದನ್ನೂ ಓದಿ: Vastu Tips: ಮನೆ ಸ್ವಚ್ಛಗೊಳಿಸುವಾಗ ಪಾಲಿಸಬೇಕು ಕೆಲವು ನಿಯಮ

ಗಡಿಯಾರವು ಪ್ರತಿ ಮನೆಯಲ್ಲೂ ಇರಲೇಬೇಕು. ಯಾಕೆಂದರೆ ಇದು ಸಮಯವನ್ನು ಮಾತ್ರ ನಿರ್ಧರಿಸುವುದಿಲ್ಲ. ಮನೆ ಮಂದಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಮನೆಯ ವಾಸ್ತು ದೋಷಗಳನ್ನು ನಿವಾರಣೆ ಮಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

ಗಡಿಯಾರವು ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಮತೋಲನವನ್ನು ತರುತ್ತದೆ. ಅದರಲ್ಲೂ ವಿಶೇಷವಾಗಿ ಲೋಲಕವಿರುವ ಗೋಡೆಯಾರವು ಮನೆಯ ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಮನೆಯಲ್ಲಿ ಇರಿಸುವುದು ಅತ್ಯಂತ ಶುಭ ಎಂದೇ ವಾಸ್ತು ಶಾಸ್ತ್ರದಲ್ಲೂ ಪರಿಗಣಿಸಲಾಗಿದೆ.

ಲೋಲಕವಿರುವ ಗೋಡೆ ಗಡಿಯಾರವನ್ನು ಮನೆಯಲ್ಲಿ ನೇತುಹಾಕುವುದರಿಂದ ಮನೆಗೆ ಸಕಾರಾತ್ಮಕತೆಯನ್ನು ಆಹ್ವಾನಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ಗಡಿಯಾರದಲ್ಲಿರುವ ಲೋಲಕ ತೂಗುವಾಗ ಅದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ. ಲೋಲಕದ ತೂಗಾಟ ಸಾಮಾನ್ಯವಾಗಿ ನಿಯಮಿತವಾಗಿ ಮಧ್ಯೆ, ಬಲ ಮತ್ತು ಎಡಕ್ಕೆ ಚಲನೆ ಮಾಡುತ್ತದೆ. ಇದು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಲೋಲಕದ ಗಡಿಯಾರವು ಮನೆ ಮಂದಿಯ ಜೀವನದಲ್ಲಿ ಸ್ಥಿರತೆ ಮತ್ತು ಸಮತೋಲನವನ್ನು ತರುತ್ತದೆ. ಹೀಗಾಗಿ ಇದರಿಂದ ಕುಟುಂಬದಲ್ಲಿ ಸಕಾರಾತ್ಮಕತೆ ಮತ್ತು ಶಾಂತಿ ನೆಲೆಸುತ್ತದೆ.

ಯಾವ ದಿಕ್ಕಿನಲ್ಲಿ ಇಡಬೇಕು?

ಲೋಲಕದ ಗಡಿಯಾರವನ್ನು ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಿಸಬೇಕು. ಈ ದಿಕ್ಕುಗಳು ಶುಭ ಮತ್ತು ಸಕಾರಾತ್ಮಕತೆಯಿಂದ ತುಂಬಿರುತ್ತದೆ. ಈ ದಿಕ್ಕುಗಳಲ್ಲಿ ದುಂಡಗಿನ ಅಥವಾ ಚೌಕಾಕಾರದ ಲೋಲಕದ ಗಡಿಯಾರವನ್ನು ಇರಿಸಬಹುದು.

ಇದನ್ನೂ ಓದಿ: Vastu Tips: ಮಹಡಿ ಮೆಟ್ಟಿಲುಗಳ ಕೆಳಗೆ ಇವು ಇರಲೇಬಾರದು

ಯಾವ ರೀತಿಯದ್ದಾಗಿರಬೇಕು?

ಇನ್ನು ಚಿನ್ನ, ಹಳದಿ ಅಥವಾ ಬಿಳಿ ಲೋಲಕದ ಗಡಿಯಾರವನ್ನು ಮನೆಯಲ್ಲಿ ಬಳಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಬಣ್ಣಗಳು ಸಕಾರಾತ್ಮಕತೆಯನ್ನು ಪ್ರತಿನಿಧಿಸುತ್ತದೆ. ಇದರಿಂದ ಮನೆಗೆ ಅದೃಷ್ಟವನ್ನು ಆಹ್ವಾನಿಸಿಕೊಳ್ಳಬಹುದು.

ಮನೆಯಲ್ಲಿ ಲೋಲಕದ ಗಡಿಯಾರವನ್ನು ಇಡುವುದರಿಂದ ಇದು ಪ್ರತಿ ಗಂಟೆಗೆ ಗಂಟೆ ಬಾರಿಸುತ್ತದೆ. ಇದು ಸಮಯವನ್ನು ನೆನಪಿಸುತ್ತದೆ ಮಾತ್ರವಲ್ಲ ಅದರಲ್ಲಿ ಉಂಟಾಗುವ ಶಬ್ದವು ಮನೆಯಲ್ಲಿ ಸಕಾರಾತ್ಮಕ ಕಂಪನವನ್ನು ಉಂಟು ಮಾಡುತ್ತದೆ. ಇದು ಮನೆಗೆ ಅತ್ಯಂತ ಶುಭವೆಂದೇ ಪರಿಗಣಿಸಲಾಗುತ್ತದೆ.

ವಿದ್ಯಾ ಇರ್ವತ್ತೂರು

View all posts by this author