ಬೆಂಗಳೂರು, ಡಿ. 23: ಇತ್ತೀಚಿನ ದಿನದಲ್ಲಿ ಆನ್‌ಲೈನ್ ಮಾರ್ಕೆಂಟಿಗ್‌ನತ್ತ ಬಹುತೇಕ ಗ್ರಾಹಕರು ಆಕರ್ಷಿತರಾಗಿದ್ದಾರೆ. ಹಣ್ಣು, ತರಕಾರಿ, ಮೀನು, ಮೊಟ್ಟೆ , ಮಾಂಸದಂತಹ ಆಹಾರ ಸಾಮಗ್ರಿಯಿಂದ ಹಿಡಿದು, ಸಣ್ಣ ಪುಟ್ಟ ವಸ್ತುಗಳ ಖರೀದಿಗೂ ಆನ್‌ಲೈನ್ ಮಾರ್ಕೆಂಟಿಗ್ ಅನ್ನೇ ಅವಲಂಬಿಸಿದ್ದಾರೆ. ಬ್ಲಿಂಕ್‌ಇಟ್, ಜಿಯೋ ಮಾರ್ಟ್, ರಿಲಯನ್ಸ್ ಡಿಜಿಟಲ್ ಮಾರ್ಟ್, ಇನ್‌ಸ್ಟಾಮಾರ್ಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳು ಜನಪ್ರಿಯವಾಗಿವೆ. ಗ್ರಾಹಕರ ಮನೆ ಬಾಗಿಲಿಗೆ ಸರಕುಗಳನ್ನು ಕ್ಷಣ ಮಾತ್ರದಲ್ಲಿ ಒದಗಿಸುವ ಈ ಸೇವೆಯಿಂದ ಗ್ರಾಹಕರ ಅತ್ಯಮೂಲ್ಯ ಸಮಯ ಉಳಿಯುತ್ತದೆ. ಗ್ರಾಹಕರು ತಾವು ಆರ್ಡರ್ ಮಾಡಿದ ವಸ್ತುಗಳಿಗೆ ಸ್ವೀಕರಿಸುವಾಗ ಡೆಲಿವರಿ ಬಾಯ್‌ಗೆ ಟಿಪ್ಸ್ ನೀಡುತ್ತಾರೆ. ಇದೀಗ ಈ ವರ್ಷ ಆನ್‌ಲೈನ್ ಶಾಪಿಂಗ್‌ನಲ್ಲಿ ಸಂಭವಿಸಿದ ಕುತೂಹಲಕಾರಿ ಘಟನೆಗಳ ವಿವರ ಹೊರ ಬಿದ್ದಿದೆ. ಬೆಂಗಳೂರಿನಲ್ಲಿ ಇನ್‌ಸ್ಟಾಮಾರ್ಟ್ ಬಳಕೆದಾರರೊಬ್ಬರು ಬರೋಬ್ಬರಿ 68,600 ರು. ಟಿಪ್ಸ್ ಅನ್ನು ಪಾವತಿ ಮಾಡಿದ್ದಾರೆ. ಸದ್ಯ ಈ ಸುದ್ದಿ ಭಾರಿ ವೈರಲ್ (Viral News) ಆಗಿದೆ.
ಭಾರತೀಯ ಆನ್‌ಲೈನ್ ಮಾರುಕಟ್ಟೆಯ ಜನಪ್ರಿಯ ಆ್ಯಪ್ ಇನ್‌ಸ್ಟಾಮಾರ್ಟ್ ತನ್ನ ತ್ವರಿತ ಸೇವೆಯಿಂದಲೇ ಗ್ರಾಹಕರ ಮನ ಗೆದ್ದಿದೆ. ಬೆಂಗಳೂರಿನಲ್ಲಿ ಇನ್‌ಸ್ಟಾಮಾರ್ಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು ಈ ವರ್ಷ ವಿತರಣಾ ಪಾಲುದಾರರಿಗೆ (ಡೆಲಿವರಿ ಮಾಡುವವರಿಗೆ) ಒಬ್ಬರು 68,600 ರು.ಗಳನ್ನು ಟಿಪ್ಸ್ ನೀಡಿದ್ದಾರೆ. ಈ ಮೂಲಕ ಭಾರತದಲ್ಲೇ ಅತ್ಯಧಿಕ ಟಿಪ್ಸ್ ನೀಡಿದವರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೌ ಇಂಡಿಯಾ ಇನ್‌ಸ್ಟಾಮಾರ್ಟೆಡ್ ತಿಳಿಸಿದೆ.
