ಆಂಧ್ರಪ್ರದೇಶ: ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆ ಹೊರತಾಗಿ ಶಾಲೆಯ ಕೆಲಸಗಳಿಗೆ ಮಕ್ಕಳನ್ನು ಬಳಸಿಕೊಳ್ಳಬಾರದು ಎಂಬ ನಿಯಮವಿದೆ. ಅಧ್ಯಾಪಕರ ತಮ್ಮ ವೈಯಕ್ತಿಕ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುವುದು ಕೂಡ ನಿಯಮ ಉಲ್ಲಂಘನೆ ಮಾಡಿದಂತೆ. ಹಾಗಿದ್ದರೂ ಅನೇಕ ಕಡೆ ಇಂತಹ ನಿಯಮ ಉಲ್ಲಂಘನೆ ಆಗುತ್ತಲೇ ಇರುತ್ತದೆ. ಅಂತೆಯೇ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರು ಶಾಲಾ ಮಕ್ಕಳಿಂದ ತಮ್ಮ ಕಾಲುಗಳನ್ನು ಮಸಾಜ್ ಮಾಡಿಸಿಕೊಂಡ ಘಟನೆ ಆಂಧ್ರಪ್ರದೇಶದ (Andhra Pradesh) ಶ್ರೀಕಾಕುಳಂ ಜಿಲ್ಲೆಯ ಮೆಳಿಯಪುಟ್ಟಿ ಮಂಡಲದ ಬಂಡಪಲ್ಲಿ ಬಾಲಕಿಯರ ಬುಡಕಟ್ಟು ಆಶ್ರಮ ಶಾಲೆಯಲ್ಲಿ (Bandapalli Tribal Girls Ashram School in Srikakulam District) ನಡೆದಿದೆ. ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕಿಯೇ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಾ ಮಕ್ಕಳನ್ನೇ ಗುಲಾಮರಂತೆ ನಡೆಸಿಕೊಂಡ ವಿಡಿಯೋ ಇತ್ತೀಚೆಗಷ್ಟೇ ವೈರಲ್ (Viral Video) ಆಗಿದೆ. ಎಲ್ಲೆಡೆ ಈ ಘಟನೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಂಡು ಆಕೆಯನ್ನು ಅಮಾನತ್ತು ಮಾಡಲಾಗಿದೆ.
ವೈರಲ್ ಆದ ವಿಡಿಯೊದಲ್ಲಿ ಮುಖ್ಯೋಪಾಧ್ಯಾಯಿನಿ ಆರಾಮವಾಗಿ ಕುಳಿತುಕೊಂಡು ಯಾರೊಂದಿಗೊ ಫೋನಿನಲ್ಲಿ ಮಾತನಾಡುತ್ತಿದ್ದರು. ಶಿಕ್ಷಕಿಯ ಕಾಲಿನ ಬಳಿ ಇಬ್ಬರು ವಿದ್ಯಾರ್ಥಿ ಗಳು ಕುಳಿತುಕೊಂಡಿದ್ದರು. ಶಿಕ್ಷಕಿಯ ಪಾದ , ಮೊಣಕಾಲುಗಳನ್ನು ಒತ್ತಿ ಮಸಾಜ್ ಮಾಡುತ್ತಿದ್ದಾರೆ. ಇದನ್ನು ಶಾಲೆಯ ಸಿಬಂದಿಯೊಬ್ಬರು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಟ್ವಿಟ್ಟರ್ ಎಕ್ಸ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ವೈರಲ್ ವಿಡಿಯೊ ಇಲ್ಲಿದೆ:
ಸಾಮಾಜಿಕ ಜಾಲತಾಣದಲ್ಲಿ ಆಂಧ್ರಪ್ರದೇಶದ ಸರಕಾರಕ್ಕೆ ಟ್ಯಾಗ್ ಮಾಡಿ ಅನೇಕರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೆ ಶಿಕ್ಷಣ ಅಧಿಕಾರಿಗಳು ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳಲು ನೋಟಿಸ್ ಹೊರಡಿಸಿದ್ದಾರೆ. ಮೇಲಾಧಿಕಾರಿಗಳ ಹಾಗೂ ಸರಕಾರದ ಆದೇಶದ ಮೇರೆಗೆ ಸೀತಾಂ ಪೇಟದ ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆಯ ಯೋಜನಾ ಅಧಿಕಾರಿಯಾದ ಪವಾರ್ ಸ್ವಪ್ನಿಲ್ ಜಗನ್ನಾಥ್ (Swapnil Jagannath) ಅವರು ತಕ್ಷಣವೇ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಅದರ ಜೊತೆಗೆ ಶಿಕ್ಷಕಿಗೆ ಶೋಕಾಸ್ ನೋಟಿಸ್ (ಅಮಾನತ್ತು) ಜಾರಿಗೊಳಿಸಿದ್ದಾರೆ.
