ಒಡಿಶಾ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ್ದ ಹೃದಯವಿದ್ರಾವಕ ಘಟನೆಯೊಂದು ಒಡಿಶಾದ ಪುರಿ ಜಿಲ್ಲೆಯ ಕೋಟಕೋಸಂಗ ಪ್ರದೇಶದಲ್ಲಿ ನಡೆದಿದೆ (Odisha teens thrashed).ಓರ್ವ ಬಾಲಕ ಮತ್ತು ಯುವಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಕಬ್ಬಿಣದ ಸಲಾಕೆಯಿಂದ ಥಳಿಸಿದ್ದಾರೆ. ಬಳಿಕ ಸಿಗರೇಟ್‌ನಿಂದ ದೇಹವನ್ನು ಸುಟ್ಟು , ಮೂತ್ರ ಕುಡಿಯಲು ಒತ್ತಾಯಿಸಲಾಗಿದೆ. ಈ ಅಮಾನವೀಯ ಘಟನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಒಡಿಶಾದ ಪುರಿ ಜಿಲ್ಲೆಯ ಕೋಟಕೋಸಂಗ ಪ್ರದೇಶದಲ್ಲಿ ಗ್ರಾಮ ಮೇಳವೊಂದನ್ನು ಆಯೋಜನೆ ಮಾಡಲಾಗಿತ್ತು. ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಗ್ರಾಮ ಮೇಳಕ್ಕೆ ಆಗಮಿಸಿದ್ದರು. ಅಪರಿಚಿತ ಇಬ್ಬರು ಯುವಕರನ್ನು ಕಂಡ ಗ್ರಾಮಸ್ಥರು ತಮ್ಮ ಶತ್ರು ಗ್ರಾಮದ ನಿವಾಸಿಗಳೆಂದು ತಪ್ಪಾಗಿ ಭಾವಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ, ನಂತರ ಹಲ್ಲೆ ಮಾಡಿದ್ದಾರೆ.ಬಳಿಕ ಯುವಕರ ಕುಟುಂಬಸ್ಥರು ಮಾಹಿತಿ ತಿಳಿದು ಕೋಟಕೋಸಂಗ ಗ್ರಾಮಕ್ಕೆ ಬಂದು ಮನವಿ ಮಾಡಿದ್ದಾರೆ. ನಂತರ ಇಬ್ಬರನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕೋಟಕೋಸಂಗ ಮತ್ತು ಪ್ರಧಾನ್ ಸಾಹಿ ಗ್ರಾಮದ ನಡುವೆ ಈ ಹಿಂದಿನಿಂದಲೂ ಸಾಕಷ್ಟು ವಿಚಾರಕ್ಕೆ ವೈಶಮ್ಯವಿತ್ತು. ಹೀಗಾಗಿ ಗ್ರಾಮಕ್ಕೆ ಬಂದ ಯುವಕರನ್ನು ತಮ್ಮ ಪಕ್ಕದ ಶತ್ರುಗ್ರಾಮದವರು ಎಂದು ಭಾವಿಸಿ ದೌರ್ಜನ್ಯ ಎಸಗಿ ಮೂತ್ರ ಕುಡಿಯಲು ಸಹ ಒತ್ತಾಯಿಸಿದ್ದಾರೆ. ಈ ಕೃತ್ಯ ಎಸೆಗಿದ್ದವರಿಗೆ ಶೀಘ್ರ ಕಠಿಣ ಶಿಕ್ಷೆ ನೀಡಬೇಕು ಎಂದು ಹಲ್ಲೆಗೊಳಗಾದ ಸಂತ್ರಸ್ತ ಯುವಕನ ತಂದೆ ಪೊಲೀಸ್ ದೂರಿನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.
ಇದನ್ನು ಓದಿ: Viral News: 20ಸಾವಿರದಲ್ಲಿ ಬೆಂಗಳೂರಿನಲ್ಲಿ ಆರಾಮವಾಗಿ ಜೀವನ ನಡೆಸಲು ಆಗುತ್ತಂತೆ ! ಹೇಗಿದೆ ನೋಡಿ ಯುವಕನ ಬಜೆಟ್ ಪ್ಲಾನ್
ಹಲ್ಲೆಯಲ್ಲಿ ಒಬ್ಬ ಯುವಕನ ತಲೆಗೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿದವರಲ್ಲಿ ಕೆಲವರು ಕೋಟಕೋಸಂಗ ಹಾಗೂ ಪ್ರಧಾನ್‌ಸಾಹಿ ಗ್ರಾಮಕ್ಕೆ ಸೇರಿದವರಾಗಿರಬಹುದು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈಗಾಗಲೇ ಕೃತ್ಯ ಎಸಗಿದ ಕೆಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ದಿನದಲ್ಲಿ ಸೂಕ್ತ ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು ಮಾನವರಾಗಿ ಹುಟ್ಟಿದ್ದು ಅಪ್ರಯೋಜಕ, ಮನುಷ್ಯತ್ವ ಈ ಗ್ರಾಮದಲ್ಲಿ ಸತ್ತು ಹೋಗಿರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಪ್ರೀತಿ ಹಂಚಿ ಮಾನವರಾಗಿ ಬದುಕುದ ನ್ನು ಕಲಿಯಿರಿ ಎಂದು ಇನ್ನೊಬ್ಬ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.