Viral Video: ಉದ್ಯೋಗಿಗಳಿಗೆ ಈ ಮಾಲೀಕ ನೀಡಿದ ಉಡುಗೊರೆ ಕೇಳಿದ್ರೆ ಶಾಕ್ ಆಗ್ತೀರಾ; ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ
Pharma company employees received SUVs gifts: ದೀಪಾವಳಿ ಹಬ್ಬದ ಸಮಯದಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡಿದೆ. ಕೆಲವು ಕಂಪನಿಯ ಉದ್ಯೋಗಿಗಳು ತಮ್ಮಗೆ ಸಿಹಿತಿಂಡಿ ಕೂಡ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಈ ಔಷಧ ಕಂಪನಿಯ ಮಾಲೀಕರು ಐಷಾರಾಮಿ ಉಡುಗೊರೆ ನೀಡಿದ್ದಾರೆ.

-

ಚಂಡೀಗಢ: ದೀಪಾವಳಿ ಹಬ್ಬದ ಅಂಗವಾಗಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗಿಫ್ಟ್ ನೀಡುತ್ತಾರೆ. ಸಿಹಿತಿಂಡಿ, ಪಟಾಕಿ, ಕುಕ್ಕರ್ ಇತ್ಯಾದಿ ಉಡುಗೊರೆ ನೀಡಬಹುದು. ಫಾರ್ಮಾ ಕಂಪನಿಯ ಮಾಲೀಕರು ದೀಪಾವಳಿ (Deepavali) ಉಡುಗೊರೆಯಾಗಿ ತಮ್ಮ ಉದ್ಯೋಗಿಗಳಿಗೆ 51 ಐಷಾರಾಮಿ ಕಾರುಗಳನ್ನು ಹಸ್ತಾಂತರಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ಬೆರಗುಗೊಂಡಿದ್ದಾರೆ. ವೈರಲ್ ವಿಡಿಯೊದಲ್ಲಿರುವ ಮಾಲೀಕರು MITS ಗುಂಪಿನ ಸಂಸ್ಥಾಪಕ ಮತ್ತು ಅಧ್ಯಕ್ಷ ಎಂಕೆ ಭಾಟಿಯಾ, ಅವರು ತಮ್ಮ ಉದ್ಯೋಗಿಗಳಿಗೆ ದುಬಾರಿ ಸ್ಕಾರ್ಪಿಯೋ ಎಸ್‌ಯುವಿಗಳನ್ನು ಗಿಫ್ಟ್ ಮಾಡಿದ್ದಾರೆ.
ಕಂಪನಿಯು ತನ್ನ ಚಂಡೀಗಢ ಕೇಂದ್ರದಲ್ಲಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿದ ನಂತರ MITS ಗುಂಪಿನ ಅತ್ಯುತ್ತಮ ಕಾರ್ಯಕ್ಷಮತೆಯ ಉದ್ಯೋಗಿಗಳಿಗೆ ಐಷಾರಾಮಿ SUV ಗಳನ್ನು ಬಹುಮಾನವಾಗಿ ನೀಡಲಾಯಿತು. ಭಾಟಿಯಾ ಈ ಹಿಂದೆಯೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂದು ತಿಳಿದುಬಂದಿದೆ.
ದಿವಾಳಿತನದಿಂದ ಚೇತರಿಸಿಕೊಂಡ MITS ಮಾಲೀಕ, ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಭಾಟಿಯಾ ಅವರ ಈ ಕೊಡುಗೆಯು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿರುವ ಭಾಟಿಯಾ, ಈ ಹಂತವನ್ನು ತಲುಪಲು ಬಹಳ ಶ್ರಮಪಟ್ಟಿದ್ದರು. ಅವರು ನಡೆದು ಬಂದ ಹಾದಿ ಅದು ಹೂವಿನ ಹಾದಿಯಾಗಿರಲಿಲ್ಲ. ಕಲ್ಲು-ಮುಳ್ಳುಗಳ ಹಾದಿಯಾಗಿತ್ತು. ಇಂದು MITS ಗುಂಪಿನ ಹೆಮ್ಮೆಯ ಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಭಾಟಿಯಾ, ಅವರ ವೈದ್ಯಕೀಯ ಕಂಪನಿಯು ಭಾರಿ ನಷ್ಟವನ್ನು ಅನುಭವಿಸಿದ ನಂತರ 2002ರಲ್ಲಿ ದಿವಾಳಿತನವನ್ನು ಎದುರಿಸಿದರು. ನಂತರ 2015 ರಲ್ಲಿ MITS ನಲ್ಲಿ ಯಶಸ್ಸನ್ನು ಕಂಡುಕೊಂಡರು ಮತ್ತು ಇಂದು ಅವರ ಹೆಸರಿನಲ್ಲಿ 12 ಕಂಪನಿಗಳಿವೆ.