ವರ್ಷದಿಂದ ವರ್ಷಕ್ಕೆ ಬಳಕೆದಾರರ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ. ಬಳಕೆದಾರರ ಉದಾರತೆಯ ಗುಣ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಇನ್‌ಸ್ಟಾಮಾರ್ಟ್ ತನ್ನ ವರದಿಯಲ್ಲಿ ತಿಳಿಸಿದೆ. ಟಿಪ್ಸ್ ನೀಡುವ ವಿಚಾರದಲ್ಲಿ ಬೆಂಗಳೂರಿನ ನಂತರ ಸ್ಥಾನದಲ್ಲಿ ಚೆನ್ನೈ ಇದೆ. ಚೆನ್ನೈ ಬಳಕೆದಾರರು 59,505 ರು. ಟಿಪ್ಸ್ ನೀಡಿದ್ದಾರೆ ಎಂದು ವರದಿಯೊಂದು ವಿವರಿಸಿದೆ.
25 ಸಾವಿರ ರೂ.ಗೆ ಎಐ ಶಿಕ್ಷಕಿ ಸೃಷ್ಟಿಸಿದ 17 ವರ್ಷದ ವಿದ್ಯಾರ್ಥಿ; ರೋಬೋಟ್ ಉಪನ್ಯಾಸದ ವಿಡಿಯೊ ವೈರಲ್
ಗ್ರಾಹಕರೊಬ್ಬರು 4.3 ಲಕ್ಷ ರುಪಾಯಿ ಮೌಲ್ಯದ ಐಫೋನ್ ಖರೀದಿಸಿದ್ದಾರೆ. ಚೆನ್ನೈಯ ಬಳಕೆದಾರರೊಬ್ಬರು ಈ ವರ್ಷ 228 ಕಾಂಡೋಮ್ ಖರೀದಿಸಿದ್ದು, ಇದಕ್ಕಾಗಿ 1 ಲಕ್ಷ ರುಪಾಯಿಗಿಂತ ಅಧಿಕ ಖರ್ಚು ಮಾಡಿದ್ದಾರೆ. ಪ್ರೇಮಿಗಳ ದಿನದಂದು ಭಾರತೀಯ ಗ್ರಾಹಕರು ಪ್ರತಿ ನಿಮಿಷಕ್ಕೆ ಸುಮಾರು 666 ಗುಲಾಬಿಗಳನ್ನು ಆರ್ಡರ್ ಮಾಡುತ್ತಿದ್ದರು.
ಇತ್ತೀಚೆಗೆ ಆನ್‌ಲೈನ್‌ನಲ್ಲಿ ಚಿನ್ನದ ಆಭರಣ ಶಾಪಿಂಗ್ ಮಾಡುವ ಪ್ರಮಾಣವೂ ಹೆಚ್ಚಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 400ರಷ್ಟು ಆನ್‌ಲೈನ್ ಆರ್ಡರ್ ಮಾಡುವ ಪ್ರಮಾಣ ಅಧಿಕವಾಗಿರುವುದು ಅಂಕಿ-ಅಂಶದಿಂದ ತಿಳಿದು ಬಂದಿದೆ. ಚೆನ್ನೈಯ ಗ್ರಾಹಕರು ಸಾಕುಪ್ರಾಣಿಗಳ ಆರೈಕೆಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಹೆಚ್ಚಾಗಿ ಆನ್‌ಲೈನ್‌ನಲ್ಲೇ ಆರ್ಡರ್ ಮಾಡುತ್ತಿದ್ದು 2.41 ಲಕ್ಷ ರುಪಾಯಿ ಇದಕ್ಕಾಗಿ ಖರ್ಚು ಮಾಡಿದ್ದಾರೆ.