ಬ್ಯಾಂಕ್ ಖಾತೆಗೆ ತಪ್ಪಿ 10 ಕೋಟಿ ರುಪಾಯಿ ಜಮೆ; ಹಣ ನನ್ನದಲ್ಲ ಎಂದು ಪ್ರಾಮಾಣಿಕತೆ ಮೆರೆದ ರೈತನ ಪತ್ನಿ
Viral News: ಉತ್ತರ ಪ್ರದೇಶದ ಮಹಿಳೆಯೊಬ್ಬರು ತನ್ನ ಪ್ರಾಮಾಣಿಕತೆಯ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಬ್ಯಾಂಕ್ ಖಾತೆಗೆ ಅನಿರೀಕ್ಷಿತವಾಗಿ ಬಂದ ಹಣವನ್ನು ತಾನು ಬಳಸಿಕೊಳ್ಳದೆ ಅದನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸದ್ಯ ಇವರ ಹೃದಯವಂತಿಕೆಗೆ ಎಲ್ಲರೂ ಫಿದಾ ಆಗಿದ್ದಾರೆ.
ರೀಟಾ ಮತ್ತುಬ್ಯಾಂಕ್ ಬ್ಯಾಲನ್ಸ್ ವಿವರ -
ಲಖನೌ, ಮಾ. 29: ಉತ್ತರ ಪ್ರದೇಶದ (Uttar Pradesh) ಮಹಿಳೆಯೊಬ್ಬರು ತನ್ನ ಪ್ರಾಮಾಣಿಕತೆಯ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಬ್ಯಾಂಕ್ ಖಾತೆಗೆ ಅನಿರೀಕ್ಷಿತವಾಗಿ ಬಂದ ಹಣವನ್ನು ತಾನು ಬಳಸಿಕೊಳ್ಳದೆ ಅದನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಬ್ಯಾಂಕ್ ಖಾತೆಗೆ ತಪ್ಪಿ 10 ಕೋಟಿ ರುಪಾಯಿ ಮೊತ್ತ ಜಮೆಯಾಗಿತ್ತು. ಆದರೆ ಅದರಲ್ಲಿ ಅವರು ಒಂದು ರುಪಾಯಿ ಕೂಡ ಬಳಸಿಕೊಳ್ಳದೆ ಹಿಂತಿರುಗಿಸಿದ್ದಾರೆ. ಸದ್ಯ ಇವರ ಹೃದಯವಂತಿಕೆಗೆ ಎಲ್ಲರೂ ಫಿದಾ ಆಗಿದ್ದಾರೆ.
ಬಿಚ್ವಾನ್ ಪ್ರದೇಶದ ದೇವ್‌ಗಂಜ್ ಗ್ರಾಮದ ನಿವಾಸಿ ಪರಸ್ಭನ್ ಬಹೇಲಿಯಾ ಅವರ ಪತ್ನಿ ರೀಟಾ ಕೃಷಿಯ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಅವರು ಹಣವನ್ನು ವಿತ್‌ಡ್ರಾ ಮಾಡಲು ಸ್ಥಳೀಯ ಬ್ಯಾಂಕ್‌ಗೆ ಭೇಟಿ ನೀಡಿದ್ದರು. ಆದರೆ ಶಾಖೆ ಮುಚ್ಚಿದ್ದರಿಂದ ಹತ್ತಿರದ ಎಟಿಎಂಗೆ ಹೋಗಿ ತಮ್ಮ ಬ್ಯಾಲೆನ್ಸ್ ಪರಿಶೀಲಿಸಿದರು. ಆದರೆ ಅವರು ಖಾತೆಯಲ್ಲಿನ ಬ್ಯಾಲನ್ಸ್ ನೋಡಿ ದಿಗ್ಭ್ರಮೆಗೊಂಡರು.
ಅವರ ಖಾತೆಗೆ ಸುಮಾರು 10 ಕೋಟಿ ರುಪಾಯಿ ನಿಗೂಢವಾಗಿ ಜಮೆಯಾಗಿತ್ತು. ಈ ಹಣವನ್ನು ನೋಡಿ ಕಣ್ಣುಗಳಲ್ಲಿ ನಂಬಲು ಸಾಧ್ಯವಾಗದೆ, ಅವರು ಮತ್ತೊಂದು ಎಟಿಎಂನಲ್ಲಿ ಎರಡನೇ ಬಾರಿಗೆ ಬ್ಯಾಲೆನ್ಸ್ ಪರಿಶೀಲಿಸಿದರು.
ಅಲ್ಲೂ ಬ್ಯಾಲನ್ಸ್ ಅಷ್ಟೇ ತೋರಿಸಿತು. ಖಾತೆಯಲ್ಲಿ ಅಪಾರ ಮೊತ್ತ ಕಂಡುಬಂದರೂ, ರೀಟಾ ಹಣವನ್ನು ಹಿಂಪಡೆಯಲು ಪ್ರಯತ್ನಿಸಲಿಲ್ಲ. ಎಲ್ಲಿಂದ ಹಣ ಬಂದಿದೆ ಎನ್ನುವುದು ಸರಿಯಾಗಿ ತಿಳಿಯುವವರೆಗೆ ವಿತ್‌ಡ್ರಾ ಮಾಡಬೇಡಿ ಎಂದು ಅವರು ಕುಟುಂಬ ಸದಸ್ಯರಿಗೆ ತಾಕೀತು ಮಾಡಿದರು. ಬಳಿಕ ರೀಟಾ ಕುಟುಂಬವು ಈ ವಿಷಯವನ್ನು ಬ್ಯಾಂಕ್‌ನ ಗಮನಕ್ಕೆ ಬಂದಾಗ ನಿಜಾಂಶ ಬಯಲಾಯ್ತು. ಬ್ಯಾಂಕ್ ಆಫ್ ಇಂಡಿಯಾದ ಕರೀಮ್‌ಗಂಜ್ ಶಾಖೆಯ ವ್ಯವಸ್ಥಾಪಕ ರಿಷಿಕಾಂತ್ ಪಾಂಡೆ ಮಾಹಿತಿ ನೀಡಿ, ತಾಂತ್ರಿಕ ದೋಷ ಅಥವಾ ವಹಿವಾಟಿನ ದೋಷದಿಂದ ಹಣ ಜಮೆಯಾಗಿರಬಹುದು ಎಂದು ತಿಳಿಸಿದ್ದಾರೆ.
ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಸೋಶಿಯಲ್ ಮೀಡಿಯಾದಲ್ಲಿ ಅನೇಕರು ರೀಟಾ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ. ಅವರ ಕುಟುಂಬವು ಹಣವನ್ನು ಬಳಕೆ ಮಾಡುವ ಎಲ್ಲ ಅವಕಾಶಗಳನ್ನು ಹೊಂದಿದ್ದರು ಬ್ಯಾಂಕ್‌ಗೆ ತೆರಳಿ ಮಾಹಿತಿ ನೀಡಿರುವುದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇಂತಹ ಪ್ರಾಮಾಣಿಕತೆ ಮೆರೆಯುವ ವ್ಯಕ್ತಿಗಳೂ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.