ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vastu tips: ಶೌಚಾಲಯ ಮನೆಯ ಯಾವ ದಿಕ್ಕಿನಲ್ಲಿ ಇರಬೇಕು? ವಾಸ್ತು ನಿಯಮ ತಪ್ಪಿದ್ರೆ ಸಮಸ್ಯೆಗಳು ಕಾಡೋದು ಖಂಡಿತಾ!

ವಾಸ್ತುಶಾಸ್ತ್ರದ ಪ್ರಕಾರ ಶೌಚಾಲಯದ ಸರಿಯಾದ ದಿಕ್ಕು ಮತ್ತು ವಿನ್ಯಾಸವು ಮನೆಯ ಧನಾತ್ಮಕ ಶಕ್ತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗೆ ಪರಿಣಾಮ ಬೀರುತ್ತದೆ. ಪಶ್ಚಿಮ ಅಥವಾ ವಾಯುವ್ಯ ದಿಕ್ಕು ಉತ್ತಮವಾಗಿದ್ದು, ತಪ್ಪಾದ ದಿಕ್ಕಿನಲ್ಲಿ ನಿರ್ಮಿಸಿದರೆ ನಕಾರಾತ್ಮಕ ಶಕ್ತಿ, ಅನಾರೋಗ್ಯ ಮತ್ತು ಅಶಾಂತಿ ಹೆಚ್ಚಾಗಬಹುದು.

ಶೌಚಾಲಯ ಮನೆಯ ಈ ದಿಕ್ಕಿನಲ್ಲಿ ಇದ್ದರೆ ಶುಭ!

ವಾಸ್ತು ಶಾಸ್ತ್ರ -

Profile
Sushmitha Jain Apr 23, 2026 8:41 AM

ಬೆಂಗಳೂರು: ಸ್ವಚ್ಛತೆ ಮತ್ತು ಸರಿಯಾದ ನೈರ್ಮಲ್ಯವು ಆರೋಗ್ಯಕರ ಜೀವನಶೈಲಿಯ ಪ್ರಮುಖ ಭಾಗವಾಗಿದ್ದು, ಮನೆಯಲ್ಲಿನ ಧನಾತ್ಮಕ ಶಕ್ತಿಯನ್ನು ಉಳಿಸಿಕೊಳ್ಳಲು ಸಹ ಸಹಾಯಕವಾಗಿದೆ. ಹಿಂದಿನ ಕಾಲದಲ್ಲಿ ಶೌಚಾಲಯಗಳನ್ನು ಮನೆಯ ಹೊರಭಾಗದಲ್ಲಿ ನಿರ್ಮಿಸುವ ಪದ್ಧತಿ ಹೆಚ್ಚು ಸಾಮಾನ್ಯವಾಗಿತ್ತು. ಆದರೆ ಇಂದಿನ ಆಧುನಿಕ ಜೀವನಶೈಲಿಯಲ್ಲಿ ಶೌಚಾಲಯ ಮತ್ತು ಸ್ನಾನದ ಕೋಣೆಗಳನ್ನು ಮನೆಯೊಳಗೇ ನಿರ್ಮಿಸಲಾಗುತ್ತಿದೆ. ವಾಸ್ತುಶಾಸ್ತ್ರದ ಪ್ರಕಾರ, ಶೌಚಾಲಯದ ಸರಿಯಾದ ಸ್ಥಾನ ಮತ್ತು ವಿನ್ಯಾಸವು ಕೇವಲ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುವುದಲ್ಲದೆ, ಮನೆಯ ಸದಸ್ಯರ ಮಾನಸಿಕ, ದೈಹಿಕ ಮತ್ತು ಆರ್ಥಿಕ ಸುಖಸಮೃದ್ಧಿಯ ಮೇಲೂ ಪರಿಣಾಮ ಬೀರುತ್ತದೆ.

ವಾಸ್ತು ನಿಯಮಗಳನ್ನು ಪಾಲಿಸದೇ ಶೌಚಾಲಯವನ್ನು ನಿರ್ಮಿಸಿದರೆ ಮಾನಸಿಕ ಅಶಾಂತಿ, ದೈಹಿಕ ಸಮಸ್ಯೆಗಳು, ಅನಾರೋಗ್ಯ ಮತ್ತು ಕೆಲವೊಮ್ಮೆ ದೊಡ್ಡ ಅಪಘಾತಗಳಿಗೂ ಕಾರಣವಾಗಬಹುದು ಎಂದು ನಂಬಲಾಗುತ್ತದೆ.

ಹಾಗಾದ್ರೆ ವಾಸ್ತು ಸಲಹೆ(Vastu Tips) ಪ್ರಕಾರ ಶೌಚಾಲಯವನ್ನು ಯಾವ ದಿಕ್ಕಿನಲ್ಲಿ ನಿರ್ಮಿಸಬೇಕು..? ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು..? ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.

ಶೌಚಾಲಯವನ್ನು ತಪ್ಪಾದ ದಿಕ್ಕಿನಲ್ಲಿ ನಿರ್ಮಿಸಿದ್ರೆ ಏನಾಗುತ್ತೆ..?

ವಾಸ್ತುವಿನ ಪ್ರಕಾರ ಶೌಚಾಲಯದ ತಪ್ಪಾದ ನಿರ್ಮಾಣವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಇದರಿಂದ ಮಾನಸಿಕ ಒತ್ತಡ, ದೈಹಿಕ ಅಸ್ವಸ್ಥತೆ, ಅನಾರೋಗ್ಯ, ಆರ್ಥಿಕ ನಷ್ಟ ಹಾಗೂ ಕುಟುಂಬದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗಬಹುದು ಎಂದು ನಂಬಲಾಗುತ್ತದೆ.