ಇದನ್ನು ಓದಿ:Viral Video: ಛೀ.. ಈತನೆಂಥಾ ನೀಚ! ಎಂಜಲು ಉಗುಳಿ ರೊಟ್ಟಿ ಮಾಡಿದ ಕಿಡಿಗೇಡಿ- ವಿಡಿಯೊ ಫುಲ್ ವೈರಲ್
ಶಿಕ್ಷಕಿ ಹೇಳಿದ್ದೇನು?
ವಿಡಿಯೋ ವೈರಲ್ ಆದ ಬೆನ್ನಲ್ಲೆ ವಿದ್ಯಾರ್ಥಿಗಳ ಪೋಷಕರು ಮತ್ತು ಸ್ಥಳೀಯರು ಶಾಲೆಗೆ ಬಂದು ಘಟನೆ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಶಿಕ್ಷಕಿ ಹೆಸರು ವೈ ಸುಜಾತ ಎಂದು ತಿಳಿದುಬಂದಿದೆ. ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಕೂಡ ಸ್ಪಷ್ಟನೆ ನೀಡಲು ಹೊರಟಿದ್ದಾರೆ. ಶಿಕ್ಷಕಿಯು ಈ ಬಗ್ಗೆ ಮಾತನಾಡಿ, ನಾನು ಕೆಳಗೆ ಬಿದ್ದಿದ್ದು ತನಗೆ ಮೊಣಕಾಲು ನೋವಿದ್ದ ಕಾರಣ ವಿದ್ಯಾರ್ಥಿ ಗಳು ನನಗೆ ಸಹಾಯ ಮಾಡುತ್ತಿದ್ದರು. ವಿಡಿಯೋದಲ್ಲಿ ಕಂಡದ್ದು ಸುಳ್ಳು ಮಕ್ಕಳು ನನಗೆ ಆರೋಗ್ಯ ದೃಷ್ಟಿಯಿಂದ ಸಹಾಯ ಮಾಡುತ್ತಿದ್ದರಷ್ಟೇ ಆದರೆ ಇಲ್ಲಿ ಸತ್ಯವನ್ನು ತಿರುಚಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಮುಖ್ಯೋಪಾಧ್ಯಾಯಿನಿಯು ತನ್ನ ಕಾಲು ಒತ್ತಿಸಿಕೊಳ್ಳುವಂತಹ ವೈಯಕ್ತಿಕ ಕೆಲಸವನ್ನು ಮಕ್ಕ ಳಿಂದ ಮಾಡಿಸಿ ನಿಯಮ ಉಲ್ಲಂಘಿಸಿದ್ದಾರೆ. ಜೊತೆಗೆ ಮೊಬೈಲ್ ಬಳಕೆ ಮಾಡುತ್ತಾ ತಮ್ಮ ಕರ್ತವ್ಯಕ್ಕೆ ಲೋಪ ಎಸಗಿದ್ದಾರೆ. ಅವರು ಏನೆ ಹೇಳಿಕೆ ನೀಡಿದ್ದರು ಈ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಹಾಗೂ ತನಿಖೆ ಪೂರ್ಣಗೊಳ್ಳುವವರೆಗೆ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಸೇವೆಯಿಂದ ಅಮಾನತು ಗೊಳಿಸುವಂತೆ ಅಧಿಕಾರಿಗಳು ಕೂಡ ಆದೇಶಿಸಿದ್ದಾರೆ.