ವಿಡಿಯೊ ವೀಕ್ಷಿಸಿ:
51 cars (including SUVs, Scorpios) gifted to staff of a Pharma company in Chandigarh on the occasion of Diwali!
— Keh Ke Peheno (@coolfunnytshirt) October 20, 2025
Why didn't we get such employers?😭 pic.twitter.com/RgKI9fvj8K
ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ನೆಲೆಸಿರುವ ಭಾಟಿಯಾ, ಭಾರತದ ವಿವಿಧ ರಾಜ್ಯಗಳಲ್ಲಿ MITS ಗುಂಪನ್ನು ವಿಸ್ತರಿಸಲು ಯೋಜಿಸಿದ್ದರು. ವಿದೇಶಿ ಮಾರುಕಟ್ಟೆಗೂ ಸಹ ಪ್ರವೇಶಿಸುವ ಗುರಿಯನ್ನು ಹೊಂದಿದ್ದರು. 2023 ರಲ್ಲಿ ಮೆಡಿಕಲ್ ಡೈಲಾಗ್ಸ್ ಜೊತೆಗಿನ ಸಂವಾದದಲ್ಲಿ, ನಾವು ಈಗಾಗಲೇ ಕೆನಡಾ, ಲಂಡನ್ ಮತ್ತು ದುಬೈನಲ್ಲಿ ಪರವಾನಗಿಗಳನ್ನು ಪಡೆದಿದ್ದೇವೆ ಎಂದು ಭಾಟಿಯಾ ದೃಢಪಡಿಸಿದರು. ತಮ್ಮ ವಿಸ್ತರಣಾ ಯೋಜನೆಗಳ ಭಾಗವಾಗಿ, ಭಾಟಿಯಾ ಐದು ಹೊಸ ನಿರ್ದೇಶಕರ ನೇಮಕವನ್ನು ಘೋಷಿಸಿದ್ದರು.
ಇದನ್ನೂ ಓದಿ: Viral News: ಆಧ್ಯಾತ್ಮಿಕ ಕೋರ್ಸ್‌ಗೆ ಸೇರಿದ್ದ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 3 ಕೋಟಿ ರೂ.!
MITS ಸಮೂಹದ ಸಂಸ್ಥಾಪಕರಾಗಿರುವ ಭಾಟಿಯಾ ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 51 ಐಷಾರಾಮಿ ಕಾರುಗಳನ್ನು ನೀಡುವ ವಿಡಿಯೊ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಕೆಲವರು ಅಸೂಯೆಪಟ್ಟರೆ, ಇನ್ನೂ ಕೆಲವರನ್ನು ಅನುಮಾನಾಸ್ಪದವನ್ನಾಗಿಸಿದೆ. ನಾನು ಮೈಕ್ರೋಬಯಾಲಜಿಯಲ್ಲಿ ಪದವಿ ಪಡೆದಿದ್ದೇನೆ. ಈ ಕಂಪನಿಗೆ ಸೇರಲು ಯಾವುದೇ ಅವಕಾಶವಿದೆಯೇ ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದರು.
ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ (ಗುಣಮಟ್ಟದ ಭರವಸೆ) ಔಷಧಿಗಳನ್ನು ಉತ್ಪಾದಿಸುವ ಮೂಲಕ ನೀವು ಲಾಭ ಗಳಿಸುತ್ತಿರುವವರೆಗೆ, ಆ ಲಾಭವನ್ನು ನಿಮ್ಮ ಉದ್ಯೋಗಿಗಳಿಗೆ ಕಾರುಗಳು, ಬಂಗಲೆಗಳು, ಹಡಗುಗಳನ್ನು ನೀಡಲು ಬಳಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಗುಣಮಟ್ಟವನ್ನು ಹಾಳು ಮಾಡುವ ಮೂಲಕ ಲಾಭ ಗಳಿಸಿದಾಗ ಸಮಸ್ಯೆ ಉದ್ಭವಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.