ಶೌಚಾಲಯ ನಿರ್ಮಾಣಕ್ಕೆ ಸೂಕ್ತ ದಿಕ್ಕು

ಶೌಚಾಲಯ ನಿರ್ಮಾಣಕ್ಕೆ ಪಶ್ಚಿಮ ಅಥವಾ ವಾಯುವ್ಯ ದಿಕ್ಕು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಮಲಗುವ ಕೋಣೆಗೆ ಹೊಂದಿಕೊಂಡಿದ್ದರೆ ಪಶ್ಚಿಮ ಭಾಗ ಉತ್ತಮ, ಪ್ರತ್ಯೇಕ ಶೌಚಾಲಯವಾಗಿದ್ದರೆ ವಾಯುವ್ಯ ದಿಕ್ಕು ಉತ್ತಮ. ಪೂರ್ವ ಮತ್ತು ಉತ್ತರ ದಿಕ್ಕುಗಳನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳಿತು.

ಈ ದಿಕ್ಕಿನಲ್ಲಿ ಕಟ್ಟಿದ್ರೆ ಅಪಾಯ ತಪ್ಪಿದಲ್ಲ

ನೈಋತ್ಯ ದಿಕ್ಕಿನಲ್ಲಿ ಶೌಚಾಲಯ ನಿರ್ಮಾಣವನ್ನು ವಾಸ್ತು ಅನುಮತಿಸುವುದಿಲ್ಲ. ಆದರೆ ಅನಿವಾರ್ಯವಾಗಿ ಅಲ್ಲಿ ನಿರ್ಮಿಸಿದ್ದರೆ, ಶೌಚಾಲಯದ ಹೊರಗಡೆಯ ಗೋಡೆ ಮೇಲೆ ವಾಸ್ತು ಪಿರಮಿಡ್ ಇಡುವುದು ಪರಿಹಾರವಾಗಿ ಪರಿಗಣಿಸಲಾಗುತ್ತದೆ. ಜೊತೆಗೆ ಶೌಚಾಲಯದ ಬಾಗಿಲು ಯಾವಾಗಲೂ ಮುಚ್ಚಿಟ್ಟಿರಬೇಕು.

Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ಕಮೋಡ್‌ ಹೇಗಿರಬೇಕು..?

ಶೌಚಾಲಯದೊಳಗಿನ ನೀರಿನ ಪಾತ್ರೆಗಳು, ಬಕೆಟ್‌ಗಳು ಮತ್ತು ಕಮೋಡ್‌ಗಳ ಸ್ಥಾನವೂ ಮಹತ್ವದ್ದಾಗಿದೆ. ನೀರಿನ ಪಾತ್ರೆಗಳನ್ನು ಪಶ್ಚಿಮ, ದಕ್ಷಿಣ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡುವುದು ಉತ್ತಮ. ಕಮೋಡ್‌ ಅನ್ನು ಬಳಸುವಾಗ ವ್ಯಕ್ತಿಯ ಮುಖ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬಾರದು.

ಶೌಚಾಲಯದ ಬಾಗಿಲಿನ ವಾಸ್ತು ನಿಯಮಗಳು

ಶೌಚಾಲಯದ ಬಾಗಿಲು ಪೂರ್ವ ಅಥವಾ ಉತ್ತರ ಗೋಡೆಗೆ ಎದುರಾಗಿರುವುದು ಉತ್ತಮ. ಮಲಗುವ ಕೋಣೆಗೆ ನೇರವಾಗಿ ಅಂಟಿಕೊಂಡಿರದಂತೆ ನಿರ್ಮಿಸುವುದು ಉತ್ತಮ.

ಅಗತ್ಯವಿದ್ದರೆ ಮಧ್ಯೆ ಸಣ್ಣ ವಿಭಾಗ ಅಥವಾ ತಡೆ ವ್ಯವಸ್ಥೆ ಮಾಡಬಹುದು. ಪ್ರವೇಶ ದ್ವಾರದ ಎತ್ತರವು ನೆಲದ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಿರಬೇಕು.

ಶೌಚಾಲಯದ ನೆಲಕ್ಕೆ ಮಾರ್ಬಲ್ ಅಥವಾ ಟೈಲ್‌ಗಳನ್ನು ಬಳಸುವುದು ಉತ್ತಮವೆಂದು ವಾಸ್ತುಶಾಸ್ತ್ರ ಸಲಹೆ ನೀಡುತ್ತದೆ.

ತ್ಯಾಜ್ಯ ನೀರು ಉತ್ತರ ಅಥವಾ ಪೂರ್ವ ದಿಕ್ಕಿಗೆ ಹರಿಯುವಂತೆ ವ್ಯವಸ್ಥೆ ಮಾಡುವುದು ಶುಭಕರ.

ಶೌಚಾಲಯಕ್ಕೆ ಸೂಕ್ತ ಬಣ್ಣಗಳು
ಬಿಳಿ, ಗುಲಾಬಿ, ಆಕಾಶ ನೀಲಿ ಅಥವಾ ತಿಳಿ ಬೂದು ಬಣ್ಣಗಳು ಶೌಚಾಲಯಕ್ಕೆ ಉತ್ತಮವೆಂದು ಹೇಳಲಾಗುತ್ತದೆ. ಹಗುರ ಮತ್ತು ಶಾಂತ ಬಣ್ಣಗಳು ಧನಾತ್ಮಕ ಶಕ್ತಿ ಹಾಗೂ ಶಾಂತಿಯ ವಾತಾವರಣವನ್ನು ನೀಡುತ್ತವೆ ಎಂದು ನಂಬಲಾಗಿದೆ.