ಕಠ್ಮಂಡು, ಸೆ. 1: ನೇಪಾಳದಲ್ಲಿ (Nepal Flood) ಇತ್ತೀಚೆಗೆ ನಡೆದ ಭೀಕರ ಪ್ರವಾಹವು ಇಡೀ ದೇಶವನ್ನೇ ತತ್ತರಿಸುವಂತೆ ಮಾಡಿದೆ. ದಿಢೀರ್ ಪ್ರವಾಹ ಮತ್ತು ಹಿಮನದಿ ಕುಸಿತದಿಂದಾಗಿ ಇದುವರೆಗೆ 1,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 4,200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರವಾಹದ ನಡುವೆ, ಗಾಳಿ, ಕೆಸರು, ಮಣ್ಣು, ಬಂಡೆ ಕಲ್ಲು ಉರುಳಿ ಬಂದರೂ ನುವಕೋಟ್‌ನ ಹಸಿರು ಬಣ್ಣದ ಮನೆಯೊಂದು ದೃಢವಾಗಿ ಉಳಿದುಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಮನೆಯ ಮಾಲಕರು, "ನಾವು ಬದುಕುಳಿದಿರುವುದು ಅದೃಷ್ಟ. ಇದು ನಮಗೆ ಸಿಕ್ಕ ಎರಡನೇ ಜನ್ಮ. ಪ್ರಬಲ ಭೂಕಂಪದ ನಡುವೆ ಸುತ್ತಮುತ್ತಲಿನ ಮನೆಗಳು ಬಿದ್ದರೂ ನಮ್ಮ ಮನೆ ಸುರಕ್ಷಿತವಾಗಿತ್ತು" ಎಂದು ನೆನಪಿಸಿಕೊಂಡಿದ್ದಾರೆ.
ಹಿಮನದಿ ಕುಸಿತ, ಬಂಡೆ ಕುಸಿತ ಹಾಗೂ ಹಠಾತ್ ಪ್ರವಾಹದಂತಹ ದುರಂತಗಳು ಇತ್ತೀಚೆಗೆ ಪದೇ ಪದೆ ಸಂಭವಿಸುತ್ತಿವೆ. ಅದರಲ್ಲೂ ನೇಪಾಳದ ಈ ಪ್ರವಾಹದ ದುರಂತದಲ್ಲಿ ಸಾವಿರಾರು ಜನರು ಸಿಲುಕಿಕೊಂಡಿದ್ದಾರೆ. ಈ ನಡುವೆ ತೀವ್ರ ಪ್ರವಾಹಕ್ಕೆ ಸುತ್ತಮುತ್ತಲಿನ ಅನೇಕ ಮನೆಗಳು ಧ್ವಂಸಗೊಂಡರೂ ಹಸಿರು ಮನೆಯೊಂದು ಮಾತ್ರ ಅಲುಗಾಡದೆ ನಿಂತಿತ್ತು.
ವಿಡಿಯೊ ನೋಡಿ:
ಮನೆಯ ಮಾಲಕಿ ಲಕ್ಷ್ಮೀ ಪಾಂಡೆ ಈ ಬಗ್ಗೆ ಮಾತನಾಡಿದ್ದಾರೆ. ʼʼನಾವು ಬದುಕಿ ಉಳಿದಿರುವುದು ನಮಗೆ ಸಿಕ್ಕ ಎರಡನೇ ಜನ್ಮ. ಪ್ರವಾಹದ ನೀರು ಮನೆಗೆ ನುಗ್ಗಿದಾಗ ನಾವು ತಕ್ಷಣ ಮೇಲಿನ ಚಾವಣಿಗೆ ಹೋಗಿದ್ದೇವೆ. ಪ್ರವಾಹದ ತೀವ್ರತೆಯ ಹೊರತಾಗಿಯೂ ಮನೆ ಹಾಗೆಯೇ ಉಳಿದಿತ್ತು. ಇದರಿಂದಾಗಿ ನಮ್ಮ ಪ್ರಾಣವು ಉಳಿಯಿತುʼʼ ಎಂದು ಹೇಳಿಕೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಲಿಫ್ಟ್‌ನಲ್ಲೇ ಹೊಡೆದಾಡಿದ ಅಪಾರ್ಟ್‌ಮೆಂಟ್ ಮಾಲಕರು
ವಿನ್ಯಾಸ ಹಾಗೂ ನಿರ್ಮಾಣವು ಹೇಗೆ ಮನೆಯನ್ನು ಉಳಿಸಿತು ಎಂಬುದನ್ನು ಅನೇಕ ತಜ್ಞರು ವಿವರಿಸಿದ್ದಾರೆ. ಹಿಮಾಲಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಲ್ಲು ಮತ್ತು ಮಣ್ಣಿನಿಂದ ಮನೆಗಳನ್ನು ಕಟ್ಟಲಾಗುತ್ತದೆ. ಆದರೆ ಈ ಹಸಿರು ಮನೆಯನ್ನು ಕಾಂಕ್ರೀಟ್ ಫ್ರೇಮ್ ಬಳಸಿ ಕಟ್ಟಲಾಗಿತ್ತು. ಸಿಮೆಂಟ್ ಕಾಂಕ್ರೀಟ್ ಜತೆಗೆ ಉಕ್ಕಿನ ಕಂಬಿಗಳನ್ನು ಜೋಡಿಸಲಾಗಿದ್ದರಿಂದ ಇದು ಪ್ರವಾಹದ ಒತ್ತಡವನ್ನು ತಡೆಯುವ ಶಕ್ತಿ ಹೊಂದಿತು ಎಂದಿದ್ದಾರೆ.
ಅದೇ ರೀತಿ ಈ ಮನೆ ಪ್ರವಾಹ ಬಂದ ಸ್ಥಳದಿಂದ ಎತ್ತರದ ಪ್ರದೇಶದಲ್ಲಿತ್ತು. ಜತೆಗೆ ಮನೆಯ ಚೌಕ ಆಕಾರದ ವಿನ್ಯಾಸದಿಂದಾಗಿ ರಭಸವಾಗಿ ಬಂದ ನೀರು ಮನೆಯ ಎರಡೂ ಬದಿಗಳಲ್ಲಿ ಹರಿದು ಹೋಯಿತೇ ಹೊರತು ಸಂಪೂರ್ಣ ಬಲದೊಂದಿಗೆ ಮನೆಗೆ ಅಪ್ಪಳಿಸಲಿಲ್ಲ. ಹೀಗಾಗಿ ಈ ಮನೆ ಸಂಪೂರ್ಣವಾಗಿ ಗಟ್ಟಿಯಾಗಿ ನಿಂತಿದೆ.