ಬೆಂಗಳೂರು, ಅ. 6: ಕಾರ್ಪೊರೇಟ್ ವಲಯದಲ್ಲಿ ತೀವ್ರ ಒತ್ತಡದ ಕಾರಣ ಕೆಲಸ ತೊರೆದವರು ಅನೇಕರು ಇದ್ದಾರೆ. ಅದರಲ್ಲೂ ಅತ್ಯುತ್ತಮ ಪ್ಯಾಕೇಜ್‌ನ ಕೆಲಸ ತೊರೆದು ಸ್ವಂತ ಉದ್ಯಮದಲ್ಲಿ ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ. ಆದರೆ ಇದೀಗ ಯುವಕ ತಮ್ಮ ಉತ್ತಮ ಪ್ಯಾಕೇಜ್‌ನ ಕೆಲಸ ತೊರೆದು ಆನ್‌ಲೈನ್ ಉದ್ಯಮದಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದಾರೆ. ಕಮಲ್ ತೋಲಾನಿ ಎಂಬ ಯುವಕ ವರ್ಷಕ್ಕೆ 25 ಲಕ್ಷ ರೂಪಾಯಿ ಸಿಗುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಇ-ಕಾಮರ್ಸ್ ಉದ್ಯಮದತ್ತ ಆಸಕ್ತಿ ವಹಿಸಿದ್ದಾರೆ. ಅವರು ಈ ವ್ಯವಹಾರದಲ್ಲಿ ಗಳಿಸಿದ ಲಾಭದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು (Viral News) ನೆಟ್ಟಿಗರ ಗಮನ ಸೆಳೆದಿದೆ
ತನ್ನ ಸ್ವಂತ ಇ-ಕಾಮರ್ಸ್ ವ್ಯವಹಾರವನ್ನು ಪ್ರಾರಂಭಿಸಲು 25 LPA ಕಾರ್ಪೊರೇಟ್ ಕೆಲಸವನ್ನು ತೊರೆದ ಕಮಲ್ ತೋಲಾನಿ ಮೊದಲ ತಿಂಗಳು ಹೇಗೆ ಆದಾಯ ಗಳಿಸಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ಸ್ಥಿರ ಸಂಬಳದ ಬದಲು ಉತ್ಪನ್ನಗಳು, ಆರ್ಡರ್‌ಗಳು, ಜಾಹೀರಾತುಗಳೊಂದಿಗೆ ಲಾಭ ಕಂಡಿದ್ದಾರೆ.
ಅವರು ಅಮೆಜಾನ್, ಮೀಶೋ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿನ ತಮ್ಮ ಮಾರಾಟದ ವಿವರವನ್ನು ಹಂಚಿಕೊಂಡಿದ್ದು, 30 ದಿನಗಳಲ್ಲಿ ಮೀಶೋ ಮೂಲಕ 3,200 ರೂಪಾಯಿ ಗಳಿಸಿದರೆ ಅಮೆಜಾನ್ ನಿಂದ 45,382 ರೂಪಾಯಿ ಗಳಿಸಿದ್ದಾರೆ. ತಿಂಗಳ ಕೊನೆಗೆ ನಿಗದಿತ ಸಂಬಳ ಸಿಗುವ ಕಾರ್ಪೊರೇಟ್ ಲೈಫ್‌ನಿಂದ ಹೊರಬಂದು, ಈಗ ಪ್ರಾಡಕ್ಟ್‌ಗಳು, ಆರ್ಡರ್‌ಗಳು, ಜಾಹೀರಾತುಗಳನ್ನು ತನ್ನ ದಿನಚರಿಯನ್ನಾಗಿ ಬದಲಾಯಿಸಿದ್ದಾರೆ.
ವಿಡಿಯೊ ನೋಡಿ:
ವ್ಯಾಪಾರ ಮಾಡುವ ಆರಂಭಿಕ ಹಂತದಲ್ಲಿ ಕೆಲ ತಪ್ಪುಗಳಾಗಿದ್ದು, ಅವುಗಳಿಂದ ಪಾಠ ಕಲಿಯುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯ ಕಮಲ್ ಅವರ ಈ ನಿರ್ಧಾರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು 25 ಲಕ್ಷದ ಸಂಬಳವನ್ನು ಬಿಡುವುದು ಸರಿಯಾದ ಕ್ರಮವೇ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡಿದ ಕಮಲ್, ʼʼನನ್ನ ಸ್ವಂತ ಉದ್ಯಮಕ್ಕಾಗಿ 25 LPA ಕೆಲಸವನ್ನು ತ್ಯಜಿಸಿದೆ. ಸ್ಥಿರವಾದ ಕಾರ್ಪೊರೇಟ್ ಕೆಲಸವನ್ನು ಬಿಡುವುದು ಸುಲಭದ ನಿರ್ಧಾರವಾಗಿರಲಿಲ್ಲ. ಸಂಬಳ ಚೆನ್ನಾಗಿತ್ತು, ಕೆಲಸ ಸುರಕ್ಷಿತವಾಗಿತ್ತು, ಆದರೆ ನಾನು ನಿಜವಾಗಿಯೂ ವೈಯಕ್ತಿಕವಾಗಿ ಏನನ್ನಾದರೂ ಮಾಡಬೇಕು ಎಂದು ಇಚ್ಛಿಸಿದ್ದೆʼʼ ಎಂದು ಬರೆದುಕೊಂಡಿದ್ದಾರೆ.