ಮುಂಬೈ: ಆರ್‌ಎಸ್‌ಎಸ್ (RSS) ಅನ್ನು ಅಣಕಿಸುವ ಟಿ ಶರ್ಟ್ (T-shirt mocking RSS) ಧರಿಸಿದ ಹಾಸ್ಯ ನಟ ಕುನಾಲ್ ಕಮ್ರಾ (Comedian Kunal Kamra) ಅವರು ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಇದರ ಫೋಟೋವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದು ಬಿಜೆಪಿ (BJP) ಮತ್ತು ಶಿವಸೇನಾ (Shiva sena) ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಹಾಸ್ಯ ನಟ ಕುನಾಲ್ ಕಮ್ರಾ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಕುನಾಲ್ ಕಮ್ರಾ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ (PM Narendra Modi), ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರನ್ನು ಟೀಕಿಸಿ ವಿವಾದ ಉಂಟು ಮಾಡಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅನ್ನು ಅಣಕಿಸುವ ಟಿ-ಶರ್ಟ್ ಧರಿಸಿ ಹಾಸ್ಯನಟ ಕುನಾಲ್ ಕಮ್ರಾ ಅವರು ಈ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಭಾರಿ ವಿವಾದವನ್ನು ಉಂಟು ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪೊಲೀಸ್ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದೆ.
ಇದನ್ನೂ ಓದಿ: ಪಲಾಶ್ ಮುಚ್ಚಲ್ ಅಕ್ರಮ ಸಂಬಂಧ; ಸ್ಮೃತಿ ಮಂಧನಾ ಮದುವೆ ರದ್ದು ಸಾಧ್ಯತೆ!
ಈ ಹಿಂದೆ ಕಮ್ರಾ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಟೀಕೆ ಮಾಡಿ ವಿವಾದ ಎಬ್ಬಿಸಿದ್ದರು. ಇದೀಗ ಅವರು ಆರ್ ಎಸ್ ಎಸ್ ವಿರುದ್ಧ ಮಾಡಿರುವ ಪೋಸ್ಟ್ ಬಿಜೆಪಿ ಮತ್ತು ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿದೆ. ಕಾಮ್ರಾ ಅವರು ಇತ್ತೀಚೆಗೆ ಮಾಡಿರುವ ಈ ಪೋಸ್ಟ್‌ನಲ್ಲಿ ಆರ್‌ಎಸ್‌ಎಸ್ ಅನ್ನು ಉಲ್ಲೇಖಿಸುವ ಚಿತ್ರದೊಂದಿಗೆ "ಕಾಮಿಡಿ ಕ್ಲಬ್‌ನಲ್ಲಿ ಕ್ಲಿಕ್ ಆಗಿಲ್ಲ" ಎಂದು ಬರೆದಿದ್ದಾರೆ. ಇದರಲ್ಲಿ ಅವರು ಧರಿಸಿರುವ ಟಿ ಶರ್ಟ್ ನಲ್ಲಿ ಮೊದಲ 'ಆರ್' ಅಕ್ಷರ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಇದು ಮೇಲ್ನೋಟಕ್ಕೆ 'ಪಿಎಸ್‌ಎಸ್' ಎಂಬಂತೆ ಕಾಣುತ್ತದೆಯಾದರೂ ಇದನ್ನು ಆರ್‌ಎಸ್‌ಎಸ್ ಎಂದೇ ಓದಲಾಗುತ್ತದೆ ಎಂದು ಬಿಜೆಪಿ ಹೇಳಿದೆ.
ಕಮ್ರಾ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಚಂದ್ರಶೇಖರ್ ಬವಾಂಕುಲೆ, ಇದು ಆಕ್ಷೇಪಾರ್ಹ ವಿಷಯ. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಮ್ರಾ ಅವರು ಸೋಮವಾರ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ನಾಯಿಯ ಚಿತ್ರದೊಂದಿಗೆ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಎಂದು ಬರೆದಿರುವ ಟಿ-ಶರ್ಟ್ ಅನ್ನು ಧರಿಸಿರುವ ಚಿತ್ರವಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನಾ ಕ್ಯಾಬಿನೆಟ್ ಸಚಿವ ಸಂಜಯ್ ಶಿರ್ಸಾತ್, ಕಮ್ರಾ ಅವರ ಈ ಪೋಸ್ಟ್‌ಗೆ ಆರ್‌ಎಸ್‌ಎಸ್ ಸರಿಯಾಗಿ ಉತ್ತರಿಸಬೇಕು ಎಂದು ಹೇಳಿದ್ದಾರೆ.
ಕಮ್ರಾ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡು ಟಿಕೆ ಮಾಡಿದ್ದರು. ಇದೀಗ ಅವರು ಆರ್‌ಎಸ್‌ಎಸ್ ಮೇಲೆ ದಾಳಿ ಮಾಡುವ ಧೈರ್ಯ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಬೇಕಾಗಿದೆ. ಏಕನಾಥ್ ಶಿಂಧೆ ಅವರನ್ನು ಟೀಕಿಸಿದಾಗ ಶಿವಸೇನೆ ಅದಕ್ಕೆ ಪ್ರತಿಕ್ರಿಯಿಸಿತ್ತು. ಇದೀಗ ಅವರು ಆರ್‌ಎಸ್‌ಎಸ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡುವ ಧೈರ್ಯ ಮಾಡಿದ್ದಾರೆ ಎಂದು ಶಿರ್ಸಾತ್ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಕಾರು ಸ್ಫೋಟ ಪ್ರಕರಣ: ಏಳನೇ ಆರೋಪಿ NIA ಬಲೆಗೆ
ಕಮ್ರಾ ಅವರು ಜನಪ್ರಿಯ ಹಿಂದಿ ಚಲನಚಿತ್ರದ ಹಾಡಿನ ಸಾಹಿತ್ಯವನ್ನು ಶಿಂಧೆ ಅವರ ರಾಜಕೀಯ ವೃತ್ತಿಜೀವನಕ್ಕೆ ಹೋಲಿಸಿ ಹಾಸ್ಯ ಮಾಡಿದ್ದರು. ಬಳಿಕ ಶಿವಸೇನಾ ಸದಸ್ಯರು ಅವರ ಮುಂಬೈನ ಖಾರ್ ಪ್ರದೇಶದಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಮತ್ತು ಹೊಟೇಲ್ ಹೋಟೆಲ್ ಅನ್ನು ಧ್ವಂಸಗೊಳಿಸಿದ್ದರು.