ಕ್ಯಾನ್‌ಬೆರಾ: ಬೆಳಕಿನ ಹಬ್ಬ ದೀಪಾವಳಿಯನ್ನು (Deepavali) ಆಸ್ಟ್ರೇಲಿಯಾದಲ್ಲೂ ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಸಿಡ್ನಿ (Sydney) ನಗರವಂತೂ ಪ್ರಕಾಶಮಾನವಾಗಿ ಹೊಳೆಯುತ್ತಿದೆ. ನಗರವು ದೀಪಗಳಿಂದ ಝಗಮಗಿಸಿ ಎಂಥವರನ್ನೂ ಆಕರ್ಷಿಸುತ್ತಿದೆ. ನಿರಿಂಬಾ ಫೀಲ್ಡ್ಸ್‌ನ ಫ್ಯಾಂಟಮ್ ಸ್ಟ್ರೀಟ್‌ನಿಂದ ಮಾರ್ಸ್ಡೆನ್ ಪಾರ್ಕ್‌ವರೆಗೆ ಫಳಫಳನೆ ಹೊಳೆಯುತ್ತಿದೆ. ಎಲ್‌ಇಡಿ, ವರ್ಣರಂಜಿತ ರಂಗೋಲಿಗಳು, ದೀಪಗಳು ಮತ್ತು ಲೈಟಿಂಗ್ಸ್‌ಗಳಿಂದ ಮನೆಗಳು ಕಂಗೊಳಿಸುತ್ತಿವೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಈ ವರ್ಷದ ದೀಪಾವಳಿ ಹಬ್ಬದ ಆಚರಣೆಯಲ್ಲಿ ಪ್ರಮುಖವಾಗಿ ಮಿಂಚಿದ್ದು ಫ್ಯಾಂಟಮ್ ಸ್ಟ್ರೀಟ್. ಇದು ತನ್ನ ಅದ್ಭುತ ದೀಪಾವಳಿ ಅಲಂಕಾರಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ. ಬೀದಿಯುದ್ದಕ್ಕೂ ಇರುವ ಮನೆಗಳಲ್ಲಿ ಭಾರತೀಯ ಸಂಸ್ಕೃತಿ ಅನಾವರಣಗೊಂಡಿದೆ. ಅಲಂಕಾರವನ್ನು ನೋಡಲು ಬರುವವರು ಬೀದಿಯ ಆರಂಭದಲ್ಲಿ ಸಿಗುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಬಹುದು. ಇದರಿಂದ ಬೆರಗುಗೊಳಿಸುವ ಬೆಳಕಿನಲ್ಲಿ ಮೂಡಿ ಬಂದಿರುವ ರಾಮಾಯಣ ಕಥಾನಕವನ್ನು ವೀಕ್ಷಿಸಬಹುದು.
ವಿಡಿಯೊ ವೀಕ್ಷಿಸಿ:
ಇದನ್ನೂ ಓದಿ: Viral Video: ಉದ್ಯೋಗಿಗಳಿಗೆ ಈ ಮಾಲೀಕ ನೀಡಿದ ಉಡುಗೊರೆ ಕೇಳಿದ್ರೆ ಶಾಕ್ ಆಗ್ತೀರಾ; ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ
ಪ್ರತಿಯೊಂದು ಮನೆಯಲ್ಲಿಯೂ ರಾಮನ ವನವಾಸ ಮತ್ತು ಸೀತೆಯ ಅಪಹರಣದಿಂದ ಹಿಡಿದು ರಾವಣನ ಮೇಲಿನ ಅದ್ಭುತ ವಿಜಯದವರೆಗಿನ ವಿಭಿನ್ನ ಅಧ್ಯಾಯಗಳನ್ನು ಪ್ರದರ್ಶಿಸಲಾಗುತ್ತಿದೆ. ಪ್ರತಿ ವಿವರವು ಹಬ್ಬದ ಸಂದೇಶವನ್ನು, ಕತ್ತಲೆಯ ಮೇಲೆ ಬೆಳಕು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರಿ ಹೇಳುತ್ತದೆ. ಈ ರೀತಿ ವಿನ್ಯಾಸಗೊಳಿಸಲಾಗಿದೆ.
ಇದರ ವಿಡಿಯೊಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದು ಭಾರತೀಯ ಸಂಸ್ಕೃತಿಯನ್ನು ಆಚರಿಸಲು ಇರುವ ಸುಂದರ ಮಾರ್ಗ. ಇತರ ಸಮುದಾಯಗಳು ಸಹ ಇದನ್ನು ಮೆಚ್ಚಬಹುದು ಎಂದು ಬಳಕೆದಾರರು ಬರೆದಿದ್ದಾರೆ. ಸ್ಥಳೀಯರು ಮತ್ತು ಪ್ರವಾಸಿಗರು ಈ ಅದ್ಭುತವನ್ನು ವೀಕ್ಷಿಸಲು, ಫೋಟೊ ಸೆರೆ ಹಿಡಿಯಲು ಮತ್ತು ಹಬ್ಬದ ವಾತಾವರಣವನ್ನು ಕಣ್ತುಂಬಿಕೊಳ್ಳಲು ಈ ಬೀದಿಗೆ ಭೇಟಿ ನೀಡುತ್ತಿದ್ದಾರೆ.
ಈ ದೀಪಾವಳಿ ಹಬ್ಬದ ಸಂದೇಶವು ಗಡಿಗಳನ್ನು ಮೀರಿದೆ ಎಂಬುದನ್ನು ಸಿಡ್ನಿ ಸಾಬೀತುಪಡಿಸಿದೆ. ಸೃಜನಶೀಲತೆ, ಸಮುದಾಯ ಮನೋಭಾವ ಮತ್ತು ಬೆಳಕಿನ ಮೂಲಕ ಭಾರತೀಯ ಮೂಲದ ಜನರು ಸಿಡ್ನಿಯ ಬೀದಿಯನ್ನು ಸುಂದರವಾಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಹಬ್ಬಗಳನ್ನು ಭಾರತಕ್ಕಿಂತ ವಿದೇಶಗಳಲ್ಲಿ ಉತ್ತಮವಾಗಿ ಆಚರಿಸಲಾಗುತ್ತದೆ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.