ಲಖನೌ: ಕುರ್ಚಿಗಾಗಿ ರಾಜಕೀಯ ನಾಯಕರು ಹೊಡೆದಾಡಿಕೊಳ್ಳುವುದು ಸರ್ವೇಸಾಮಾನ್ಯ. ಇತ್ತೀಚೆಗೆ ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ಕೂಡ ಮುಖ್ಯ ಅತಿಥಿಗಳ ಕುರ್ಚಿಗಾಗಿ ಬಿಜೆಪಿ ನಾಯಕರು ಹೊಡೆದಾಡಿಕೊಂಡಿದ್ದಾರೆ. ಛಜಲತ್ ಬ್ಲಾಕ್‍ನಲ್ಲಿ ಗುರುವಾರ(ಮಾರ್ಚ್ 27 ) ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ಎಂಟು ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮತ್ತು ಬ್ಲಾಕ್ ಅಧ್ಯಕ್ಷರ ನಡುವೆ ಮುಖ್ಯ ಅತಿಥಿಗಳ ಕುರ್ಚಿಗಾಗಿ ಜಗಳ ನಡೆದಿದೆ ಮತ್ತು ಈ ಜಗಳ ತಾರಕಕ್ಕೇರಿ ಇಬ್ಬರು ನಾಯಕರ ಬೆಂಬಲಿಗರು ಸಹ ಈ ಜಗಳದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಬಿಜೆಪಿ ಶಾಸಕ ರಾಜೇಶ್ ಕುಮಾರ್ ಸಿಂಗ್ ಮತ್ತು ಬ್ಲಾಕ್ ಅಧ್ಯಕ್ಷ ರಾಜ್‌ಪಾಲ್ ಸಿಂಗ್ ಅವರು ಪರಸ್ಪರ ಹೊಡೆದಾಡುತ್ತಿರುವ ವಿಡಿಯೊ ಈಗ ವೈರಲ್(Viral Video)ಆಗಿದೆ.
ಯೋಗಿ ಸರ್ಕಾರ 8 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆ, ಛಜಲತ್ ಬ್ಲಾಕ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಆಕಾಶ್ ಪಾಲ್, ಮಾಜಿ ಶಾಸಕ ರಾಜೇಶ್ ಸಿಂಗ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಆದರೆ ರಾಜೇಶ್ ಸಿಂಗ್ ಕಾರ್ಯಕ್ರಮಕ್ಕೆ ಬಂದಾಗ ಬ್ಲಾಕ್ ಮುಖ್ಯಸ್ಥ ರಾಜ್‌ಪಾಲ್ ಸಿಂಗ್ ಈಗಾಗಲೇ ಮುಖ್ಯ ಅತಿಥಿಯ ಕುರ್ಚಿಯಲ್ಲಿ ಕುಳಿತಿರುವುದನ್ನು ನೋಡಿದ್ದಾರೆ. ಈ ವಿಷಯದ ಬಗ್ಗೆ ಇಬ್ಬರ ನಡುವೆ ವಾಗ್ವಾದ ಶುರುವಾಯಿತು. ನಂತರ ಅದು ಜಗಳಕ್ಕೆ ತಿರುಗಿತು. ಇಬ್ಬರೂ ನಾಯಕರು ವೇದಿಕೆಯಲ್ಲಿದ್ದ ಜನರ ಮುಂದೆ ಪರಸ್ಪರ ಕೆನ್ನೆಗೆ ಹೊಡೆದುಕೊಂಡು ಪರಸ್ಪರರ ಕೂದಲನ್ನು ಎಳೆದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ನೀರಿನ ಬಾಟಲಿಗಳು ಮತ್ತು ಕುರ್ಚಿಗಳನ್ನು ಎಸೆದಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕುರ್ಚಿಗಾಗಿ ಬಿಜೆಪಿ ನಾಯಕರು ಕಿತ್ತಾಡಿಕೊಂಡ ವಿಡಿಯೊ ಇಲ್ಲಿದೆ
ಈ ಘಟನೆಯ ನಂತರ, ಬ್ಲಾಕ್ ಮುಖ್ಯಸ್ಥ ರಾಜ್‌ಪಾಲ್ ಸಿಂಗ್ ಮಾತನಾಡಿ, "ಸರ್ಕಾರ 8 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆ ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. ಆದರೆ ಮಾಜಿ ಶಾಸಕ ರಾಜೇಶ್ ಸಿಂಗ್ ಯಾವುದೇ ಆಹ್ವಾನವಿಲ್ಲದಿದ್ದರೂ ಅಲ್ಲಿಗೆ ಬಂದಿದ್ದಾರೆ. ಅವರು ನನ್ನನ್ನು ನಿಂದಿಸಿದ್ದಾರೆ ನಾನು ಪ್ರತಿಭಟಿಸಿದಾಗ ನನ್ನ ಮೇಲೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಮಾಜಿ ಶಾಸಕ ರಾಜೇಶ್ ಸಿಂಗ್ ಚುನ್ನು ಮಾತನಾಡಿ, ಈ ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ ನಾನು ಬಂದಾಗ, ಬ್ಲಾಕ್ ಮುಖ್ಯಸ್ಥ ರಾಜ್‌ಪಾಲ್ ಸಿಂಗ್ ಮುಖ್ಯ ಅತಿಥಿಯ ಕುರ್ಚಿಯಲ್ಲಿ ಕುಳಿತೇ ಇದ್ದರು. ನಾನು ಕಾರಣವನ್ನು ಕೇಳಿದಾಗ, ತಾನು ಬ್ಲಾಕ್ ಮುಖ್ಯಸ್ಥ ಎಂದೆಲ್ಲಾ ಹೇಳಿದ್ದಾರೆ. ಅಷ್ಟೇ ಅಲ್ಲದೇ, ನನ್ನೊಂದಿಗೆ ಇದ್ದ ಬಿಜೆಪಿ ಮಹಿಳಾ ಮೋರ್ಚಾದ ಮಂಡಲ ಅಧ್ಯಕ್ಷೆಯನ್ನು ವೇದಿಕೆ ಹತ್ತದಂತೆ ತಡೆದಿದ್ದಾರೆ ಇದು ವಿವಾದಕ್ಕೆ ಕಾರಣವಾಯಿತು" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಟರ್ಕಿಯಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ; ಪೊಲೀಸರ ಹೊಡೆತಕ್ಕೆ ಹೆದರಿ ಓಡಿ ಹೋದ ಪಿಕಾಚು ವೇಶಧಾರಿ, ವಿಡಿಯೋ ವೈರಲ್
ಈ ಪ್ರಕರಣದ ಕುರಿತು ಪೊಲೀಸರು ಇನ್ನೂ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲವಂತೆ. ಈ ಘಟನೆಯ ಬಗ್ಗೆ ದೂರು ಸ್ವೀಕರಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.